ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಗೆ ಸಿದ್ದು ಚಾಲನೆ ನಿರುದ್ಯೋಗಿಗಳಿಗೆ ಯುವನಿಧಿ

| Published : Jan 13 2024, 01:33 AM IST

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಗೆ ಸಿದ್ದು ಚಾಲನೆ ನಿರುದ್ಯೋಗಿಗಳಿಗೆ ಯುವನಿಧಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಲ್ಲಿ ಐದನೆಯ ಯುವನಿಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಇದರಡಿಯಲ್ಲಿ ಪದವೀಧರರಿಗೆ 3000 ರು. ಡಿಪ್ಲೊಮಾ ಮಾಡಿದವರಿಗ 1500 ರು. ತಿಮಗಳಿಗೆ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಿರುದ್ಯೋಗಿ ಪದವೀಧರರಿಗೆ ಹಣಕಾಸು ನೆರವು ನೀಡುವ ರಾಜ್ಯ ಸರ್ಕಾರದ ಮಹತ್ವದ ‘ಯುವನಿಧಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಈ ಮೂಲಕ ರಾಜ್ಯ ಸರ್ಕಾರ ಘೋಷಿಸಿದ್ದ ಐದನೇ ಹಾಗೂ ಕೊನೆಯ ಗ್ಯಾರಂಟಿ ಯೋಜನೆಯೂ ಅನುಷ್ಠಾನಗೊಂಡಂತಾಗಿದೆ.

ಈ ಗ್ಯಾರಂಟಿ ಯೋಜನೆಯಡಿ ಪದವೀಧರರಿಗೆ ₹3 ಸಾವಿರ ಮತ್ತು ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ ₹1,500 ನೀಡಲಾಗುತ್ತದೆ. ಪದವಿ ಪಡೆದ 180 ದಿನಗಳ ಬಳಿಕವೂ ಕೆಲಸ ಸಿಗದೇ ಇದ್ದಲ್ಲಿ ಮಾತ್ರ ಯುವಕರು ಈ ಯೋಜನೆಗೆ ಅರ್ಹರಾಗುತ್ತಾರೆ. ಒಮ್ಮೆ ಉದ್ಯೋಗ ಸಿಕ್ಕ ಬಳಿಕ ಈ ಯೋಜನೆಯ ಲಾಭ ನಿಂತು ಹೋಗಲಿದೆ.

ಈ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಡಿ ನಗದು ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಯುವ ಸಮುದಾಯಕ್ಕೆ ಕೌಶಲ್ಯಭಿವೃದ್ಧಿ ತರಬೇತಿ ನೀಡುವ ಸಂಬಂಧ ತಜ್ಞರ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಈ ಸಮಿತಿಯು ಯುವಕ, ಯುವತಿಯರಿಗೆ ಯಾವ ರೀತಿಯ ತರಬೇತಿ ಮತ್ತು ಎಷ್ಟು ಅವಧಿಯ ತರಬೇತಿ ನೀಡಬೇಕು ಎಂಬ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಅದೇ ರೀತಿ ತರಬೇತಿ ಪಡೆದ ಯುವಸಮೂಹಕ್ಕೆ ಉದ್ಯೋಗ ಒದಗಿಸಲು ಉದ್ಯೋಗ ಮೇಳ ಕೂಡ ಆಯೋಜಿಸಲಾಗುತ್ತದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿ ಯುವ ಸಮುದಾಯದಲ್ಲಿ ಆತ್ಮಶಕ್ತಿ ಹೆಚ್ಚಿಸುವ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ಶಿವಮೊಗ್ಗದ ಮಟ್ಟಿಗೆ ಐತಿಹಾಸಿಕ ದಿನ:

ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳ ಜೊತೆಗೆ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನೂ ಘೋಷಿಸಿದ್ದೆವು. ಸರ್ಕಾರ ಅಧಿಕಾರ ಸ್ವೀಕರಿಸಿದ ದಿನವೇ ಮೊದಲ ಕ್ಯಾಬಿನೆಟ್‌ ಸಭೆ ನಡೆಸಿ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವ ನಿರ್ಧಾರ ಪ್ರಕಟಿಸಲಾಯಿತು. ನಾಲ್ಕು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದು, ಕೊನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಈಗ ಚಾಲನೆ ನೀಡುತ್ತಿದ್ದೇವೆ. ಇದು ಶಿವಮೊಗ್ಗದ ಮಟ್ಟಿಗೆ ಐತಿಹಾಸಿಕ ದಿನ ಎಂದರು.

ಹಸಿದವರ ಮುಖದಲ್ಲೀಗ ನೆಮ್ಮದಿ:

ಇಂದು ಬೆಲೆ ಏರಿಕೆ, ಆರ್ಥಿಕ ಅಸಮಾನತೆಯಿಂದ ಜನ ತತ್ತರಿಸಿದ್ದಾರೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಬಡವರು, ರೈತರು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕಾಗಿದ್ದು, ಇದೇ ಉದ್ದೇಶದಿಂದ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದಾಗಿ ಇಂದು ಹಸಿದವರ ಮುಖದಲ್ಲಿ ನೆಮ್ಮದಿ ಕಾಣುತ್ತಿದೆ ಎಂದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಇರುವುದಿಲ್ಲವೋ ಅಂಥ ಧರ್ಮದಲ್ಲಿ ನಂಬಿಕೆ ಇಲ್ಲ ಎಂಬ ವಿವೇಕಾನಂದರ ಮಾತನ್ನೇ ನಮ್ಮ ಸರ್ಕಾರ ಕೂಡ ನಂಬಿದೆ. ಅಂಥ ಧರ್ಮ ಧರ್ಮವೇ ಅಲ್ಲ. ವಿವೇಕಾನಂದರು ಯುವಕರ ಬಗ್ಗೆ ಕಾಳಜಿ ವಹಿಸಿದ್ದರು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕೂಡ ಯುವಕರ ಕುರಿತು ವಿಶೇಷ ಯೋಜನೆ ರೂಪಿಸಿದ್ದರು. ಆದರೆ, ದುರದೃಷ್ಟವೆಂದರೆ 2004-05ರಲ್ಲಿ ನಿರುದ್ಯೋಗ ಸಮಸ್ಯೆ ಶೇ.5.5ರಷ್ಟು ಇದ್ದರೆ, ಇಂದು ಇದು ಶೇ.10.5ರಷ್ಟಕ್ಕೆ ಏರಿಕೆಯಾಗಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಅಂಬೇಡ್ಕರ್‌ ಮಾತಲ್ಲಿ ನಂಬಿಕೆ:

ಯುವಕರು ತಮಗೆ ಭವಿಷ್ಯ ಇಲ್ಲ ಎಂದು ಭ್ರಮನಿರಸನ ಆಗುತ್ತಿದ್ದಾರೆ. ಇದನ್ನು ನೀಗಿಸಲು ಯುವನಿಧಿ ಯೋಜನೆ ರೂಪಿಸಿದ್ದೇವೆ. ಕೇವಲ ಭಾಷಣ ಮಾಡಿದರೆ ಸಾಲದು. ಸಮಾಜದಲ್ಲಿ ವರ್ಗ, ಜಾತಿರಹಿತ ಸಮಾಜ ನಿರ್ಮಾಣ ಆಗಬೇಕು. ಎಲ್ಲರಿಗೂ ಆರ್ಥಿಕ ಶಕ್ತಿ ಸಿಗಬೇಕು. ಕೇವಲ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು, ಆರ್ಥಿಕ ಸ್ವಾತಂತ್ರ್ಯ ಕೂಡ ಬೇಕು. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಸಿಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆ ಮಹಲು ಧ್ವಂಸಗೊಳ್ಳುತ್ತದೆ ಎಂಬ ಅಂಬೇಡ್ಕರ್‌ ಮಾತಿನಲ್ಲಿ ನಂಬಿಕೆ ಇಟ್ಟ ಸರ್ಕಾರ ನಮ್ಮದು ಎಂದ ಸಿದ್ದರಾಮಯ್ಯ, ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಕನಸಿನ ಅಭಿಯಾನ ಹೋರಾಟದ ನೆಲವಾದ ಶಿವಮೊಗ್ಗದಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಮಾತನಾಡಿ, ಯುವನಿಧಿ ಯೋಜನೆಗೆ ಈಗಾಗಲೇ ಸುಮಾರು 70 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದು, ಈ ವರ್ಷ ಪದವಿ ಮುಗಿಸಿರುವ ಸುಮಾರು 5 ಲಕ್ಷ ವಿದ್ಯಾರ್ಥಿಗಳೂ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಮಧು ಬಂಗಾರಪ್ಪ, ಸಚಿವರಾದ ಡಾ.ಎಂ.ಸಿ. ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ಎಸ್.. ವೈದ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಯುವನಿಧಿ ಯೋಜನೆಯ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್‌ ವಿತರಿಸಲಾಯಿತು.

ಕಾಂಗ್ರೆಸ್‌ ಸರ್ಕಾರದ ಈ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಮತ್ತು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಭಾಗಿಯಾಗಿದ್ದು ವಿಶೇಷವಾಗಿತ್ತು. ರಾಘವೇಂದ್ರ ಮತ್ತು ಚನ್ನಬಸಪ್ಪ ಅವರು ತಮ್ಮ ಪಕ್ಷದ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಮಾತನಾಡಿದರು. ಯುವನಿಧಿ ಯೋಜನೆ ಜಾರಿ ಮಾಡಿದ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದರು.