ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ವಿರುದ್ದ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಪಪ್ರಚಾರ ನಡೆಸಲು ಮುಂದಾಗಿವೆ. ಇವರ ಕುತಂತ್ರದ ಬಗ್ಗೆ ನಾಡಿನ ಜನತೆಗೆ ನಾವು ತಿಳಿಸಬೇಕು. ಅದಕ್ಕಾಗಿ ಪಾದಯಾತ್ರೆ ಪ್ರತಿಯಾಗಿ ಜನಾಂದೋಲನ ಸಮಾವೇಶಗಳನ್ನು ಆ.5 ಮದ್ದೂರು, ಆ.6 ಮಂಡ್ಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ ರಾಜಕಾರಣಿ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಪಾದಯಾತ್ರೆಯ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವ್ಯವಸ್ಥಿತ ಕಾಂಗ್ರೆಸ್ ಸರ್ಕಾರದ ಅಪಪ್ರಚಾರ ನಡೆಸುತ್ತಿವೆ. ಮೈಸೂರಿನ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸದನದಲ್ಲಿಯೇ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಮಂಡ್ಯದಲ್ಲಿ ಆ.6 ರಂದು ಆಯೋಜಿಸಿರುವ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಭೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಜನರು ಭಾಗವಹಿಸುವಂತೆ ಮನವಿ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಪಪ್ರಚಾರ ನಡೆಸಲು ಮುಂದಾಗಿವೆ. ಇವರ ಕುತಂತ್ರದ ಬಗ್ಗೆ ನಾಡಿನ ಜನತೆಗೆ ನಾವು ತಿಳಿಸಬೇಕು. ಅದಕ್ಕಾಗಿ ಪಾದಯಾತ್ರೆ ಪ್ರತಿಯಾಗಿ ಜನಾಂದೋಲನ ಸಮಾವೇಶಗಳನ್ನು ಆ.5 ಮದ್ದೂರು, ಆ.6 ಮಂಡ್ಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರಕುಮಾರ್, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯ ಸದಸ್ಯ ಕಿಕ್ಕೇರಿ ಸುರೇಶ್ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.