ಹಾಲುಮತ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಅವಮಾನ: ಬಸನಗೌಡ ಪಾಟೀಲ ಯತ್ನಾಳ

| Published : May 05 2024, 02:00 AM IST

ಹಾಲುಮತ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಅವಮಾನ: ಬಸನಗೌಡ ಪಾಟೀಲ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಪವಿತ್ರವಾದ ಹಾಲು ಮತದಲ್ಲಿ ಹುಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದು ಹೇಳಿ ಕುರುಬ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪವಿತ್ರವಾದ ಹಾಲು ಮತದಲ್ಲಿ ಹುಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದು ಹೇಳಿ ಕುರುಬ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ. ದಲಿತರ ಅನುದಾನ ಕಸಿದು ಮುಸ್ಲಿಮರಿಗೆ ಹಂಚುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.

ಸಮೀಪದ ರನ್ನಬೆಳಗಲಿ ಪಟ್ಟಣದ ಮಹಾಲಿಂಗೇಶ್ವರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸೈನ್ಯದ ಆಸ್ತಿ 18 ಲಕ್ಷ ಎಕರೆ, ರೈಲ್ವೆ ಇಲಾಖೆ ಆಸ್ತಿ 15 ಲಕ್ಷ ಎಕರೆ ಇದ್ದರೆ ವಕ್ಫ್ ಆಸ್ತಿ 12 ಲಕ್ಷ ಎಕರೆ ಇದೆ. ಇದು ನೆಹರೂ ಕೊಡುಗೆ. ಈಗ ರಾಜ್ಯದಲ್ಲಿ ಮೊದಲ ಹಕ್ಕು ಮುಸ್ಲಿಮರದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮುಂದೆ ಅಂತಹ ಕಾನೂನು ರದ್ದು ಮಾಡಿ, ವಕ್ಫ್ ಆಸ್ತಿಯನ್ನು ಭಾರತದ ಆಸ್ತಿಯನ್ನಾಗಿ ಮಾಡುತ್ತೇವೆ. ಮುಸ್ಲಿಮರ ಮೀಸಲಾತಿ ತೆಗೆದು ದಲಿತರು ಮತ್ತು ಪರಿಶಿಷ್ಟ ವರ್ಗದವರಿಗೆ ಹಂಚುತ್ತೇವೆ ಎಂದು ಭರವಸೆ ನೀಡಿದರು.

ಭಾರತ ಇಸ್ಲಾಂ ರಾಷ್ಟ್ರವಾಗಲಿದೆ:

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕ್ಷಣವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗುತ್ತವೆ. ಶ್ರೀರಾಮ ಘೋಷಣೆ ಮತ್ತು ಹನುಮಾನ್ ಚಾಲೀಸಾ ಪಠಣ ಮಾಡಿದವರ ಮೇಲೆ ಹಲ್ಲೆ ಮತ್ತು ಹತ್ಯೆಗಳು ನಡೆಯುತ್ತಿವೆ. ನೇಹಾಳ ಕೊಲೆಯನ್ನು ವೈಯಕ್ತಿಕ ಎನ್ನುತ್ತಾರೆ. ಹಾಗಾದರೆ ಇಂದಿರಾ, ರಾಜೀವ್ ಕೊಲೆ ವೈಯಕ್ತಿಕವಲ್ಲವೇ ಎಂದು ಪ್ರಶ್ನಿಸಿದ ಅವರು, ಅಮಿತ್ ಶಾ, ನಡ್ಡಾ ಮುಂತಾದ ರಾಷ್ಟ್ರ ನಾಯಕರು ನೇಹಾಳ ಪಾಲಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದ ನಂತರ ಭೇಟಿ ನೀಡಿದರು. ಕಾಂಗ್ರೆಸ್‌ ನಿಂದ ನಮ್ಮ ಸನಾತನ ಧರ್ಮ ನಶಿಸುತ್ತೆ, ಭಾರತ ಇಸ್ಲಾಂ ರಾಷ್ಟ್ರವಾಗುತ್ತೆ ಅದನ್ನು ತಪ್ಪಿಸಲು ಪಿ.ಸಿ.ಗದ್ದಿಗೌಡರಿಗೆ ಮತ ನೀಡಿ ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದರು.

ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗನಗೌಡ ಕಾತರಕಿ ಅಧ್ಯಕ್ಷತೆ ವಹಿಸಿದ್ದರು.ಅರುಣ ಕಾರಜೋಳ, ದಯಾಸಾಗರ ಪಾಟೀಲ, ಆರ್.ಟಿ. ಪಾಟೀಲ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ನಾಗಪ್ಪ ಅಂಬಿ, ಗಂಗಪ್ಪ ಬಿಸನಕೊಪ್ಪ, ಚಿಕ್ಕಪ್ಪ ನಾಯಕ, ಅಶೋಕ ಸಿದ್ದಾಪುರ, ಪರಪ್ಪ ದೊಡ್ಡಟ್ಟಿ, ಹನಮಂತ ಇಟಾಣಿ ಮತ್ತು ಪಪಂ ಸದಸ್ಯರು ಇದ್ದರು.

ಶ್ರೀರಾಮ ಸೇನಾ ರಾಜ್ಯಾದ್ಯಕ್ಷ ಮಾಹಾಲಿಂಗಪ್ಪ ಗುಂಜಿಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪಂಡಿತ ಪೂಜಾರಿ ಸ್ವಾಗತಿಸಿ, ಮಲ್ಲು ಕ್ವಾನ್ಯಾಗೋಳ ಮತ್ತು ವಕೀಲ ಬಿ.ಪಿ.ದೊಡ್ಡಟ್ಟಿ ನಿರೂಪಿಸಿದರು.

65 ಕೋಟಿ ಜನರಿಗೆ ₹1 ಲಕ್ಷ ಕೊಡಲು ಹೇಗೆ ಸಾಧ್ಯ:ಯತ್ನಾಳ

ಕಮತಗಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಪ್ರತಿ ಕುಟುಂಬದ ಒಬ್ಬ ಹೆಣ್ಣುಮಗಳಿಗೆ ಒಂದು ಲಕ್ಷ ರೂ. ನೀಡುತ್ತೇವೆ ಎಂದು ಸುಳ್ಳು ಹೇಳುತ್ತಿದೆ. ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳಿಗೆ ಮರುಳಾಗದೆ ಬಿಜೆಪಿಗೆ ಮತ ನೀಡುವ ಮೂಲಕ ದೇಶವನ್ನು ರಕ್ಷಿಸೋಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ನೂತನ ರಥ ಬೀದಿಯ ಆವರಣದಲ್ಲಿ ಕಮತಗಿ ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ ಪ್ರತಿ ಕುಟುಂಬದ ಒಬ್ಬ ಹೆಣ್ಣುಮಗಳಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ, ದೇಶದಲ್ಲಿ 65 ಕೋಟಿ ಹೆಣ್ಣುಮಕ್ಕಳು ಇದ್ದಾರೆ, ದೇಶದ ಬಜೆಟ್ ಇರೋದೆ ₹ 40 ಲಕ್ಷ ಕೋಟಿ, 65 ಕೋಟಿ ಹೆಣ್ಣುಮಕ್ಕಳಿಗೆ ಒಂದು ಲಕ್ಷ ರೂ. ನೀಡಲು ಹೇಗೆ ಸಾಧ್ಯ. ಸುಳ್ಳು ಭರವಸೆಗಳಿಗೆ ಮೋಸ ಹೋಗಬೇಡಿ ಎಂದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್‌ ಹಣ ಕೊಟ್ಟರೆ ಬೇಡ ಅನ್ನಬೇಡಿ:

ಬಾದಾಮಿ: ಇದು ಜಾತಿ ಚುನಾವಣೆಯಲ್ಲ. ದೇಶದ ಭದ್ರತೆಯ ಚುನಾವಣೆ. ನಮ್ಮ ಮಕ್ಕಳ ಭವಿಷ್ಯ ಅರಿತು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರಿಗೆ ಮತ ನೀಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.

ಶುಕ್ರವಾರ ಇಲ್ಲಿಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಂಧುಗಳೇ ಕಾಂಗ್ರೆಸ್ ಕುತಂತ್ರದಿಂದ ದುಡ್ಡು ಹಂಚಿಕೆ ಮಾಡುತ್ತಿದೆ. ಕಾರ್ಯಕರ್ತರು ನಿಮಗೆ ಕೊಟ್ರೆ ಬೇಡ ಅನಬೇಡಿ, ತಗೋರಿ. ಮೇ 7ರಂದು ಬಿಜೆಪಿ ಚಿಹ್ನೆಗೆ ಬಟನ್ ಒತ್ತಿ ಹೊರಗೆ ಬಂದು ಥಂಬ್ ತೋರಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಭಯೋತ್ಪಾದನೆಯಂತಹ ದುಷ್ಕೃತ್ಯ ಘಟನೆಗಳನ್ನು ತಡೆದು, ದೇಶವನ್ನು ಪ್ರಪಂಚದಲ್ಲಿಯೇ ಉತ್ತಮ ಶ್ರೇಣಿಗೆ ತಂದಿರುವ ಮೋದಿ ಅವರ ಆಡಳಿತದಿಂದ ನಾವೆಲ್ಲರೂ ಸುರಕ್ಷಿತ ಮತ್ತು ಸುಖಕರವಾಗಿರಲು ಸಾಧ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ನಾವು ಮತ ಹಾಕಿ ಬೆಂಬಲಿಸಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮಹಾಂತೇಶ ಮಮದಾಪೂರ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ಮತ ಹಾಕಿ ಐದನೆ ಬಾರಿಗೆ ಗೆಲ್ಲಿಸಿ ಇತಿಹಾಸ ನಿರ್ಮಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೆ ಬಾರಿಗೆ ಪ್ರಧಾನಿಯನ್ನಾಗಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿ.ಪಿ.ಹಳ್ಳುರ, ಸಿದ್ದಣ್ಣ ಶಿವನಗುತ್ತಿ, ನಾಗರಾಜ ಕಾಚೆಟ್ಟಿ, ಪ್ರಕಾಶ ಗಾಣಿಗೇರ, ಸಂತೋಷ ನಾಯನೇಗಲಿ, ಮಾನಗೌಡ ಜನಾಲಿ, ರಮೇಶ ಹಾದಿಮನಿ ಸೇರಿದಂತೆ ಅನೇಕರು ಇದ್ದರು.