ಸಾರಾಂಶ
ಸುವರ್ಣ ವಿಧಾನಸೌಧ : ಪಂಚಮಸಾಲಿ ಸಮುದಾಯ ತಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡುತ್ತಿರುವುದೇ ಅಸಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶೂನ್ಯವೇಳೆಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಮತ್ತು ಹಣಮಂತ ನಿರಾಣಿ ಅವರು ಮಾಡಿದ ‘ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಚ್’ ಕುರಿತ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ನಾನು ಈ ಹಿಂದೆ ಎರಡು ಮೂರು ಬಾರಿ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯದ ಇತರೆ ಮುಖಂಡರ ಸಭೆ ಕರೆದಿದ್ದೆ. ನೀವು ಹೋರಾಟ ಮಾಡುವುದು ತಪ್ಪು ಎಂದು ನಾನು ಹೇಳಲ್ಲ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ನೀವು ಇಟ್ಟಿರುವ 2ಎ ಮೀಸಲಾತಿ ಒತ್ತಾಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೆ ಎಂದು ಹೇಳಿದರು.
ಏಕೆಂದರೆ, ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಲು ಅಥವಾ ಕೈಬಿಡಲು ಸಂವಿಧಾನದ 340ನೇ ಅನುಚ್ಛೇದದ ಪ್ರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿಯ ಮೂಲಕ ಶಿಫಾರಸು ಆಗಬೇಕು. ಇದನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವೇ ಹೇಳಿದೆ. ರಾಜ್ಯದಲ್ಲಿ ಆಯೋಗದವರು ಪ್ರವರ್ಗ 1, 2ಎ, 2ಬಿ, 3ಎ, 3ಬಿ ಎಂದು ವಿಭಾಗ ಮಾಡಿ ಅವುಗಳಡಿ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ಸಮುದಾಯಗಳನ್ನು ವರ್ಗೀಕರಿಸಿದ್ದಾರೆ. ಆಗ ಯಾಕೆ ಪಂಚಮಸಾಲಿಗಳು 2ಎ ಮೀಸಲಾತಿ ಕೇಳಲಿಲ್ಲ ಎಂದು ಪ್ರಶ್ನಿಸಿದರು.