ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಡಿ ಜಿಲ್ಲೆ ಚಾಮರಾಜನಗರದ ಆಲೂರಿನ ರಾಗಿ ಹೊಲದಿಂದ ರಾಜಭವನದವರಗೆ ಸಾಗಿ ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣ ಮಾಡಿದ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ವಗ್ರಾಮದಲ್ಲಿ ನಿರ್ಮಿಸಲಾಗಿರುವ ಸ್ಮಾರಕದ ಲೋಕಾರ್ಪಣೆ ಇಂದು ನಡೆಯಲಿದೆ.ಗುರುವಿನ ಋಣ ತೀರಿಸಲು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎರಡನೇ ಅವಧಿಯಲ್ಲಿ ತನ್ನ ಗುರು ದಿ.ಬಿ.ರಾಚಯ್ಯ ಸ್ಮಾರಕ ಉದ್ಘಾಟನೆಗೆ ಶನಿವಾರ ಆಗಮಿಸುತ್ತಿದ್ದಾರೆ.ಹುಟ್ಟೂರಲ್ಲಿ ಸ್ಮಾರಕ:ಆಲೂರು ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ 1 ಎಕರೆ 11 ಗುಂಟೆ ಜಾಗದಲ್ಲಿ ಭವ್ಯ ಸ್ಮಾರಕ ನಿರ್ಮಿಸಲಾಗಿದೆ. ನೆಲ ಮಹಡಿ ಹಾಗೂ ಮೊದಲ ಮಹಡಿ ಸೇರಿ 6,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಮಾರಕವು ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿದೆ. ರಾಚಯ್ಯ ಅವರ ವ್ಯಕ್ತಿತ್ವಕ್ಕೆ ಹೊಂದುವಂತೆ ಕೆಸರಿನಲ್ಲಿ ಅರಳುವ ಕಮಲದ ರೂಪಕದಂತೆ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಪ್ರಸಿದ್ಧ ಆರ್ಕಿಟೆಕ್ಟ್ ಕಿಶೋರ್ ಚಂದ್ರ ಅವರ ಪರಿಕಲ್ಪನೆಯಲ್ಲಿ ಮೂಡಿರುವ ಸ್ಮಾರಕದ ನಿರ್ಮಾಣ ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ಸ್ಮಾರಕಕ್ಕೆ ಪೂರ್ತಿಯಾಗಿ ರಾಜಸ್ತಾನದಿಂದ ತರಿಸಲಾಗಿರುವ ಮಾರ್ಬಲ್ ಬಳಕೆ ಮಾಡಲಾಗಿದೆ.
₹ 4.87 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಮೊದಲ ಹಂತದಲ್ಲಿ ಸ್ಮಾರಕ ಭವನ, ಕಾಂಪೌಂಡ್ ಪೂರ್ಣಗೊಂಡಿದೆ. ಉಳಿದಂತೆ, ಇಂಟರ್‌ಲಾಕ್ ಪಾತ್‌ವೇ, ಹುಲ್ಲುಹಾಸು, ಆಂಪಿ ಥಿಯೇಟರ್, ಶೌಚಾಲಯಗಳು, ಚಿಕ್ಕ ಮಕ್ಕಳ ಉದ್ಯಾನ ನಿರ್ಮಾಣ ಮಾಡಬೇಕಿದೆ.ಸ್ಮಾರಕದಲ್ಲಿ ಏನಿರಲಿದೆ:
ಬಿ.ರಾಚಯ್ಯ ಅವರ ಜೀವನ ಚರಿತ್ರೆ ಬಿಂಬಿಸುವ 120ಕ್ಕೂ ಹೆಚ್ಚು ಛಾಯಾ ಚಿತ್ರಗಳ ಗ್ಯಾಲರಿ ಸ್ಮಾರಕದಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು, ವಿವಿಧ ಇಲಾಖೆಗಳ ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಮಾಹಿತಿ ಲಭ್ಯವಾಗಲಿದೆ. ಇದರ ಜತೆಗೆ ರಾಚಯ್ಯ ಅವರು ಉಪಯೋಗಿಸುತ್ತಿದ್ದ ಕೋಟ್, ವಾಚ್, ವಾಕಿಂಗ್ ಸ್ಟಿಕ್, ವಿಸಿಟಿಂಗ್ ಕಾರ್ಡ್ ಹಾಗೂ ಸಾರ್ವಜನಿಕ ಜೀವನದಲ್ಲಿ ದೊರೆತ ಅಪರೂಪದ ಸ್ಮರಣಿಕೆಗಳು, ಪುಸ್ತಕಗಳು ಸ್ಮಾರಕದಲ್ಲಿ ವೀಕ್ಷಣೆಗೆ ಲಭ್ಯವಿದೆ. ಶಿವಮೊಗ್ಗ ಜಿಲ್ಲೆಯ ಕವಿಶೈಲದಲ್ಲಿ ಇರುವ ಕುವೆಂಪು ಅವರ ಕವಿಮನೆಯ ಮಾದರಿ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಪ್ರೇರಣೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಮಂಜುಳಾ.ಮುಂದಿನ ದಿನಗಳಲ್ಲಿ ಸ್ಮಾರಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಸಮಾಜ ಕಲ್ಯಾಣ ಇಲಾಖೆ ಭವನದ ನಿರ್ವಹಣೆಯ ಉಸ್ತುವಾರಿ ವಹಿಸಲಿದೆ. ಬಾಕಿ ಕಾಮಗಾರಿಗಳನ್ನು ಶೀಘ್ರ ಮುಗಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಜನ್ಮದಿನವೇ ಶಂಕುಸ್ಥಾಪನೆ, ಉದ್ಘಾಟನೆ:2017, ಆ.10ರಂದು ರಾಚಯ್ಯ ಅವರ ಜನ್ಮದಿನದಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಲೂ ಕೂಡ ರಾಚಯ್ಯ ಅವರ ಜನ್ಮದಿನದಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮಾರಕ ಲೋಕಾರ್ಪಣೆ ಮಾಡುತ್ತಿದ್ದಾರೆ.
ಮೂವರ ಸ್ಮಾರಕಕ್ಕೆ ತಲಾ ಒಂದು ಕೋಟಿದಲಿತ ನಾಯಕರಾಗಿದ್ದ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ ಹಾಗೂ ಎನ್.ರಾಚಯ್ಯ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಬಜೆಟ್‌ನಲ್ಲಿ ತಲಾ ₹1 ಕೋಟಿ ಅನುದಾನ ಮೀಸಲಿಟ್ಟಿದ್ದರು. ಬಳಿಕ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಶ್ರೀರಾಮುಲು 50ಲಕ್ಷಕ್ಕೂ ಹೆಚ್ಚು ಅನುದಾನ, ಬಸವರಾಜ ಬೊಮ್ಮಾಯಿ ₹ 1.25 ಕೋಟಿ ಅನುದಾನ, ನಂತರ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವನ ಪೂರ್ಣಗೊಳಿಸಲು ₹ 2.12 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.
ನಮ್ಮ ತಂದೆ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರನ್ನು ಕಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿಶೇಷ ಗೌರವ. ಚಾಮರಾಜನಗರಕ್ಕೆ ಬಂದಾಗಲೆಲ್ಲ ನಮ್ಮ ತಂದೆಯನ್ನು ನೆನೆಯುತ್ತಿದ್ದರು. ಇದೀಗ ಸ್ಮಾರಕವನ್ನು ನಿರ್ಮಿಸಿಕೊಟ್ಟಿದ್ದಾರೆ.ಎ.ಆರ್.ಕೃಷ್ಣಮೂರ್ತಿ, ಬಿ.ರಾಚಯ್ಯ ಪುತ್ರ, ಕೊಳ್ಳೇಗಾಲ ಶಾಸಕ