ಇಂದು ಸಿದ್ದರಾಮಯ್ಯರಿಂದ ದಾಖಲೆಯ 16ನೇ ಬಜೆಟ್‌ - ಗ್ಯಾರಂಟಿ ಹೊರೆ ಇದ್ದರೂ ಹೆಚ್ಚು ಭಾರ ಹಾಕದೆ ಜನಪರ ಸ್ಕೀಂ ಘೋಷಣೆ?

| N/A | Published : Mar 07 2025, 01:45 AM IST / Updated: Mar 07 2025, 07:45 AM IST

Siddaramaiah
ಇಂದು ಸಿದ್ದರಾಮಯ್ಯರಿಂದ ದಾಖಲೆಯ 16ನೇ ಬಜೆಟ್‌ - ಗ್ಯಾರಂಟಿ ಹೊರೆ ಇದ್ದರೂ ಹೆಚ್ಚು ಭಾರ ಹಾಕದೆ ಜನಪರ ಸ್ಕೀಂ ಘೋಷಣೆ?
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಸ್ವೀಟ್ -16’ ಬಜೆಟ್‌ ಮಂಡನೆಗೆ ಸಜ್ಜಾಗಿದ್ದು, ಈ ಬಾರಿಯ ಬಜೆಟ್‌ ಜನತೆಯ ಪಾಲಿಗೆ ಸಿಹಿ ಆಗುತ್ತಾ ಅಥವಾ ಕಹಿ ನೀಡುತ್ತಾ ಎಂಬುದು ಶುಕ್ರವಾರ ಬಜೆಟ್‌ ಮಂಡನೆ ಬಳಿಕ ತಿಳಿಯಲಿದೆ.

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಸ್ವೀಟ್ -16’ ಬಜೆಟ್‌ ಮಂಡನೆಗೆ ಸಜ್ಜಾಗಿದ್ದು, ಈ ಬಾರಿಯ ಬಜೆಟ್‌ ಜನತೆಯ ಪಾಲಿಗೆ ಸಿಹಿ ಆಗುತ್ತಾ ಅಥವಾ ಕಹಿ ನೀಡುತ್ತಾ ಎಂಬುದು ಶುಕ್ರವಾರ ಬಜೆಟ್‌ ಮಂಡನೆ ಬಳಿಕ ತಿಳಿಯಲಿದೆ.

ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್‌ ಮಂಡಿಸುತ್ತಿದ್ದು, ಬಜೆಟ್ ಗಾತ್ರ 4 ಲಕ್ಷ ಕೋಟಿ ರು. ದಾಟುವ ನಿರೀಕ್ಷೆಯಿದೆ. ಕಾಲುನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು, ವೀಲ್‌ ಚೇರ್‌ನಲ್ಲೇ ಕೂತು ಬಜೆಟ್‌ ಮಂಡಿಸಲಿದ್ದಾರೆ.

ಬಜೆಟ್‌ನಲ್ಲಿ ಜನತೆ ಪಾಲಿಗೆ ಸಿಹಿ ಮಾತ್ರ ನೀಡಬೇಕು ಎಂಬ ಉದ್ದೇಶವಿದ್ದರೂ ಗ್ಯಾರಂಟಿಗಳ ಹೊರೆ, ಬದ್ಧತಾ ವೆಚ್ಚ ಹೆಚ್ಚಳ, ಸಾಲದ ಹೊರೆ ನಡುವೆಯೂ ಅಭಿವೃದ್ಧಿಗೆ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸವಾಲಿನ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಸ್ವಲ್ಪ ಕಹಿ ಅನುಭವವನ್ನೂ ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಕೊರತೆ ಬಜೆಟ್‌?:

ಸತತ ಮೂರನೇ ಬಾರಿಗೆ ಕೊರತೆ ಬಜೆಟ್ ಮಂಡನೆ ಸಾಧ್ಯತೆಯಿದೆ. ಶಾಸಕರಿಗೆ ವಿಶೇಷ ಅನುದಾನ, ಹೊಸ ವೈದ್ಯಕೀಯ ಕಾಲೇಜು ಘೋಷಣೆ, ಶಿಕ್ಷಕರು-ಉಪನ್ಯಾಸಕರ ನೇಮಕಾತಿ, ದಲಿತರಿಗೆ ಯುಪಿಎಸ್ಸಿ ತರಬೇತಿ, ಸ್ಥಗಿತಗೊಂಡಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಪಶುಭಾಗ್ಯಕ್ಕೆ ಪುನರ್‌ ಚಾಲನೆ ಸೇರಿ ಹಲವು ಯೋಜನೆಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

2025-26ನೇ ಸಾಲಿನಲ್ಲೂ 52 ರಿಂದ 55 ಸಾವಿರ ಕೋಟಿ ರು.ಗಳಷ್ಟು ಗ್ಯಾರಂಟಿ ಹೊರೆ, 7ನೇ ವೇತನ ಆಯೋಗದ ಅನುಷ್ಠಾನದಿಂದಾಗಿ ಬದ್ಧತಾ ವೆಚ್ಚ ಹೆಚ್ಚಾಗಿದೆ. ಇದರ ನಡುವೆ ಎಸ್ಸಿಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗ್ಯಾರಂಟಿಗಳಿಗೆ ಹಣ ಹೊಂದಿಸುವುದೇ ಸವಾಲಾಗಿ ಪರಿಣಮಿಸಿದೆ.

ಇ-ಖಾತಾ ವ್ಯವಸ್ಥೆಯಿಂದ 45 ರಿಂದ 50 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲಿದ್ದು ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ವಾಣಿಜ್ಯ ತೆರಿಗೆಗಳಿಂದ 1.20 ಲಕ್ಷ ಕೋಟಿ ರು, ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 28,000 ಕೋಟಿ ರು. ಹಾಗೂ ರಾಜ್ಯ ಅಬಕಾರಿ ಇಲಾಖೆಯಿಂದ 40,000 ಕೋಟಿ ರು.ಗಳಷ್ಟು ಹೆಚ್ಚು ಆದಾಯ ನಿರೀಕ್ಷೆ ಇದೆ.

ಹೆಚ್ಚು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ ಬಂಡವಾಳ ವೆಚ್ಚಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹರಿದು ಬರುತ್ತಿರುವ ಹೂಡಿಕೆಗೆ ತಕ್ಕಂತೆ ಮೂಲಸೌಕರ್ಯ ವೃದ್ಧಿಸಿ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಲಿದ್ದಾರೆ. ಶೇ.14 ರಿಂದ ಶೇ.15 ರಷ್ಟು ಹಣ ಬಂಡವಾಳ ವೆಚ್ಚಕ್ಕೆ ಮೀಸಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಜೆಟ್‌ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ. ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎಂದು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಈ ಬಜೆಟ್‌ ಮೂಲಕ ರಾಜ್ಯದ ಜನರ ಭವಿಷ್ಯ ಹೇಗೆ ರೂಪಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಸಾಲದ ಹೊರೆ ಹೆಚ್ಚಳ ನಿರೀಕ್ಷೆ:

ರಾಜಸ್ವ ಕೊರತೆ ಹಿನ್ನೆಲೆಯಲ್ಲಿ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದ್ದು, ಕಳೆದ ಸಾಲಿನಲ್ಲಿ 1.05 ಲಕ್ಷ ಕೋಟಿ ರು. ಸಾಲ ಪ್ರಸ್ತಾಪಿಸಿದ್ದ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ 1.30 ರಿಂದ 1.40 ಲಕ್ಷ ಕೋಟಿ ರು.ಗಳಷ್ಟು ಸಾಲ ಪಡೆಯುವ ಸಾಧ್ಯತೆಯಿದೆ. ಇದರಿಂದ ರಾಜ್ಯದ ಒಟ್ಟು ಸಾಲದ ಪ್ರಮಾಣ 7.5 ಲಕ್ಷ ಕೋಟಿ ರು.ಗಳಿಂದ 8 ಲಕ್ಷ ಕೋಟಿ ರು.ವರೆಗೆ ತಲುಪುವ ಅಂದಾಜಿದೆ.

ಬಜೆಟ್‌ ಮೇಲೆ ನಿರೀಕ್ಷೆ ಹೆಚ್ಚಳ:

ಬಜೆಟ್‌ನಲ್ಲಿ ಕೇಂದ್ರದ ಸಾಲಗಳ ಮರು ಸಂದಾಯ, ಮಾರುಕಟ್ಟೆ ಸಾಲಗಳ ಮರು ಪಾವತಿ, ಎಲ್‌ಐಸಿ, ಜಿಐಸಿ, ಎನ್‌ಎಸ್‌ಎಸ್ಎಫ್‌, ಎನ್‌ಡಿಸಿ ಮತ್ತು ಆರ್‌ಐಡಿಎಫ್‌ ಸಾಲಗಳ ಮರು ಸಂದಾಯ, ಸಾಲಗಳ ಮತ್ತು ಮುಂಗಡಗಳ ಬಟವಾಡೆಗಳಿಗೆ ಕನಿಷ್ಠ 40,000 ಕೋಟಿ ರು. ಅಗತ್ಯ ಬೀಳಲಿದೆ.

ಒಟ್ಟು ಜಮೆಗಳಲ್ಲಿ ಶೇ.30 ರಷ್ಟು ಬಂಡವಾಳ ಜಮೆ ಸಾಲದ ರೂಪದಲ್ಲೇ ಬರಬೇಕಿದೆ. ಕೇಂದ್ರದ ತೆರಿಗೆ ಪಾಲಿನಿಂದ ಶೇ.12 ರಿಂದ 14, ಕೇಂದ್ರ ಸಹಾಯ ಅನುದಾನದಿಂದ ಶೇ.4, ರಾಜ್ಯ ತೆರಿಗೆ ಆದಾಯದಿಂದ ಶೇ.50 ರಿಂದ 55 ರಷ್ಟು ಹಣ ನಿರೀಕ್ಷಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳ ಹಿನ್ನೆಲೆಯಲ್ಲಿ ಇತರೆಗೆ ಶೇ.30 ರಿಂದ 35 ರಷ್ಟು ಹಣ ಮೀಸಲಿಡಬೇಕಾಗಿದೆ.

ಗ್ಯಾರಂಟಿಗಳಿಂದ ಈಗಾಗಲೇ ಜನ ಉಪಯೋಗ ಪಡೆಯುತ್ತಿದ್ದು, ಹೊಸ ಕಲ್ಯಾಣ ಕಾರ್ಯಕ್ರಮ ಅಥವಾ ಬೃಹತ್‌ ಯೋಜನೆಗಳ ಘೋಷಣೆ ಕಷ್ಟ ಸಾಧ್ಯ. ಆದರೂ ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆ ನಿವಾರಣೆಗೆ ಲೋಕೋಪಯೋಗಿ ಇಲಾಖೆ, ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಇಲಾಖೆಗಳಿಗೆ ಈ ಬಜೆಟ್‌ ನಲ್ಲಿ ಹೆಚ್ಚು ಅನುದಾನ ನಿರೀಕ್ಷಿಸಲಾಗಿದೆ. ಗ್ಯಾರಂಟಿ ಯೋಜನೆಯೊಂದಿಗೆ ಅಭಿವೃದ್ಧಿಯ ಮುನ್ನೋಟ ನೀಡಲಿದ್ದಾರೆಯೇ ಎಂಬ ನಿರೀಕ್ಷೆ ಹುಟ್ಟಿದೆ.

ಜನರಿಗೆ ಹೆಚ್ಚಿನ ಹೊರೆ ಇಲ್ಲ?

ಆದಾಯ ವೃದ್ಧಿಗೆ ಒತ್ತು ನೀಡಲಿರುವ ರಾಜ್ಯ ಸರ್ಕಾರ ಬುಧವಾರದ ಸಂಪುಟ ಸಭೆಯಲ್ಲಿ ವೃತ್ತಿ ತೆರಿಗೆ ಹೆಚ್ಚಳ ಮಾಡಿದೆ. ಇಂತಹ ಸಣ್ಣ ಪುಟ್ಟ ತೆರಿಗೆ ಹೆಚ್ಚಳಕ್ಕೆ ಬಜೆಟ್‌ನಲ್ಲೂ ಪ್ರಯತ್ನಿಸಬಹುದು. ಆದರೆ ಕಳೆದ ಎರಡು ವರ್ಷವೂ ಅಬಕಾರಿ ತೆರಿಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ರಿಯಲ್‌ ಎಸ್ಟೇಟ್ ಉದ್ಯಮ ಕುಸಿದಿರುವ ಹಿನ್ನೆಲೆಯಲ್ಲಿ ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಪ್ರಯತ್ನಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೇಂದ್ರದ ವಿರುದ್ಧ ಆಯವ್ಯಯದಲ್ಲೂ ಕಿಡಿ?

ಆಯವ್ಯಯದ ಭಾಷಣದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಕೇಂದ್ರವು ಒಕ್ಕೂಟ ವಿರೋಧಿ ಎಂದು ಬಿಂಬಿಸಲು ಸಿದ್ದರಾಮಯ್ಯ ಯತ್ನಿಸಲಿದ್ದಾರೆ. ಕೇಂದ್ರವು ರಾಜ್ಯದಿಂದ 4 ಲಕ್ಷ ಕೋಟಿ ರು. ಸಂಗ್ರಹಿಸುತ್ತಿದ್ದು 1 ರು. ಸಂಗ್ರಹಿಸಿದರೆ 15 ಪೈಸೆ ಮಾತ್ರ ವಾಪಸು ನೀಡುತ್ತಿದೆ.

ಸೆಸ್‌, ಸರ್‌ಚಾರ್ಜ್‌ ಸಂಗ್ರಹ ಹೆಚ್ಚಿದ್ದು, ಇದರಲ್ಲಿ ರಾಜ್ಯಗಳಿಗೆ ಪಾಲು ನೀಡುತ್ತಿಲ್ಲ. ಇದರಿಂದ ಕಳೆದ ಏಳು ವರ್ಷಗಳಲ್ಲಿ ರಾಜ್ಯಕ್ಕೆ 55,000 ಕೋಟಿ ರು. ನಷ್ಟ ಉಂಟಾಗಿದೆ. ಇನ್ನು ಕೇಂದ್ರದ ತೆರಿಗೆ ಹಂಚಿಕೆ ಸೂತ್ರ, ಹಣಕಾಸು ಆಯೋಗ ಶಿಫಾರಸು, ಸಹಾಯ ಅನುದಾನ ಎಲ್ಲದರಲ್ಲೂ ತಾರತಮ್ಯ ಆಗಿದೆ ಎಂದು ಟೀಕಿಸುವ ಸಾಧ್ಯತೆಯಿದೆ.

- ಸಿದ್ದರಾಮಯ್ಯರಿಂದ ದಾಖಲೆಯ 16ನೇ ಬಜೆಟ್‌

- ಬೆಳಗ್ಗೆ 10.15ಕ್ಕೆ ಮಂಡನೆ । ಬಜೆಟ್‌ ಗಾತ್ರ ದಾಖಲೆಯ 4 ಲಕ್ಷ ಕೋಟಿ ರು.?

- ಗ್ಯಾರಂಟಿ ಹೊರೆ ಇದ್ದರೂ ಹೆಚ್ಚು ಭಾರ ಹಾಕದೆ ಜನಪರ ಸ್ಕೀಂ ಘೋಷಣೆ?

- ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಕೊರತೆ ನೀಗಿಸಲು ಕ್ರಮ ಸಂಭವ

ಬಜೆಟ್‌ ನಿರೀಕ್ಷೆಗಳೇನು?

- ಈ ಸಲವೂ ಗ್ಯಾರಂಟಿಗಳ ಕಾರಣ ದೊಡ್ಡ ಯೋಜನೆಗಳ ಘೋಷಣೆ ಕಷ್ಟ ಸಾಧ್ಯ

- ಆದರೆ ರಾಜ್ಯದ ಜನರ ಹಿತಕ್ಕಾಗಿ ಕೆಲ ಸಣ್ಣಪುಟ್ಟ ಯೋಜನೆಗಳ ಘೋಷಣೆ ನಿರೀಕ್ಷೆ

- ಸಣ್ಣ ಪುಟ್ಟ ತೆರಿಗೆ ಹೆಚ್ಚಳಕ್ಕೆ ಯತ್ನಿಸಿದರೂ ದೊಡ್ಡ ಪ್ರಮಾಣದ ಕರ ಹೆಚ್ಚಳ ಅನುಮಾನ

- ಶಾಸಕರಿಗೆ ವಿಶೇಷ ಅನುದಾನ, ಹೊಸ ವೈದ್ಯಕೀಯ ಕಾಲೇಜು ಘೋಷಣೆ ಸಂಭವ

- ಶಿಕ್ಷಕರು-ಉಪನ್ಯಾಸಕರ ನೇಮಕಕ್ಕೆ ಕ್ರಮ, ದಲಿತರಿಗೆ ಯುಪಿಎಸ್ಸಿ ತರಬೇತಿ ಸಾಧ್ಯತೆ

- ಸ್ಥಗಿತಗೊಂಡಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ ಸ್ಕೀಂ, ಪಶುಭಾಗ್ಯಕ್ಕೆ ಮರುಚಾಲನೆ

- ಮುಂದಿನ ವಿತ್ತ ವರ್ಷದಲ್ಲಿ 1.30 ರಿಂದ 1.40 ಲಕ್ಷ ಕೋಟಿ ರು. ಸಾಲ ಪಡೆಯುವ ಸಾಧ್ಯತೆ- ರಾಜ್ಯದ ಸಾಲದ ಹೊರೆ ಕೂಡ 7.5 ಲಕ್ಷ ಕೋಟಿ ರು.ನಿಂದ 8 ಲಕ್ಷ ಕೋಟಿ ತಲುಪುವ ಅಂದಾಜು

-- ಬಜೆಟ್ ರಾಜ್ಯದ ಭವಿಷ್ಯದ ಕನ್ನಡಿ

ಬಜೆಟ್‌ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ