ಮಾಧವಮಂತ್ರಿ ನಾಲೆ ಆಧುನೀಕರಣ ಪೂರ್ಣ; ಕಳೆದ ಬಜೆಟ್‌ ಘೋಷಿಸಿದ್ದರಲ್ಲಿ ಆಗಿರುವ ಪ್ರಗತಿ

| Published : Mar 07 2025, 12:50 AM IST

ಮಾಧವಮಂತ್ರಿ ನಾಲೆ ಆಧುನೀಕರಣ ಪೂರ್ಣ; ಕಳೆದ ಬಜೆಟ್‌ ಘೋಷಿಸಿದ್ದರಲ್ಲಿ ಆಗಿರುವ ಪ್ರಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ, ಮೈಸೂರು ಹೊರವಲಯದ ಜಂಕ್ಷನ್ ನಲ್ಲಿ ಮೇಲುಸೇತುವೆ ನಿರ್ಮಾಣ. ಕುಕ್ಕರಹಳ್ಳಿ ಬಳಿ, ಕೆಆರ್ ಎಸ್ ರಸ್ತೆಯಲ್ಲಿ ರೈಲ್ವೆ ಮೇಲು, ಕೆಳಸೇತುವೆ ನಿರ್ಮಾಣ ಕಾಮಗಾರಿಗಳು ಆರಂಭವಾಗಿಲ್ಲ.ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಕಾರ್ಯ ಕೂಡ ನಡೆದಿಲ್ಲ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದ ಇತಿಹಾಸದಲ್ಲಿಯೇ ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಮೈಸೂರು ಜಿಲ್ಲೆಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಲ್ಲಿ ಕೆಲವು ಆರಂಭವಾಗಿದ್ದರೆ. ಇನ್ನೂ ಕೆಲವು ಆರಂಭವಾಗಿಲ್ಲ.

ತಮ್ಮನ್ನು ಮೂರು ಬಾರಿ ಗೆಲ್ಲಿಸಿ, ಒಂದು ಬಾರಿ ಪ್ರತಿಪಕ್ಷ ನಾಯಕ, ಎರಡು ಬಾರಿ ಮುಖ್ಯಮಂತ್ರಿಯಾಗಲು ಕಾರಣವಾದ ಸ್ವಕ್ಷೇತ್ರ ವರುಣದಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ- ಜಿಟಿಟಿಸಿ ಆರಂಭಿಸುವುದಾಗಿ ಹೇಳಿದ್ದರು. ಆದರೆ ಈವರೆಗೆ ಈ ಕೆಲಸ ಆಗಿಲ್ಲ. ಅದೇ ರೀತಿ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿದ್ದರು. ಈ ಕೆಲಸವೂ ಆಗಿಲ್ಲ. ಬದಲಿಗೆ ರೈತರಿಗೆ ಕಟ್ಟು ನೀರಿನ ವ್ಯವಸ್ಥೆ ಮಾಡಲಾಗಿದೆ.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ಟಿ. ನರಸೀಪುರ ತಾ. ಮಾಧವಮಂತ್ರಿ ನಾಲಾ ಆಧುನೀಕರಣ ಘೋಷಿಸಿದ್ದರು. ಈ ಕೆಲಸ ಪೂರ್ಣವಾಗಿದೆ.

ಕೆ.ಆರ್. ನಗರ ತಾಲೂಕು ಕೆಸ್ತೂರು ಕೊಪ್ಪಲು, ನಂಜನಗೂಡು ತಾಲೂಕು ದೇವನೂರು ಏತ ನೀರಾವರಿ ಯೋಜನೆ ಘೋಷಿಸಿದ್ದರು. ಈ ಪೈಕಿ ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸುವುದಾಗಿ ಶಾಸಕ ಡಿ. ರವಿಶಂಕರ್‌ ಹೇಳಿದ್ದಾರೆ. ಆದರೆ ನಾನಾ ಕಾರಣಗಳಿಂದ ಶಂಕುಸ್ಥಾಪನೆ ಈವರೆಗೆ ಆಗಿಲ್ಲ. ದೇವನೂರು ಏತ ನೀರಾವರಿ ಯೋಜನೆ ಟೆಂಡರ್‌ ಸಮಸ್ಯೆಯಿಂದಾಗಿ ಇನ್ನೂ ಕಾರ್ಯಗತವಾಗಿಲ್ಲ. ಹುಣಸೂರು ತಾ. ಮರದೂರು ಕೆರೆ ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ.

ಮಾರುಕಟ್ಟೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್ ಜಿ ಘಟಕ ಸ್ಥಾಪಿಸಲಾಗುವುದು ಎಂದಿದ್ದರು. ಈ ಕೆಲಸವೂ ಆಗಿಲ್ಲ.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ 54 ಕೋಟಿ ರು, ಮಹಾರಾಣಿ ಕಲಾ ಮತ್ತು ವಾಣಿಜ್ಯ ಹಾಸ್ಟೆಲ್ ಕಟ್ಟಡಕ್ಕೆ ನಿರ್ಮಾಮಕ್ಕೆ116 ಕೋಟಿ ರು. ನೀಡಿದ್ದು, ಈ ಕಾಮಗಾರಿಗೆ ಸ್ವತಃ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ, ಸುಧಾಕರ, ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಭಾಗಿಯಾಗಿದ್ದರು.

ಮೈಸೂರಿನಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣ, 40 ಹಾಸಿಗೆ ಸಾಮರ್ಥ್ಯದ ನೆಪ್ರೋಯುರಾಜಲಿ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯಕ್ಕೆ ಉನ್ನತೀಕರಣ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಅಂಗವಾಗಿ ಕೆ.ಆರ್. ಆಸ್ಪತ್ರೆ ಆವರಣದಲ್ಲಿ 75 ಕೋಟಿ ರು. ವೆಚ್ಚದಲ್ಲಿ ಹೊರ ರೋಗಿಗಳ ಕಟ್ಟಡ ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವತಃ ಸಿದ್ದರಾಮಯ್ಯ ಭಾಗಿಯಾಗಿದ್ದರು. ಲಭ್ಯವಿರುವ ಮಾಹಿತಿಯ ಪ್ರಕಾರ, ನೆಪ್ರೋಯುರಾಜಲಿ ಆಸ್ಪತ್ರೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲಾಗಿದೆ. 130 ಕೋಟಿ ರು. ವೆಚ್ಚದಲ್ಲಿ ಹೊರ ರೋಗಿಗಳ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಯಾನಿಟೋರಿಯಂನ ಪಿಕೆಟಿಬಿ ಆವರಣದಲ್ಲಿ ಬರಲಿದೆ.

ಮೈಸೂರಿನಲ್ಲಿ ಇಂಟಿಗ್ರೆಟೆಡ್ ಟೌನ್ ಶಿಪ್ ಅಭಿವೃದ್ಧಿ, ಪೆರಿಪೆರಲ್ ವರ್ತುಲ ರಸ್ತೆ ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿ. ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ, ಮೈಸೂರು ಹೊರವಲಯದ ಜಂಕ್ಷನ್ ನಲ್ಲಿ ಮೇಲುಸೇತುವೆ ನಿರ್ಮಾಣ. ಕುಕ್ಕರಹಳ್ಳಿ ಬಳಿ, ಕೆಆರ್ ಎಸ್ ರಸ್ತೆಯಲ್ಲಿ ರೈಲ್ವೆ ಮೇಲು, ಕೆಳಸೇತುವೆ ನಿರ್ಮಾಣ ಕಾಮಗಾರಿಗಳು ಆರಂಭವಾಗಿಲ್ಲ.

ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಕಾರ್ಯ ಕೂಡ ನಡೆದಿಲ್ಲ.

ಮೈಸೂರು ವಿಭಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್, - ಬದನವಾಳಿನಲ್ಲಿ ಖಾದಿ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗುವುದು ಎಂದಿದ್ದರು.

ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ತಾರಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶೀತಲಗೃಹ ನಿರ್ಮಾಣ ಕಾರ್ಯಕ್ಕೆ ಪ್ರಕ್ರಿಯೆ ನಡೆಯುತ್ತಿದೆ.