ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ

| N/A | Published : Oct 16 2025, 02:00 AM IST

ಸಾರಾಂಶ

ಹಾಸನಾಂಬೆ ದರ್ಶನ, ಹಾಸನ, ಸಿಎಂ ಸಿದ್ಧರಾಮಯ್ಯ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ಉತ್ತಮ ಮಳೆ ಬೆಳೆಯಾಗಲಿ  ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. 

  ಹಾಸನ :  ತಾಯಿ ಹಾಸನಾಂಬೆ ರಾಜ್ಯದ ಸುಭಿಕ್ಷೆ ಜೊತೆಗೆ ನಾಡಿನಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ಉತ್ತಮ ಮಳೆ ಬೆಳೆಯಾಗಲಿ ರೈತರು ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಅದೃಷ್ಟವಶಾತ್‌ ಉತ್ತಮ ಮಳೆಯಾಗಿದೆ. ಜಲಾಶಯಗಳು ತುಂಬಿವೆ. ಕೆಲವು ಕಡೆ ಪ್ರವಾಹ ಬಂದು ಬೆಳೆ ನಷ್ಟವಾಗಿದೆ. ರೈತರಿಗೆ ಸಹಾಯ ಮಾಡಲು ಎನ್.ಡಿ.ಆರ್‌.ಎಫ್‌ ಹಾಗೂ ಸರ್ಕಾರದ ವತಿಯಿಂದ ಒಂದು ಹೆಕ್ಟೇರ್ ಗೆ ಖುಷ್ಕಿ ಬೆಳೆಗೆ ೧೭೦೦೦, ನೀರಾವರಿ ಬೆಳೆಗೆ ೨೫೫೦೦, ಬಹು ಬೆಳೆಗೆ ೩೧೦೦೦ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತರು ಬೆಳೆದ ಬೆಳೆ ಕೈಗೆ ಸಿಗಬೇಕು. ಮುಂದಿನ ವರ್ಷ ಯಾವುದೇ ಹಾನಿಯಾಗದಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರಲ್ಲದೆ, ದೇವಿ ದರ್ಶನಕ್ಕೆ ನಾಡಿನಾದ್ಯಂತ ಜನರು ಆಗಮಿಸುತ್ತಿದ್ದಾರೆ. ಪ್ರತಿಯೊಬ್ಬರು ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿದರ್ಶನ ಪಡೆಯಬೇಕು. ಯಾರು ನಿರಾಸೆಯಿಂದ ಹೋಗಬಾರದು ಎಂದರು.

ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಬಾಳಲಿ, ಯಾರನ್ನೂ ದ್ವೇಷಿಸಬಾರದು. ಎಲ್ಲಾ ಧರ್ಮಗಳಲ್ಲಿಯೂ ಕೂಡ ಇದನ್ನೇ ಹೇಳಿದೆ. ರಾಜ್ಯದ ಜನತೆಗೆ ಒಳ್ಳೆಯ ಆಯುಷ್ಯ ಮತ್ತು ಆರೋಗ್ಯ ಶಾಂತಿ, ನೆಮ್ಮದಿ ನೀಡಲಿ ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ಬಾಳಲು ಎಲ್ಲರಿಗೂ ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದ್ದೇನೆ . ಏಳು ಕೋಟಿ ಜನರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.

ಕಂದಾಯ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಮಾತನಾಡಿ, ಇಂದಿನ ಬೆಳಗ್ಗೆ ೫ ಗಂಟೆಯವರೆಗೆ ೮,೮೪,೫೦೩ ಜನರು ದೇವಿ ದರ್ಶನ ಪಡೆದಿದ್ದಾರೆ, ದೇವಿ ದರ್ಶನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದ್ವಿಗುಣವಾಗಿರುವುದರಿಂದ ದರ್ಶನಕ್ಕೆ ಸರಾಸರಿ ೩-೪ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಸುಗಮವಾಗಿ ದರ್ಶನ ಆಗುತ್ತಿದೆ ಎಂದು ತಿಳಿಸಿದರು.

ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಶೇ.೭೦ರಷ್ಟು ಮಹಿಳೆಯರು ಬರುತ್ತಿದ್ದಾರೆ. ಮಂಗಳವಾರ ಶೇಕಡ ೮೦ರಷ್ಟು ಮಹಿಳೆಯರು ದರ್ಶನ ಪಡೆದಿದ್ದಾರೆ. ದೇವಿ ದರ್ಶನಕ್ಕೆಅಗತ್ಯ ಸಿದ್ಧತೆ ಮಾಡಲಾಗಿದ್ದು, ಧರ್ಮದರ್ಶನದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಮಜ್ಜಿಗೆ, ವಾಟರ್ ಪ್ರೂಫ್‌ ಟೆಂಟ್, ೧೨೪ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ಬಾರಿ ಶ್ರೀ ಸಾಮಾನ್ಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಹಳ ಶಿಸ್ತುಬದ್ಧವಾಗಿ ದರ್ಶನಕ್ಕೆ ಕ್ರಮ ವಹಿಸಲಾಗಿದೆ. ತಮ್ಮ ಸೂಚನೆ ಮೇರೆಗೆ ಸಾಮಾನ್ಯ ಜನರಿಗೆ ದರ್ಶನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಂಸದರಾದ ಶ್ರೇಯಸ್ ಎಂ ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌. ಪೂರ್ಣಿಮಾ ಮತ್ತಿತರರು ಇದ್ದರು.

Read more Articles on