ಬಲಪಂಥೀಯ ಸಂಘಟನೆಗಳು ಬಡವರು, ಕಾರ್ಮಿಕರು ಮತ್ತು ಅಭಿವೃದ್ಧಿಯ ವಿರೋಧಿಗಳು : ಸಿದ್ದರಾಮಯ್ಯ

| Published : Aug 25 2024, 01:58 AM IST / Updated: Aug 25 2024, 07:38 AM IST

ಬಲಪಂಥೀಯ ಸಂಘಟನೆಗಳು ಬಡವರು, ಕಾರ್ಮಿಕರು ಮತ್ತು ಅಭಿವೃದ್ಧಿಯ ವಿರೋಧಿಗಳು : ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ ಮುಂತಾದ ಬಲಪಂಥೀಯ ಸಂಘಟನೆಗಳು ಬಡವರು, ಕಾರ್ಮಿಕರು, ದುಡಿಯುವ ವರ್ಗ ಮತ್ತು ಅಭಿವೃದ್ಧಿಯ ವಿರೋಧಿಗಳು. ಎಡಪಂಥೀಯ ಸಂಘಟನೆಗಳು ಮಾತ್ರ ಕಾರ್ಮಿಕರು, ಅಭಿವೃದ್ಧಿ, ಉತ್ಪಾದನೆ, ಬಡವರ ಪರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

  ಬೆಂಗಳೂರು :  ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ ಮುಂತಾದ ಬಲಪಂಥೀಯ ಸಂಘಟನೆಗಳು ಬಡವರು, ಕಾರ್ಮಿಕರು, ದುಡಿಯುವ ವರ್ಗ ಮತ್ತು ಅಭಿವೃದ್ಧಿಯ ವಿರೋಧಿಗಳು. ಎಡಪಂಥೀಯ ಸಂಘಟನೆಗಳು ಮಾತ್ರ ಕಾರ್ಮಿಕರು, ಅಭಿವೃದ್ಧಿ, ಉತ್ಪಾದನೆ, ಬಡವರ ಪರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಶನಿವಾರ ಕಾರ್ಮಿಕ ನಾಯಕ, ಕಾಮ್ರೇಡ್ ಸೂರ್ಯನಾರಾಣರಾವ್ ಜನ್ಮ ಶತಮಾನೋತ್ಸವ ಮತ್ತು ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ‌ ಚಳವಳಿಯ ಪಾತ್ರ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ದುಡಿಯುವ ವರ್ಗದ ಏಳಿಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಬಿಜೆಪಿ, ಆರ್‌ಎಸ್‌ಎಸ್‌ನಂತಹ ಬಲಪಂಥೀಯ ಸಂಘಟನೆಗಳು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ ಎಂದರು.

ಜರ್ಮನಿಯ ನಾಜಿ ಪಕ್ಷದ ಹಿಟ್ಲರ್ ಸರ್ಕಾರದಲ್ಲಿ ಪ್ರಚಾರ ಸಚಿವನಾಗಿದ್ದ ಗೋಬೆಲ್ ಸುಳ್ಳುಗಳನ್ನು ಹಬ್ಬಿಸುತ್ತಿದ್ದ. ಆತನಂತೆಯೇ ಇಂದಿನ ರಾಜಕಾರಣಿಗಳು ಸುಳ್ಳನ್ನು ಸತ್ಯ ಎಂದು ನೂರು ಸಲ ಹೇಳಿ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸೂರ್ಯನಾರಾಯಣ ಅವರು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಸತ್ಯದ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಿದ್ದರು. ಸದನದ ಒಳಗೆ ಮತ್ತು ಹೊರಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪ್ರತಿಭಟನೆ ಮಾಡುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೂರ್ಯನಾರಾಯಣ ಅವರಿಗೆ ಬದ್ಧತೆ ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ಇತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಸಾಮಾನ್ಯವಾಗಿ ಅಧಿಕಾರಕ್ಕಾಗಿ ಹೆಚ್ಚು‌ ಆಸೆ ಪಡುವವರಲ್ಲ. ಹೋರಾಟಕ್ಕೆ ಆದ್ಯತೆ ಕೊಡುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಸದನದ ಒಳಗೆ ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮಾತನಾಡಿ, ಸರ್ಕಾರಗಳು ಕಾರ್ಮಿಕರ ಹಕ್ಕುಗಳ ಬದಲು ಕೆಲವೇ ಕೆಲವು ಕ್ಯಾಪಿಟಲಿಸ್ಟ್‌ಗಳ ಪರವಾಗಿ ಕೆಲಸ ಮಾಡುತ್ತಿವೆ. ಶ್ರೀಮಂತರು, ಕಾರ್ಪೊರೇಟ್ ಕಂಪನಿಗಳ ಕೊಟ್ಯಂತರ ರು. ಸಾಲ ಮನ್ನಾ ಮಾಡಲಾಗುತ್ತಿದೆ. ಈ ಮೂಲಕ ಜನರ ಹಣ ಕಳ್ಳತನವನ್ನು ಕಾನೂನಬದ್ಧಗೊಳಿಸಲಾಗಿದೆ. ಕ್ಯಾಪಿಟಲಿಸ್ಟ್‌ಗಳು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿಲ್ಲಿಯ ಜವಹಾರ್ ಲಾಲ್ ನೆಹರು ವಿವಿಯ ಪ್ರೊ. ಜಾನಕಿ ನಾಯರ್ ಮಾತನಾಡಿ, ಕಾರ್ಮಿಕರ ಕೆಲಸದ ಅವಧಿಯನ್ನು ಕಡಿತಗೊಳಿಸಲು 100 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ದುರಾದೃಷ್ಟವಷಾತ್ ರಾಜ್ಯದಲ್ಲಿ ಕೆಲಸದ ಅವಧಿಯನ್ನು 14 ತಾಸುಗಳಿಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಗಿಗ್ ಕಾರ್ಮಿಕರು ದಿನಕ್ಕೆ 16-18 ತಾಸು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಹಕ್ಕುಗಳಿಗೆ ಬೆಲೆಯೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಿಐಟಿಯುನ ವಿಜೆಕೆ ನಾಯರ್, ಸಿಪಿಎಂ ಪಕ್ಷದ ಯು. ಬಸವರಾಜ್, ಮೀನಾಕ್ಷಿ ಸುಂದರಮ್ ಮತ್ತಿತರರು ಉಪಸ್ಥಿತರಿದ್ದರು.