ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ : ಕುಸಿಯುವ ಭೀತಿಯಲ್ಲಿ ಅಘನಾಶಿನಿಯ ತಾರಿ- ಜಟ್ಟಿ

| Published : Aug 25 2024, 01:58 AM IST / Updated: Aug 25 2024, 12:33 PM IST

ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ : ಕುಸಿಯುವ ಭೀತಿಯಲ್ಲಿ ಅಘನಾಶಿನಿಯ ತಾರಿ- ಜಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಎರಡು ದಿನಗಳಿಂದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಮುನ್ನುಗ್ಗಿ ಬಂದ ಅಲೆಗಳು ಜಟ್ಟಿಯ ಪಿಚ್ಚಿಂಗ್‌ ಕುಸಿಯುವಂತೆ ಮಾಡಿ ಬಂಡೆಗಲ್ಲುಗಳನ್ನು ಕಾಂಕ್ರೀಟ್ ರಸ್ತೆ ಕೆಳಗಡೆಯಿಂದ ಸೆಳೆದುಕೊಂಡು ಹೋಗಿದೆ.

ಕುಮಟಾ: ತಾಲೂಕಿನ ಅಘನಾಶಿನಿಯಲ್ಲಿ ಅಳಿವೆಯಂಚಿಗೆ ತಾರಿದಕ್ಕೆಗೆ ಸಾಗುವ ಜಟ್ಟಿಯ ತಳಪಾಯದ ಪಿಚ್ಚಿಂಗ್ ಭಾರೀ ಪ್ರಮಾಣದಲ್ಲಿ ಕುಸಿದು ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದು, ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಪೂರ್ಣ ಜಟ್ಟಿ ಹಾನಿಯಾಗುವ ಅಪಾಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತದಡಿಗೆ ಬಾರ್ಜ್‌ ಮೂಲಕ ಸಾಗುವುದಕ್ಕೆ ಹಾಗೂ ಮೀನುಗಾರಿಕೆಗೆ ಅನುಕೂಲವಾಗಿ ನಿರ್ಮಿಸಿದ್ದ ಜಟ್ಟಿ, ತಾರಿದಕ್ಕೆಯ ಮಾರ್ಗವನ್ನು ಕೆಲ ವರ್ಷಗಳ ಹಿಂದೆ ಲ್ಯಾಟರೈಟ್ ಬಂಡೆಗಲ್ಲುಗಳಿಂದ ಪಿಚ್ಚಿಂಗ್‌ ಕಟ್ಟಿ, ಅದರ ಮೇಲೆ ಕಾಂಕ್ರೀಟ್‌ನಿಂದ ರಸ್ತೆ ನಿರ್ಮಿಸಲಾಗಿತ್ತು. ಸಾಕಷ್ಟು ಬಾರಿ ಸಮುದ್ರದ ಅಲೆಗಳು ಜೋರಾಗಿದ್ದರೂ ಸುರಕ್ಷಿತವಾಗಿದ್ದ ಪಿಚ್ಚಿಂಗ್‌ ಕೆಲ ದಿನಗಳ ಹಿಂದಷ್ಟೇ ನಿಧಾನವಾಗಿ ಕುಸಿಯತೊಡಗಿತ್ತು.

ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಎರಡು ದಿನಗಳಿಂದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಮುನ್ನುಗ್ಗಿ ಬಂದ ಅಲೆಗಳು ಜಟ್ಟಿಯ ಪಿಚ್ಚಿಂಗ್‌ ಕುಸಿಯುವಂತೆ ಮಾಡಿ ಬಂಡೆಗಲ್ಲುಗಳನ್ನು ಕಾಂಕ್ರೀಟ್ ರಸ್ತೆ ಕೆಳಗಡೆಯಿಂದ ಸೆಳೆದುಕೊಂಡು ಹೋಗಿದೆ. ಈಗಾಗಲೇ ಸುಮಾರು ೨೫ ಅಡಿಗಳಷ್ಟು ಉದ್ದಕ್ಕೆ ಪಿಚ್ಚಿಂಗ್‌ ಕೊಚ್ಚಿಹೋಗಿದ್ದು, ಇನ್ನಷ್ಟು ಪಿಚ್ಚಿಂಗ್‌ ಸಡಿಲವಾಗತೊಡಗಿದೆ. ಅಲೆಗಳ ಹೊಡೆತಕ್ಕೆ ಇನ್ನಷ್ಟು ಪಿಚ್ಚಿಂಗ್‌ ಕೊಚ್ಚಿಹೋಗುವುದು ಖಚಿತ. ಆದ್ದರಿಂದ ರಸ್ತೆಯ ಕಾಂಕ್ರೀಟ್ ಕೆಳಭಾಗ ಟೊಳ್ಳಾಗಿ ಭಾರಕ್ಕೆ ಮುರಿದು ಬೀಳುವ ಅಪಾಯ ಎದುರಾಗಿದೆ. ಹಾಗಾದಲ್ಲಿ ತಾರಿದಕ್ಕೆ ಹಾಗೂ ಜಟ್ಟಿ ವ್ಯವಸ್ಥೆ ಸಂಪೂರ್ಣ ಹಾನಿಗೊಳಗಾಗಲಿದೆ.

ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸ್ಥಳ ವೀಕ್ಷಿಸಿ, ಜಟ್ಟಿ ಸುರಕ್ಷಿತಗೊಳಿಸಬೇಕು ಎಂದು ಸ್ಥಳೀಯ ಮೀನುಗಾರರು, ಸಾರ್ವಜನಿಕರು ವಿನಂತಿಸಿದ್ದಾರೆ.