ಸಾರಾಂಶ
ಮುಂಬರುವ ದಿನಗಳಲ್ಲಿ ಇಸ್ರೋ ಅನೇಕ ಯೋಜನೆಗಳನ್ನು ಹೊರತರಲು ಕಾರ್ಯ ನಿರ್ವಹಿಸುತ್ತಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಇನ್ನೂ ಕೆಲವೇ ದಿನಗಳಲ್ಲಿ ಇಸ್ರೋ ಇತರ ಬಾಹ್ಯಾಕಾಶ ಸಂಸ್ಥೆಗಳನ್ನು ಹಿಂದಿಕ್ಕಿ ಮುನ್ನಡೆಯಲಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಎನ್. ಪ್ರಸಾದ್ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ವಾರದ ಸಮಾವೇಶದಲ್ಲಿ ಭೌತಶಾಸ್ತ್ರ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಇಸ್ರೋ, ಅಮೆರಿಕಾ, ಚೀನಾ, ರಷ್ಯಾ ಹೀಗೆ ಹಲವಾರು ದೇಶದ ಬಾಹ್ಯಾಕಾಶ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುವಷ್ಟು ಎತ್ತರವಾಗಿ ಬೆಳೆದಿದೆ ಎಂದರು.
ಹಿಂದೆಲ್ಲಾ ಬಾಹ್ಯಾಕಾಶ ನೌಕೆಗಳನ್ನು ಎತ್ತಿನ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಉಡಾವಣೆ ಮಾಡಬೇಕಾಗಿತ್ತು. ಆದರೆ, ಭಾರತವು ಆಧುನಿಕ ತಂತ್ರಜ್ಞಾನಗಳನ್ನು ಸಮೃದ್ಧವಾಗಿ ಬಳಸುತ್ತಿರುವ ಕಾರಣ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಿದೆ ಎಂದು ಅವರು ಹೇಳಿದರು.ಮುಂಬರುವ ದಿನಗಳಲ್ಲಿ ಇಸ್ರೋ ಅನೇಕ ಯೋಜನೆಗಳನ್ನು ಹೊರತರಲು ಕಾರ್ಯ ನಿರ್ವಹಿಸುತ್ತಿದೆ. ಗಗನಯಾನ ಯೋಜನೆಯ ಮೂಲಕ ಇನ್ನು ಕೆಲವೇ ವರ್ಷಗಳಲ್ಲಿ ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸಲಿದ್ದಾರೆ. ಮುಂದಿನ ಚಂದ್ರಯಾನ ಯೋಜನೆಗಳಲ್ಲಿ ಮಿಷನ್ ಗಳು ಚಂದ್ರನ ಮೇಲ್ಮೈನಿಂದ ಮಣ್ಣುಗಳು ಮತ್ತು ಲೋಹಗಳನ್ನು ಹೊತ್ತುಕೊಂಡು ಭೂಮಿಗೆ ಹಿಂತಿರುಗಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಮೊದಲಾದವರು ಇದ್ದರು.