ಸಾರಾಂಶ
ಬರದ ಛಾಯೆ ಆವರಿಸಿ ಸಂಕಷ್ಟಕ್ಕೀಡಾದ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಈ ಸಂದರ್ಭದಲ್ಲಿ ಪರಿಹಾರ ಒದಗಿಸಲೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ವಿಜಯೇಂದ್ರ ದೂರಿದರು.
ಕನ್ನಡಪ್ರಭ ವಾರ್ತೆ ಬೀದರ್
ಸಿಎಂ ಸಿದ್ದರಾಮಯ್ಯವರಿಗೆ ಅಧಿಕಾರ ಮಾಡಲು, ಮಜಾ ಮಾಡಲು ಸರ್ಕಾರ ಬೇಕು. ಆದರೆ ರಾಜ್ಯದಲ್ಲಿ ರೈತ ಬರಕ್ಕೆ ಸಿಲುಕಿ ನಲುಗುತ್ತಿದ್ದಾಗ ಬರ ಪರಿಹಾರ ಕೊಡಲು ಮನವಿಸಿದಾಗ ಸರ್ಕಾರದ ಬಳಿ ಹಣವಿಲ್ಲ ಎಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.ಅವರು ನಗರದ ಗಣೇಶ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬರದ ಛಾಯೆ ಆವರಿಸಿ ಸಂಕಷ್ಟಕ್ಕೀಡಾದ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಈ ಸಂದರ್ಭದಲ್ಲಿ ಪರಿಹಾರ ಒದಗಿಸಲೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ವಿಜಯೇಂದ್ರ ದೂರಿದರು.
ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಆಡಳಿತಾರೂಢ ಕಾಂಗ್ರೆಸ್ ರಾಜ್ಯದಲ್ಲಿ ಭೀಕರ ಬರಗಾರ ಆವರಿಸಿ ರೈತರು ಸಂಕಷ್ಟದಲ್ಲಿದ್ದರೂ ಮೋದಿ ಅವರ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ, ರಾಜ್ಯದ ಅಧಿಕಾರವನ್ನು ನಮ್ಮ ರೈತರು ನಿಮಗೆ ಕೊಟ್ಟಿಲ್ಲವೇ ಎಂದು ಸಿಎಂ ಅವರನ್ನು ಪ್ರಶ್ನಿಸಿದರು.ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಕ್ಕೇರುತ್ತಿದ್ದಂತೆ ಎದುರಾದ ಭೀಕರ ಬರಗಾಲದ ಸಂದರ್ಭದಲ್ಲಿ ಕೇಂದ್ರದಿಂದ ಆರೂವರೆ ಸಾವಿರ ರು. ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ 6 ಸಾವಿರ ರು. ಸೇರಿಸಿ ರೈತರ ಖಾತೆಗೆ ಹಾಕಲಿಲ್ಲವೇ ಎಂದು ಪ್ರಶ್ನಿಸಿದರು.
ರೈತರಿಗೆ ಪರಿಹಾರ ಕೊಡಲು ಹಣವಿಲ್ಲ ಎಂದು ಹೇಳಿ ರೈತರಿಗೆ ಅನ್ಯಾಯ ಮಾಡುವ ಈ ಸರ್ಕಾರ ಶೋಷಿತ ಸಮುದಾಯದ ಅಭಿವೃದ್ಧಿಗಾಗಿನ ಎಸ್‌ಸಿಪಿ ಟಿಎಸ್‌ಪಿ ಹಣವನ್ನೂ ಬೇರೆ ಕಡೆ ವರ್ಗಾವಣೆ ಮಾಡಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಕಿಡಿ ಕಾರಿದರು.