ಜಿಲ್ಲೆಗೆ ಜ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ನೂತನ ಮೆಡಿಕಲ್‌ ಕಾಲೇಜು ಕಟ್ಟಡ ಸೇರಿದಂತೆ ಜಿಲ್ಲೆಯಲ್ಲಿ ನಿರ್ಮಾಣವಾದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರೆವೇರಿಸಲಿದ್ದಾರೆ.

ಹಾವೇರಿ: ಜಿಲ್ಲೆಗೆ ಜ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ನೂತನ ಮೆಡಿಕಲ್‌ ಕಾಲೇಜು ಕಟ್ಟಡ ಸೇರಿದಂತೆ ಜಿಲ್ಲೆಯಲ್ಲಿ ನಿರ್ಮಾಣವಾದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರೆವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.

ನಗರದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ.7ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ನಗರದಲ್ಲಿ ನಿರ್ಮಾಣವಾದ ನೂತನ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಚ್ಚುಕಟ್ಟಾಗಿ ತಯಾರಿ ಮಾಡಿಕೊಳ್ಳುವಂತೆ ಸೂಚಿಸದರು.

ಹಾವೇರಿ ವೈದ್ಯಕೀಯ ಕಾಲೇಜಿನ ಉದ್ಘಾಟನೆ ವೇದಿಕೆಯಲ್ಲೇ ಜಿಲ್ಲೆಯ ಉಳಿದ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯ ಅಗಡಿ ಗ್ರಾಮದಲ್ಲಿ ಅಂಗನವಾಡಿ ನಂ. 71ನೇ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ, ಜಿಲ್ಲಾ ಪಂಚಾಯಿತಿಯಿಂದ ಕರ್ಜಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಶಾಲಾ ಕಟ್ಟಡ ಉದ್ಘಾಟನೆ, ಶಾಲಾ ಶಿಕ್ಷಣ ಇಲಾಖೆಯಿಂದ ಹಾವೇರಿಯ ಕನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿ ನಿರ್ಮಾಣ ಕಾಮಗಾರಿ ಉದ್ಘಾಟನೆ, ಲೋಕೋಪಯೋಗಿ ಇಲಾಖೆಯಿಂದ ಹಾವೇರಿಯಲ್ಲಿ ನಿರ್ಮಾಣವಾದ ಹೊಸ ಪ್ರವಾಸ ಮಂದಿರ, ನೆಲೋಗಲ್‌ನಲ್ಲಿ ನಿರ್ಮಾಣವಾದ ಹೊಸ ಪ್ರವಾಸ ಮಂದಿರ ಉದ್ಘಾಟನೆ, ಜಿಲ್ಲಾ ನಿರ್ಮಿತಿ ಕೇಂದ್ರದಿಂದ ನಗರದಲ್ಲಿ ಶ್ರೀಮತಿ ಗೌಡಶಾನಿ ನೀಲಗೌಡ ಬಾಲಕಿಯರ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾವೇರಿಯಲ್ಲಿ ಮೇಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಶಿಲಾನ್ಯಾಸ ನೆರೆವೇರಿಸಲಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ,ಅಪರ ಜಿಲ್ಲಾಧಿಕಾರಿ ಡಾ ಎಲ್. ನಾಗರಾಜ್, ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.