ಕೊಳ್ಳೇಗಾಲ ಪಟ್ಟಣಕ್ಕೆ ಸೆ.30ರಂದು ಆಗಮಿಸುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೂರಾರು ಕೋಟಿ ರು. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸೆ.30ರಂದು ಬೆಳಿಗ್ಗೆ 11ಗಂಟೆಗೆ ಮಹದೇಶ್ವರ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಗೆ ಆಗಮಿಸಿ ಎಂಜಿಎಸ್‌ವಿ ಕಾಲೇಜಿನ ವೇದಿಕೆಯಲ್ಲಿ ಕಾಮಗಾರಿಗಳಿಗೆ ಹಲವು ಸಚಿವರು, ಗಣ್ಯರು, ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಪಟ್ಟಣಕ್ಕೆ ಸೆ.30ರಂದು ಆಗಮಿಸುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೂರಾರು ಕೋಟಿ ರು. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸೆ.30ರಂದು ಬೆಳಿಗ್ಗೆ 11ಗಂಟೆಗೆ ಮಹದೇಶ್ವರ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಗೆ ಆಗಮಿಸಿ ಎಂಜಿಎಸ್‌ವಿ ಕಾಲೇಜಿನ ವೇದಿಕೆಯಲ್ಲಿ ಕಾಮಗಾರಿಗಳಿಗೆ ಹಲವು ಸಚಿವರು, ಗಣ್ಯರು, ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಪ್ರಪ್ರಥಮ ಬಾರಿಗೆ ಕೊಳ್ಳೇಗಾಲ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.
19 ವರ್ಷಗಳ ಬಳಿಕ ಅಂಬೇಡ್ಕರ್ ಭವನಕ್ಕೆ ಉದ್ಘಾಟನೆ ಭಾಗ್ಯ:ಕೊಳ್ಳೇಗಾಲದಲ್ಲಿ 19 ವರುಷಗಳ ಬಳಿಕ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಕಳೆದ ಆರೇಳು ವರುಷಗಳಿಂದಲೂ ಭೀಮನಗರದ ದಲಿತ ಸಮಾಜ ಹಾಗೂ ಅಂಬೇಡ್ಕರ್ ಸಂಘಟನೆಗಳಿಂದ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು, ಹಲವು ವೇದಿಕೆಗಳಲ್ಲೂ ಭೀಮನಗರದ ಹಲವು ಮುಖಂಡರು ಈ ಭವನ ಲೋಕಾರ್ಪಣೆ ಸಂಬಂಧ ಧ್ವನಿ ಎತ್ತಿದ್ದರು.
ಹಲವು ಮುಖಂಡರು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಗಮನ ಸೆಳೆದು ಲಕ್ಷಾಂತರ ರು. ಅನುದಾನ ಬಿಡುಗಡೆ ಮಾಡಿಸಿದ್ದರು. ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ, ಕೇಂದ್ರದ ಮಾಜಿ ಸಚಿವ ದಿ.ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಮಾಜಿ ಸಚಿವ ಎನ್.ಮಹೇಶ್, ಈಗಿನ ಶಾಸಕ ಕೃಷ್ಣಮೂರ್ತಿ ಸೇರಿ ಅನೇಕ ಗಣ್ಯರು ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರು.ಏನೇನು ಕಾಮಗಾರಿಗಳು:
ಯಳಂದೂರು ಪಟ್ಟಣದಲ್ಲಿ ತಾಲೂಕು ಮಟ್ಟದ ಆಸ್ಪತ್ರೆ ಉದ್ಘಾಟನೆ, ಯಳಂದೂರು ತಾಲೂಕು ಮದ್ದೂರು ಗ್ರಾಮದಲ್ಲಿ ಸುವರ್ಣಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ, ಕೊಳ್ಳೇಗಾಲ ಟೌನ್‌ನಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ.ಕೊಳ್ಳೇಗಾಲ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ, ಕೊಳ್ಳೇಗಾಲ ಟೌನ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯ ವಿದ್ಯಾರ್ಥಿ ನಿಲಯ ಉದ್ಘಾಟನೆ, ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಆರ್.ಜಿ. ಮತ್ತು ಬಿ.ಎಲ್ ಕ್ರೀಡಾಪಟು ನಿಲಯದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಮರದ ನೆಲಹಾಸು ಅಳವಡಿಸುವ ಕಾಮಗಾರಿ ಉದ್ಘಾಟನೆ, ಆಗರ ಮತ್ತು ಮದ್ದೂರು ಕೆರೆಗಳಿಗೆ ನೀರು ಸಂಗ್ರಹ ಜಲಾಶಯಗಳನ್ನು ನಿರ್ಮಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಶಂಕುಸ್ಥಾಪನೆ, ಸುವರ್ಣಾವತಿ ನದಿಯ ವ್ಯಾಪ್ತಿಯಲ್ಲಿ ಸಣ್ಣ ಕೆರೆಗಳ, ಫೀಡರ್ ಚಾನೆಲ್ ಹಾಗೂ ಕಾಲುವೆ ಕಾಮಗಾರಿ, ಗರುಡಕಂಠಿ ನದಿಯ ಅಡಿಯಲ್ಲಿ ಬರುವ ಸಣ್ಣ ಕೆರೆಗಳ ಪಟ್ಟರ್ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ.
ಚಾಮರಾಜನಗರ ತಾಲೂಕು ಬಾಗಲಕೋಟೆ ವಿ.ಆರ್.ಫೀಲ್ಡ್ ರಸ್ತೆ ರಾಷ್ಟ್ರೀಯ ಹೆದ್ದಾರಿ-57ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ಚಾ.ನಗರ ತಾಲೂಕು ಬಾಗಲಕೋಟೆ ವಿ.ಆರ್. ಫೀಲ್ಡ್ ರಸ್ತೆ ರಾಷ್ಟ್ರೀಯ ಹೆದ್ದಾರಿ-687ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿ ಸಾವಿರಾರು ಕೋಟಿ ರು. ಕಾಮಗಾರಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಹೊಂಗನೂರು ಕೆರೆ, ಸಮುದಾಯ ಭವನಗಳಿಗೂ ಶಂಕು:
4.50 ಕೋಟಿ ರು. ಅಂದಾಜಿನಲ್ಲಿ ಹೊಂಗನೂರು ಹಿರಿಕೆರೆ, ಮುಖ್ಯ ಕಾಲುವೆಗಳ ಅಭಿವೃದ್ಧಿ 1 ಕೋಟಿ ಅಂದಾಜಿನಲ್ಲಿ ಯಳಂದೂರಿನ ಆದಿಜಾಂಬವ ಸಮುಧಾಯ ಭವನದ ಮುಂದುವರಿದ ಕಾಮಗಾರಿ, ಕೊಳ್ಳೇಗಾಲ ನಗರಸಭೆಯ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 1.52 ಕೋಟಿ ರು. ಅನುದಾನದಲ್ಲಿ ಎಂಆರ್‌ಎಫ್ ಶೆಡ್ ನಿರ್ಮಾಣ, ನಗರಸಭೆಗೆ ಮುಖ್ಯಮಂತ್ರಿಗಳ ಅಮೃತನಗರೋತ್ಧಾನ ಯೋಜನೆಯಡಿ 1.66 ಕೋಟಿ ರು.ಅನುದಾನ, ಪಾರ್ಕ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ.ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ 1.50 ಕೋಟಿ ರು. ಅಂದಾಜಿನಲ್ಲಿ ನವೀಕರಣ ಕಾಮಗಾರಿ, ಕೊಳ್ಳೇಗಾಲದ ವಾರ್ಡ್ 31ರಲ್ಲಿ ಬಸ್ತಿಪುರ ಆಶ್ರಯ ಕಾಲೋನಿ, 10ರಲ್ಲಿ 3.5 ಕೋಟಿ ರು. ಅಂದಾಜಿನಲ್ಲಿ ನಾಯಕರಬೀದಿಯಲ್ಲಿ ಒಳ ಚರಂಡಿ ಕಾಮಗಾರಿ, ಕೊಳ್ಳೇಗಾಲ ಪಟ್ಟಣದ ಚಿಕ್ಕನಾಯಕರ ಬೀದಿಯಲ್ಲಿ ಹಾಗೂ ದೊಡ್ಡನಾಯಕಬೀದಿಯಲ್ಲಿ ತಲಾ 25 ಲಕ್ಷ ರು. ಅಂದಾಜಿನಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿ.
ಕೊಳ್ಳೇಗಾಲದಲ್ಲಿ 80 ಲಕ್ಷ ರು. ಅಂದಾಜಿನಲ್ಲಿ ಕನ್ನಡ ಸುವರ್ಣ ಗಡಿ ಭವನ, 75 ಲಕ್ಷ ರು. ಅಂದಾಜಿನಲ್ಲಿ ಸ್ತ್ರೀ ಶಕ್ತಿ ಭವನ ಕಾಮಗಾರಿ, 4 ಕೋಟಿ ರು. ಅಂದಾಜಿನಲ್ಲಿ ಕೊಳ್ಳೇಗಾಲ ತಾಲೂಕು ಒಳಾಂಗಣ ಕ್ರೀಡಾಂಗಣ, ಸಂತೇಮರಳ್ಳಿ ಸಮೀಪದ ಕುದೇರಿನಲ್ಲಿ 3 ಕೋಟಿ ರು. ಅಂದಾಜಿನಲ್ಲಿ ಉಪನೊಂದಣಾಧಿಕಾರಿ ಕಟ್ಟಡ, ಯಳಂದೂರಿನ ಮೆಲ್ಲಳ್ಳಿ ಗೇಟ್ ಬಳಿ 2.50 ಕೋಟಿ ರು. ಅನುದಾನದಲ್ಲಿ ಅಗ್ನಿಶಾಮಕ ಠಾಣೆ, ಕ್ಷೇತ್ರ ವ್ಯಾಪ್ತಿಯ ಸಂತೇಮರಳ್ಳಿಯಲ್ಲಿ 2.50 ಕೋಟಿ ರು. ಅಂದಾಜಿನಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ ನಿರ್ಮಾಣ ಕಾಮಗಾರಿ, ಯಳಂದೂರಿನಲ್ಲಿ 50 ಲಕ್ಷ ರು. ಅಂದಾಜಿನಲ್ಲಿ ಉಪ್ಪಾರ ಸಮುದಾಯ ಭವನ ಕಾಮಗಾರಿ, ಯಳಂದೂರಿನ ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಕಾಲೇಜಿನ ಕಟ್ಟಡ 2.55 ಕೋಟಿ ರು. ಅಂದಾಜಿನಲ್ಲಿ ನಿರ್ಮಾಣ ಕಾಮಗಾರಿ.5 ಕೋಟಿ ರು. ಅಂದಾಜಿನಲ್ಲಿ ಸಂತೇಮರಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಸ್ಥಾಪನೆ, ಯಳಂದೂರು ಪಟ್ಟಣ ಪಂಚಾಯ್ತಿಯಲ್ಲಿ 2.48 ಕೋಟಿ ರು. ಅಂದಾಜಿನಲ್ಲಿ ಹಸಿಕಸ, ಒಣ ಕಸ ವಿಲೇವಾರಿ ಘಟಕ ನಿರ್ಮಾಣ, ಮದ್ದೂರಿನಲ್ಲಿ ಸೇತುವೆ ನಿರ್ಮಾಣ, 15 ಕೋಟಿ ರು. ಅಂದಾಜಿನಲ್ಲಿ ಮುಡಿಗುಂಡದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮುಡಿಗುಂಡ ಆದರ್ಶ ಶಾಲೆ ಬಳಿ 5 ಎಕರೆ ಜಾಗದಲ್ಲಿ ಹೈಟೆಕ್ ಜಿಲ್ಲಾಸ್ಪತ್ರೆಕೊಳ್ಳೇಗಾಲ ಪಟ್ಟಣದ ಮುಡಿಗುಂಡಂನ ಆದರ್ಶಶಾಲೆ ಸಮೀಪದ ರೇಷ್ಮೆ ಇಲಾಖೆಯ 5 ಎಕರೆ ಜಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 250 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ 150 ಹಾಸಿಗಳ ಆಸ್ಪತ್ರೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆ.30ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆಗೆ ಶಾಸಕ ಎ ಆರ್.ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಂದು ಸಚಿವರಾಗಿದ್ದ ವೆಂಕಟೇಶ್ ಮತ್ತು ಎಚ್.ಸಿ.ಮಹದೇವಪ್ಪ ಆಸ್ಪತ್ರೆ ಮಂಜೂರಾತಿಗೆ ಸ್ಪಂದಿಸಿದರು. ವೆಂಕಟೇಶ್ ಅವರು ರೇಷ್ಮೆ ಇಲಾಖೆ ಜಾಗ 5 ಎಕರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಜಾಗದ ಸಮಸ್ಯೆ ನಿವಾರಿಸಿದ್ದರು.ಸರ್ಕಾರ 150 ಹಾಸಿಗೆ ಆಸ್ಪತ್ರೆಗೆ ಮೊದಲ ಹಂತದಲ್ಲಿ 48 ಕೋಟಿ ರು. ಬಿಡುಗಡೆ ಮಾಡಿರುವ ಬೆನ್ನಲ್ಲೆ ಸೆ.30ರಂದು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.