ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಮಾರುಕಟ್ಟೆಯಲ್ಲಿ ಸೀರೆ ಮಾರಾಟ ಕುಸಿತ, ಮತ್ತೊಂದೆಡೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಸಂಕಷ್ಟದಲ್ಲಿ ನರಳುತ್ತಿರುವ ಜಿಲ್ಲೆಯ ಲಕ್ಷಾಂತರ ನೇಕಾರರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿದ್ದು, ಉದ್ಯಮ ಚೇತರಿಕೆಗೆ ಅಗತ್ಯ ಸಹಾಯ ದೊರೆತು ಸಂಕಷ್ಟ ನಿವಾರಣೆಯಾಗುವ ಆಶಾಭಾವದಲ್ಲಿದ್ದಾರೆ.
ಸಾಂಪ್ರದಾಯಿಕ ಮತ್ತು ಜವಳಿ ಉದ್ಯಮಕ್ಕೆ ಬಲ ತುಂಬಲು ರೈತರಂತೆ ನೇಕಾರರಿಗೂ ಶೂನ್ಯ ಬಡ್ಡಿ ದರದ ಸಾಲಸೌಲಭ್ಯ, ಕೈಮಗ್ಗ ನೇಕಾರರಿಗೆ ನಿರಂತರ ಉದ್ಯೋಗ ದೊರೆಯಲು ಕಚ್ಚಾ ವಸ್ತುಗಳ ಪೂರೈಕೆ, ಜವಳಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಕಲ್ಪಿಸುವುದು, ಕೌಶಲ್ಯಯುಕ್ತ ನೇಕಾರಿಕೆಗೆ ಜವಳಿ ಪಾರ್ಕ್ ನಿರ್ಮಾಣ, ಜಿಲ್ಲೆಯ ಏಕೈಕ ಬನಹಟ್ಟಿ ಸಹಕಾರಿ ಹತ್ತಿ ನೂಲಿನ ಗಿರಣಿಗೆ ಆರ್ಥಿಕ ನೆರವು, ನೇಕಾರಿಕೆಗೆ ಪೂರಕ ಆವರ್ತ ನಿಧಿ ಸ್ಥಾಪನೆ ಸೇರಿದಂತೆ ಹತ್ತಾರು ಬೇಡಿಕೆಗಳಿಗೆ ಪ್ರತಿ ಬಜೆಟ್‌ನಲ್ಲೂ ಕಡೆಗಣನೆ ಮಾಡಲಾಗುತ್ತಿದೆ. ಈ ಬಾರಿಯಾದರೂ ನೇಕಾರರ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸುವರೇ ಎಂದು ಕಾತರರಾಗಿದ್ದಾರೆ.ಜಿಲ್ಲೆಯ ರಬಕವಿ-ಬನಹಟ್ಟಿ, ಮಹಾಲಿಂಗಪುರ, ತೇರದಾಳ, ಚಿಮ್ಮಡ, ಹುನ್ನೂರ, ಗುಳೇದಗುಡ್ಡ, ಇಳಕಲ್ಲ, ಅಮೀನಗಡ ಸೇರಿದಂತೆ ನಾನಾ ಭಾಗಗಳಲ್ಲಿ ಲಕ್ಷಾಂತರ ಪವರ್ ಲೂಂ ಮತ್ತು ಕೈಮಗ್ಗ ನೇಕಾರರಿದ್ದಾರೆ. ಕಚ್ಚಾ ವಸ್ತುಗಳ ಮಿತಿಮೀರಿದ ಬೆಲೆ ಏರಿಕೆಯಿಂದ ಉದ್ಯಮ ಕೋಮಾ ಸ್ಥಿತಿಗೆ ತಲುಪಿ ಮಾರುಕಟ್ಟೆಯಲ್ಲಿ ಸೀರೆಗಳ ಬೇಡಿಕೆ ತೀವ್ರ ಕುಸಿದು ಜವಳಿ ಉದ್ಯಮ ಅವನತಿಯ ಅಂಚಿನಲ್ಲಿದೆ. ಮೂಲ ಕಸುಬು ರಕ್ಷಿಸಲು ಸರ್ಕಾರ ಮುಂದಾಗಬೇಕೆಂದಬ ಬೇಡಿಕೆ ಇದೆ. ಕಾಟನ್ ಸೀರೆಗಳಿಗೆ ಪ್ರಸಿದ್ಧವಾದ ಅವಳಿ ನಗರದ ಸೀರೆಗಳು ಬೇಡಿಕೆ ಕುಸಿತದಿಂದಾಗಿ ಗೋದಾಮಿನಲ್ಲಿ ಧೂಳು ತಿನ್ನುತ್ತಿದ್ದು, ಹಾಕಿದ ಬಂಡವಾಳದ ಗತಿ ಎಂಬ ದುಗುಡ ಮಾಲೀಕರದಾದರೆ, ಇದನ್ನೇ ನಂಬಿರುವ ನೇಕಾರರಿಗೆ ಜೀವನದ ಪ್ರಶ್ನೆಯಾಗಿದೆ.
ಸಕಾಲದಲ್ಲಿ ಉದ್ಯಮ ರಕ್ಷಣೆಗೆ ಧಾವಿಸಬೇಕಿದ್ದ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಡಾಯಿ ಕೊಚ್ಚಿಕೊಂಡಿದ್ದು ಬಿಟ್ಟರೆ ಈವರೆಗೆ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ರಬಕವಿ, ಇಳಕಲ್ಲ, ಗುಳೇದಗುಡ್ಡಗಳಲ್ಲಿ ಜವಳಿ ಪಾರ್ಕ್ ಮಾಡುವ ಘೋಷಣೆಗಳು ಕಾಗದದಲ್ಲೇ ಉಳಿದಿರುವುದು ನೇಕಾರರ ಆಕ್ರೋಶಕ್ಕೆ ಕಾರಣವಾಗಿದೆ. ನೇಕಾರಿಕೆ ನಂಬಿದರೆ ಹೊಟ್ಟೆ ತುಂಬಿವುದಿಲ್ಲ ಎಂಬುವುದನ್ನು ಮನಗಂಡು ಬೇರೆ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ. ಚುನಾವಣೆ ವೇಳೆ ನೇಕಾರರಿಗೆ ಹತ್ತಾರು ಭರವಸೆ ನೀಡುವ ರಾಜಕಾರಣಿಗಳು ಬಳಿಕ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂಬುದು ನೇಕಾರರ ಅಳಲು.ರಬಕವಿ-ಬನಹಟ್ಟಿ ಕಾಟನ್ ಸೀರೆಗಳು, ಗುಳೇದಗುಡ್ಡ ಖಣಗಳು, ಇಳಕಲ್ಲ ಸಾಂಪ್ರದಾಯಿಕ ನೇಯ್ಗೆಯ ಸೀರೆಗಳು ತಮ್ಮದೇ ಛಾಪು ಮೂಡಿಸಿದ್ದರೂ ಜವಳಿ ಕ್ಷೇತ್ರದಲ್ಲಿನ ತಂತ್ರಜ್ಞಾನ ಬೆಳವಣಿಗೆ ಹಿನ್ನೆಲೆಯಲ್ಲಿ ಉದ್ಯಮ ತೀವ್ರ ಹಿನ್ನೆಡೆ ಅನುಭವಿಸುತ್ತಿದೆ. ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಮಾರುಕಟ್ಟೆಯ ಪ್ರಮುಖ ನೆಲೆಯಾಗಿವೆ. ಆದರೆ ಉತ್ತರ ಭಾರತದ ಅಗ್ಗದ ಸೀರೆಗಳ ಆರ್ಭಟದ ಎದುರು ಗುಣಮಟ್ಟದಲ್ಲಿ ರಾಜಿಯಾಗದ ಕಾರಣ ಮತ್ತು ಕಚ್ಚಾ ವಸ್ತುಗಳ ಬೆಲೆಏರಿಕೆಯಿಂದಾಗಿ ಸ್ಥಳೀಯ ಜವಳಿ ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು, ನೇಕಾರಿಕೆ ಅವನತಿಯ ಅಂಚಿಗೆ ತಲುಪಿದೆ. ಇದನ್ನು ಉಳಿಸಿಕೊಳ್ಳಲು ಸರ್ಕಾರದ ಸಹಾಯಹಸ್ತದ ಅವಶ್ಯಕತೆ ಇದೆ.ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದು, ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ನೇಕಾರರಿಗೂ ವಿಸ್ತರಿಸಬೇಕು. ಕೈಮಗ್ಗ ಅಭಿವೃದ್ಧಿ ನಿಗಮವನ್ನು ಮೇಲ್ದರ್ಜೆಗೇರಿಸಿ ನಿರಂತರ ಉದ್ಯೋಗ ಕಲ್ಪಿಸಬೇಕು. ರಬಕವಿಯಲ್ಲಿ ಜವಳಿ ಪಾರ್ಕ್ ಗೆ ಮೀಸಲಿಟ್ಟ ಜಾಗದ ಪಕ್ಕ ಇನ್ನಷ್ಟು ಜಾಗ ಪಡೆದು ಜವಳಿ ಪಾರ್ಕ್ ಆರಂಭಿಸಬೇಕು. ಜವಳಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಎಲ್ಲ ನೇಕಾರರಿಗೂ ನೇಕಾರ ಸಮ್ಮಾನ್ ಯೋಜನೆ ವಿಸ್ತರಿಸಬೇಕು.
-ಶಿವಲಿಂಗ ಟಿರಕಿ ಅಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘನೇಕಾರಿಕೆ ಅಬಾಧಿತವಾಗಿ ಸಾಗಲು ಆವರ್ತ ನಿಧಿ ಸ್ಥಾಪಿಸುವ ಜೊತೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ರಾಜ್ಯದ ನೇಕಾರರು ತಯಾರಿಸಿದ ಬಟ್ಟೆ ಬಳಸಲು ಆದೇಶಿಸಬೇಕು. ಜವಳಿ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ಬೇಕು. ನೇಕಾರರಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕೋಟ್ಯಂತರ ಬಂಡವಾಳ ಹೂಡಿರುವ ನೇಕಾರರಿಗೆ ಕೌಶಲಯುತ ನೇಯ್ಗೆ ತರಬೇತಿ ನೀಡಬೇಕು.- ರವಿ ದೇಸಾಯಿ, ಪ್ರಶಾಂತ ಪಾಲಭಾಂವಿ. ಪಾಲಗಿರಿ ಟೆಕ್ಸಟೈಲ್ ರಬಕವಿ