ಸಾರಾಂಶ
ಕೊಪ್ಪಳ:
ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಂಪನಿ ₹ 54 ಸಾವಿರ ಕೋಟಿ ವೆಚ್ಚದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿ ನಿರ್ಮಾಣಕ್ಕೆ ಚಾಲನೆ ನೀಡಿರುವುದನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.ಜಿಲ್ಲೆಯ ಸರ್ವಪಕ್ಷದ ನಾಯಕರ ನಿಯೋಗದ ಮನವಿಯನ್ನು ತಮ್ಮ ಗೃಹ ಕಚೇರಿಯಲ್ಲಿ ಸ್ವೀಕರಿಸಿದ ಅವರು, ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಕಾರ್ಖಾನೆ ಆರಂಭಿಸಲು ನಡೆದಿರುವ ಸಿದ್ಧತೆ ನಿಲ್ಲಿಸುವಂತೆ ಹೇಳಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜಿನೀಶ್ ಅವರಿಗೂ ಸೂಚಿಸಿದ ಸಿದ್ದರಾಮಯ್ಯ, ಕಾರ್ಖಾನೆ ಸ್ಥಾಪನೆಗೆ ಜನರು ಹಾಗೂ ಗವಿಸಿದ್ಧೇಶ್ವರ ಶ್ರೀಗಳ ವಿರೋಧವಿದೆ. ಜತೆಗೆ ಜಿಲ್ಲೆಯ ಸರ್ವಪಕ್ಷ ನಿಯೋಗವು ಮನವಿ ಸಲ್ಲಿಸಿದೆ. ಹೀಗಾಗಿ ಜನರಿಗೆ ತೊಂದರೆಯಾಗುವ ಸ್ಥಳದಲ್ಲಿ ಕಾರ್ಖಾನೆ ಆರಂಭಿಸುವ ಅಗತ್ಯವಿಲ್ಲ. ಈ ದಿಸೆಯಲ್ಲಿ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೋರ್ಟ್‌ಗೆ ಹೋಗುತ್ತಾರೆ:ಈ ಮೊದಲು ಸರ್ವಪಕ್ಷದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ, ಕಳೆದ ಹತ್ತು ವರ್ಷದಿಂದ ಕಾರ್ಖಾನೆ ಸ್ಥಾಪಿಸುವ ಕುರಿತು ಕಾಮಗಾರಿ ನಡೆಯುತ್ತಿದೆ. ಅವರು ಸುಪ್ರೀಂ ಕೋರ್ಟ್‌ಗೂ ಹೋಗಿ ಗೆದ್ದು ಬಂದಿದ್ದಾರೆ. ಹೀಗಿರುವಾಗ ಕಾರ್ಖಾನೆ ರದ್ದು ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಈಗ ಕೇವಲ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಇದಲ್ಲದೆ ಅವರು ಪರಿಸರ ಇಲಾಖೆ ಅನುಮತಿ ಪಡೆಯಬೇಕು. ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಕೇಂದ್ರ ಸರ್ಕಾರದಿಂದ ಸಹ ಅನುಮತಿ ಪಡೆಯಬೇಕು. ಸಮಾವೇಶದಲ್ಲಿ ಆಗಿರುವ ಒಡಂಬಡಿಕೆಯನ್ನು ಬೇರೆ ಎಲ್ಲಿಯಾದರೂ ಸ್ಥಾಪಿಸಿಕೊಳ್ಳಬಹುದು ಎಂದರು.
ಈ ಹಿಂದೇ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ ದಿನಕ್ಕೂ ಪ್ರಸ್ತುತ ಸನ್ನಿವೇಶಕ್ಕೆ ಬಹಳ ವ್ಯತ್ಯಾಸವಿದೆ. ಕೊಪ್ಪಳ ನಗರ ಬೆಳೆದಿದೆ. ಕಾರ್ಖಾನೆ ಸ್ಥಾಪಿಸುವ ಜಾಗದ ಹತ್ತಿರದಲ್ಲಿಯೇ ಜಿಲ್ಲಾ ಕೇಂದ್ರವಿದೆ. ಹೀಗಾಗಿ, ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡಲು ಬರುವುದಿಲ್ಲ. ಬೇರೆಡೆ ಸ್ಥಳಾಂತರಿಸಬೇಕು ಎಂದು ವಿವರಿಸಿದರು. ಆಗ ಮುಖ್ಯಮಂತ್ರಿ, ಸರ್ಕಾರ ಮುಖ್ಯಕಾರ್ಯದರ್ಶಿ ಕರೆಸಿ ಚರ್ಚಿಸಿದರು. ಬಳಿಕ ಕೊಪ್ಪಳ ಜಿಲ್ಲಾಧಿಕಾರಿಗೆ ಕರೆ ಮಾಡಿ, ಕೂಡಲೇ ಕಾರ್ಖಾನೆ ಸ್ಥಾಪನೆ ಜಾಗಕ್ಕೆ ಜಿಲ್ಲಾ ವರಿಷ್ಠಾಧಿಕಾರಿಯನ್ನು ಕರೆದುಕೊಂಡು ಹೋಗಿಯಾದರೂ ಕಾಮಗಾರಿ ನಿಲ್ಲಿಸಬೇಕೆಂದು ಸೂಚಿಸಿದರು.ಡಿಸಿಎಂ ಸಹ ಬೆಂಬಲ:
ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಸಹ ಸರ್ವಪಕ್ಷ ನಿಯೋಗ ಭೇಟಿ ಮನವಿ ಸಲ್ಲಿಸಿದ್ದು, ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಸ್ಥಳದಲ್ಲಿ ಏಕೆ ಕಾರ್ಖಾನೆ ಹಾಕಬೇಕು? ಇದಕ್ಕೆಲ್ಲ ನಾನು ಅವಕಾಶ ನೀಡುವುದಿಲ್ಲ. ಜನರ ಪರವಾಗಿ ಕಾರ್ಖಾನೆ ಬೇರೆಡೆ ಸ್ಥಳಾಂತರಿಸುವ ದಿಸೆಯಲ್ಲಿ ಕ್ರಮವಹಿಸುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಹ ಮನವಿ ಸ್ವೀಕರಿಸಿ, ಈಗಾಗಲೇ ಗವಿಸಿದ್ಧೇಶ್ವರ ಶ್ರೀಗಳೊಂದಿಗೆ ಮಾತನಾಡಿದ್ದೇನೆ. ಅವರು ಸಹ ಕಾರ್ಖಾನೆ ಬೇಡವೆಂದು ಹೇಳಿದ್ದಾರೆ. ನಾವು ಸಹ ಅದನ್ನು ಗಂಭೀರವಾಗಿಯೇ ಪರಿಗಣಿಸಿದ್ದೇವೆ. ಕೊಪ್ಪಳಕ್ಕೆ ಬಂದು ಪರಿಶೀಲಿಸುತ್ತೇನೆ ಎಂದರು.
ನಿಯೋಗದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನರೆಡ್ಡಿ, ದೊಡ್ಡನಗೌಡ ಪಾಟೀಲ್, ಬನಸಗೌಡ ಬಾದರ್ಲಿ, ಹೇಮಲತಾ ನಾಯಕ, ಶರಣೇಗೌಡ ಬಯ್ಯಾಪುರ, ಮಾಜಿ ಸಚಿವ ಅಮರೇಗೌಡ ಭಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಕರಿಯಣ್ಣ ಸಂಗಟಿ, ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಕೆ. ಬಸವರಾಜ ಹಿಟ್ನಾಳ, ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ, ವೀರೇಶ ಮಹಾಂತಯ್ಯನಮಠ, ರೆಡ್ಡಿ ಶ್ರೀನಿವಾಸ, ಶರಣಪ್ಪ ಸಜ್ಜನ ಸೇರಿದಂತೆ ಅನೇಕರು ಇದ್ದರು.