ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡಿನ ಬಲಂಬೇರಿಯ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್‌ನಲ್ಲಿ 15ನೇ ವರ್ಷದ ಗನ್ ಕಾರ್ನಿವಲ್- ತೋಕ್ ನಮ್ಮೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವಂಡ ನಿಶಾ ಅಚ್ಚಯ್ಯ ಅವರು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‌ಪಾಟ್ ಹಾಡಿದರು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂದೂಕು/ತೋಕ್ ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತಾಗಿದ್ದು, ಪೂರ್ವಕಾಲದ ಸಂಪ್ರದಾಯ, ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಹಾಗೂ ಸಂರಕ್ಷಿಸಲು ಸಿಎನ್‌ಸಿ ಪ್ರತಿವರ್ಷ ತೋಕ್ ನಮ್ಮೆಯನ್ನು ಸಾರ್ವಜನಿಕ ಗನ್ ಕಾರ್ನಿವಲ್ ನ್ನಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ಆದಿಮ ಸಂಜಾತ ಕೊಡವ ಜನಾಂಗೀಯ ಹೆಗ್ಗುರುತು ಭೂಮಿ ತಾಯಿ, ಪ್ರಕೃತಿ ಮಾತೆ, ಜಲದೇವತೆ ಪವಿತ್ರ ಕಾವೇರಿ ನದಿ, ಬುಡಕಟ್ಟು ಪ್ರಾಚೀನತೆ ಜನಾಂಗ, ದೈವಿಕ ವನಪ್ರದೇಶಗಳು, ಪೂಜನೀಯ ಮಂದ್‌ಗಳು, ಪಾರಂಪರಿಕ ಸಾಮುದಾಯಿಕ ಭೂಮಿಗಳು, ಅಲಿಖಿತ ಮೌಖಿಕ ಜಾನಪದ-ಕಾನೂನು ವ್ಯವಸ್ಥೆಗಳು ಮತ್ತು ತೋಕ್/ಬಂದೂಕು ಸಂಸ್ಕೃತಿಯೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಇವು ಕೊಡವ ಜನಾಂಗದ ಭೂತ, ವರ್ತಮಾನ ಮತ್ತು ಭವಿಷ್ಯದಿಂದ ಬೇರ್ಪಡಿಸಲಾಗದ ಕೊಡವ ಪರಂಪರೆಯ ಶ್ರೀಮಂತ ಭಂಡಾರಗಳಾಗಿವೆ ಎಂದರು.
ನಿಶ್ಯಸ್ತ್ರಿಕರಣ ಕಾಯಿದೆ ಜಾರಿಗೆ ಬಂದಾಗಿನಿಂದ, ಆದಿಮಸಂಜಾತ ಕೊಡವ ಜನಾಂಗವು ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಗಿಗಳನ್ನು ಪಡೆಯುವುದರಿಂದ ವಿನಾಯಿತಿ ಪಡೆದಿದೆ. ಇದು ಕಾಲಾನಂತರದಲ್ಲಿ ವಿವಿಧ ಆಡಳಿತಗಾರರಿಂದ ಗುರುತಿಸಲ್ಪಟ್ಟಿದೆ. ಭಾರತ ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಈ ವಿನಾಯಿತಿ ಮುಂದುವರೆಯಿತು. ಆದಾಗ್ಯೂ, 1956 ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯಡಿಯಲ್ಲಿ ಕೊಡಗು ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ ನಂತರ, ಆಡಳಿತ ವರ್ಗವು ವಿವಿಧ ದುರುದ್ದೇಶಪೂರಿತ ತಂತ್ರಗಳ ಮೂಲಕ ನಮ್ಮ ಧಾರ್ಮಿಕ ಸಂಸ್ಕಾರವಾದ ತೋಕ್/ಬಂದೂಕು ಹಕ್ಕುಗಳನ್ನು ಅಪಾಯಕ್ಕೆ ತರಲು ಪ್ರಾರಂಭಿಸಿತು.ಹಳೇ ಮೈಸೂರಿನ ಪ್ರಬಲ ಸಮುದಾಯಗಳಿಂದ ಪ್ರಭಾವಿತವಾಗಿರುವ ಸರ್ಕಾರಿ ಅಂಗಗಳು ಕೊಡವ ಹಕ್ಕುಗಳನ್ನು ದುರ್ಬಲಗೊಳಿಸಲು ಸಂವಿಧಾನೇತರ ಶಕ್ತಿ ಕೇಂದ್ರಗಳನ್ನು ಬಳಸಿಕೊಂಡಿವೆ. ಅವರು ಕೊಡವ ಅಸ್ತಿತ್ವ ಮತ್ತು ಗುರುತನ್ನು ನಿರರ್ಥಕಗೊಳಿಸಲು ಮತ್ತು ಕಾನೂನುಬಾಹಿರಗೊಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅಪರೂಪದ, ಪುರಾತನವಾದ ಕೊಡವ ಜನಾಂಗವನ್ನು ರಕ್ಷಿಸುವ ಬದಲು, ರಾಜಕೀಯ ಪ್ರಭಾವ ಮತ್ತು ಜನಸಂಖ್ಯಾ ಪ್ರಾಬಲ್ಯವನ್ನು ಬಳಸಿಕೊಂಡು ನಮ್ಮನ್ನು ಬೆದರಿಸುತ್ತಾರೆ. ಕೊಡವ ಜನಾಂಗದ ಧಾರ್ಮಿಕ-ಸಾಂಸ್ಕೃತಿಕ ಲಾಂಛನ ಹಾಗೂ ಜನಪದ ಸಂಕೇತವಾಗಿರುವ ಬಂದೂಕನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಹಾಗೂ ಈ ತೋಕ್ ಸಂಸ್ಕೃತಿ ಶಾಶ್ವತವಾಗಿ ಸ್ಥಿರೀಕರಣಗೊಳ್ಳಲು ಹಾಗೂ ಇದರ ಸ್ಥಿತಿಸ್ಥಾಪಕತ್ವನ್ನು ಕಾಯ್ದುಗೊಳ್ಳಲು ರಾಜ್ಯಾಂಗ ಖಾತ್ರಿ ಅತ್ಯವಶ್ಯವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ವಿಶ್ವದಲ್ಲೇ ಈ ವೈಶಿಷ್ಟ್ಯ ಪೂರ್ಣ ಕೊಡವ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯೆ ಏಷ್ಯಾ ದೇಶಗಳಲ್ಲಿ ನಡೆಸುತ್ತಿರುವ ಸಂಪ್ರದಾಯಿಕ ‘ಬುಜಕಾಸಿ’ ಉತ್ಸವದಂತೆ ನಡೆಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಕೊಡವರ ಪರವಾದ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕೆಂಬ ನಿರ್ಣಯ ಅಂಗೀಕರಿಸಲಾಯಿತು.