ಸಮಾನ ಸಾಕ್ಷರತೆ ಪದ್ಧತಿ ಜಾರಿಗೆ ತಂದದ್ದು ಬಸವಣ್ಣ: ಬಸವಾನಂದ ಸ್ವಾಮೀಜಿ

| Published : Dec 19 2024, 12:33 AM IST

ಸಮಾನ ಸಾಕ್ಷರತೆ ಪದ್ಧತಿ ಜಾರಿಗೆ ತಂದದ್ದು ಬಸವಣ್ಣ: ಬಸವಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇಷ್ಟಲಿಂಗದ ಜನಕ ಬಸವಣ್ಣ. ಅಲ್ಲದೇ ತನ್ನ ಸಹೋದರಿ ಅಕ್ಕನಾಗಮ್ಮನಿಗೆ ಮೊದಲ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆಗೆ ಮುನ್ನುಡಿ ಬರೆದರು ಎಂದು ಧಾರವಾಡದ ಮನಗುಂಡಿ ಗುರುಬಸವ ಮಹಾಮನೆ ಶ್ರೀ ಬಸವಾನಂದ ಸ್ವಾಮೀಜಿ ತಿಳಿಸಿದರು. ಗುಂಡ್ಲುಪೇಟೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಇಷ್ಟಲಿಂಗದ ಜನಕ ಬಸವಣ್ಣ. ಅಲ್ಲದೇ ತನ್ನ ಸಹೋದರಿ ಅಕ್ಕನಾಗಮ್ಮನಿಗೆ ಮೊದಲ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆಗೆ ಮುನ್ನುಡಿ ಬರೆದರು ಎಂದು ಧಾರವಾಡದ ಮನಗುಂಡಿ ಗುರುಬಸವ ಮಹಾಮನೆ ಶ್ರೀ ಬಸವಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಎಸ್‌ಎನ್ ಕುಟುಂಬ ಹಾಗೂ ಗುಂಡ್ಲುಪೇಟೆ ಸ್ನೇಹಬಳಗ ಏರ್ಪಡಿಸಿದ್ದ ವಚನ ಹೃದಯ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ವಯಸ್ಕ ಶಿಕ್ಷಣ ಪದ್ದತಿ, ಸಮಾನ ಸಾಕ್ಷರತೆ ಪದ್ಧತಿ ಜಾರಿಗೆ ತಂದವ ಕೂಡ ಬಸವಣ್ಣ ಎಂದರು. ಜನಪದ ಸಾಹಿತ್ಯ ವಚನ ಸಾಹಿತ್ಯಕ್ಕಿಂತಲೂ ಹಳೆಯದು, ಆದರೆ ವಚನ ಸಾಹಿತ್ಯ ಮಾತ್ರ ಬಸವಣ್ಣನ ಮಹಾಮನೆಯಲ್ಲೇ ಪ್ರಾರಂಭವಾಯಿತು. ಹೆಣ್ಣು ಗಂಡಿನ ಸಮಾನತೆ ಸಾರಿದ ವಿಶ್ವದ ಮೊದಲ ಧರ್ಮ ವೀರಶೈವ ಲಿಂಗಾಯಿತ ಧರ್ಮ ಎಂದರು.

ಬಾಲ್ಕಿಯಲ್ಲಿ ನಡೆದ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಕಾರ್ಯಕ್ರಮ ವಚನ ಹೃದಯ ಕೃತಿ ಬರೆಯಲು ವೇದಿಕೆಯಾಯಿತು. ಬಸವಣ್ಣ ಜೀವಿತಾವಧಿ ಬಗ್ಗೆ ಹರಿಹರ, ಭೀಮ ಕವಿ ಗೊಂದಲದ ವಿವರ ನೀಡಿದ್ದಾರೆ. ೮ನೇ ವಯಸ್ಸಿಗೆ ಮನೆ ಬಿಟ್ಟು, ೨೬ ವರ್ಷ ಕಲ್ಯಾಣದಲ್ಲಿ ಇದ್ದರು. ಅವರ ಜೀವಿತಾವಧಿ ೬೩ ವರ್ಷಗಳು ಎಂದರು. ದಶಕದ ಹಿಂದೆ ಪಟ್ಟಣದ ಶ್ರೀ ಮದ್ದಾನೇಶ್ವರ ಮಹಾಮನೆಯಲ್ಲಿ ಪ್ರವಚನ ಕಾರ್ಯಕ್ರಮ ನಡೆಸಿದ್ದನ್ನು ಸ್ಮರಿಸಿದ ಅವರು ಮತ್ತೊಮ್ಮೆ ತಾಲೂಕಿನಲ್ಲಿ ಪ್ರವಚನ ಕಾರ್ಯಕ್ರಮ ನಡೆಸುವ ಆಸಕ್ತಿ ವ್ಯಕ್ತಪಡಿಸಿದರು. ತಾಲೂಕಿನ ರೈತರ ಮಕ್ಕಳು ನಗರ ಪ್ರದೇಶದ ಕಡೆಗೆ ಆಸಕ್ತಿ ವಹಿಸದೇ ಓದಿನ ನಂತರ ಸಾವಯವ ಕೃಷಿ ಕೈಗೊಳ್ಳುವ ಮೂಲಕ ಸಮೃದ್ಧ ಜೀವನ ನಡೆಸಿ ಎಂದು ಶ್ರೀಗಳು ಸಲಹೆ ನೀಡಿದರು.

ಕೃತಿ ಲೋಕಾರ್ಪಣೆಗೊಳಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಮಠಗಳು ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರುತ್ತವೆ. ಆದರೆ ಬಸವಾನಂದ ಸ್ವಾಮೀಜಿ ತಾವು ದಿವ್ಯಾಂಗರು ಎಂಬ ಕೊರತೆಯನ್ನು ಮೀರಿ ವಚನ ಹೃದಯ ಕೃತಿ ರಚನೆ ಮಾಡಿದ್ದಾರೆ ಎಂದರು. ಎಲ್ಲರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶ್ರೀಗಳು ಉಪವಾಸದ ಪರಿಕಲ್ಪನೆ ಮೂಲಕ ಆರೋಗ್ಯ ಪೂರ್ಣ ಜೀವನ ನಡೆಸಲು ಸಹಕಾರಿಯಾಗಿದ್ದಾರೆ. ಉಪವಾಸ ಮಾಡಿದ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಕೂಡ ಬಾಧಿಸಲಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಡುಗೂರು ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಚಿಕ್ಕತುಪ್ಪೂರು ಮಠಾಧೀಶ ಚನ್ನವೀರಸ್ವಾಮೀಜಿ ಆಶೀರ್ವಚನ ನೀಡಿದರು. ಕೃತಿ ಕುರಿತು ಲೇಖಕರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಮಾತನಾಡಿ ಕೃತಿಯ ಪರಿಚಯ ಮಾಡಿಕೊಟ್ಟರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಸ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಹಿರಿಯ ಮುಖಂಡ ಎಚ್.ಎಸ್.ಪ್ರಭುಸ್ವಾಮಿ ಹಾಜರಿದ್ದರು.