ಕನ್ನಡಪ್ರಭ ವಾರ್ತೆ ಮಡಿಕೇರಿ

ದೇವಟ್ ಪರಂಬ್ ನಲ್ಲಿ ವಂಚನೆಯಿಂದ ಹತ್ಯೆಗೊಳಗಾದ ಕೊಡವ ಯೋಧರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗೌರವ ಅರ್ಪಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ಭೇಟಿ ನೀಡಿದ ಪ್ರಮುಖರು ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಇತಿಹಾಸದ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ದೇವಟ್ ಪರಂಬು ಹತ್ಯಾಕಾಂಡವು ಕೊಡವರ ಇತಿಹಾಸದಲ್ಲಿ ಒಂದು ಮರೆಯಲಾಗದ ಮತ್ತು ಕ್ಷಮಿಸಲಾಗದ ದುರಂತವಾಗಿದೆ. ಘಟನೆಗೆ ಸಾಂತ್ವನವಾಗಿ ದೇವಟ್‌ಪರಂಬ್ ನಲ್ಲಿ ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮಾರಕವನ್ನು ನಿರ್ಮಿಸಬೇಕು ಮತ್ತು ಕೊಡವ ಜನಾಂಗೀಯ ಹತ್ಯೆಯನ್ನು ಯುಎನ್‌ಒ ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರ ಜನಸಂಖ್ಯೆಯನ್ನು ಎಣಿಕೆ ಮಾಡಲು ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ರಚಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹಕ್ಕೊತ್ತಾಯಗಳನ್ನು ಮಂಡಿಸಿದರು.ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಮಾಂಗೇರಿರ ಜಗದೀಶ್, ಕೊಟ್ಟುಕತ್ತಿರ ರೋಷನ್ ಹಾಗೂ ಕೊಟ್ಟುಕತ್ತಿರ ಅಕ್ಷಯ್ ಪಾಲ್ಗೊಂಡಿದ್ದರು.