ಸಾರಾಂಶ
ಸಿಎನ್‌ಸಿ ಬುಧವಾರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. 2024ರ ವಿಶ್ವ ಮಾತೃಭಾಷಾ ದಿನದಂದು ಯುನೆಸ್ಕೋ ‘ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ’ ಎಂಬ ಘೋಷವಾಕ್ಯ ಮೊಳಗಿಸಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ವಿಶ್ವರಾಷ್ಟ್ರಸಂಸ್ಥೆಯ ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾದ ಬುಧವಾರ (ಫೆ.21) ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
2024ರ ವಿಶ್ವ ಮಾತೃಭಾಷಾ ದಿನದಂದು ಯುನೆಸ್ಕೋ ‘ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ’ ಎಂಬ ಘೋಷವಾಕ್ಯ ಮೊಳಗಿಸಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತೀ ವರ್ಷ ಆಕ್ಸ್ ಫರ್ಡ್‌ಡಿಕ್ಷನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಹೊಸ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಡಿಕ್ಷನರಿ ಎರಡನ್ನು ಕೂಡ ಸಮೃದ್ಧ ಮತ್ತು ಶ್ರೀಮಂತಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಒಟ್ಟು 27 ಹಕ್ಕೊತ್ತಾಯಗಳನ್ನ ಮಂಡಿಸಿದರು.
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು, ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡಗಿನ ಆದಿಮ ಸಂಜಾತ ಕೊಡವ ಬುಡಕಟ್ಟು ಕುಲವನ್ನು ಪ್ರಿಮೇಟಿವ್ ಟ್ರೆಬ್ ಎಂದು ಪರಿಗಣಿಸಬೇಕು ಮತ್ತು ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು ಎಂದು ಆಗ್ರಹಿಸಲಾಯಿತು.ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವ ವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತಪುರ ನಲ್ಲಿರುವ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಮತ್ತು ಟೋಕಿಯೋದಲ್ಲಿರುವ ವಿಶ್ವಸಂಸ್ಥೆ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಕೊಡವರ ಹಬ್ಬ ಹರಿದಿನಗಳ ಹೆಸರುಗಳನ್ನು ಕನ್ನಡೀಕರಣಗೊಳಿಸದೆ ಕೊಡವ ಸಾಂಪ್ರದಾಯಿಕ ಪದಗಳನ್ನೇ ಬಳಸಬೇಕು. ಇಂಗ್ಲೀಷ್ ಸಾಫ್ಟ್‌ವೇರ್‌ನಲ್ಲಿ ಕೊಡಗು ಜಿಲ್ಲೆಯನ್ನು ಮಡಿಕೇರಿ ಜಿಲ್ಲೆ ಎಂದು ಪದೇ ಪದೇ ನಮೂದಿಸುವ ಮೂಲಕ ದಾಷ್ಟ್ರ್ಯತನ ಮೆರೆಯಲಾಗುತ್ತಿದೆ. ಕೊಡಗು ಹೆಸರು ಕೊಡವ ಭಾಷೆಯಿಂದ ವಿಕಾಸಗೊಂಡದ್ದಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯನ್ನು ಇಂಗ್ಲಿಷ್‌ನಲ್ಲಿ ಭಾಷಾಂತರಿಸುವಾಗ ಮಡಿಕೇರಿ ಜಿಲ್ಲೆ ಎಂದು ನಮೂದಿಸದೆ ಕೊಡಗು ಎಂದೇ ನಮೂದಿಸುವ ಮೂಲಕ ಕೊಡವರ ಭಾವನೆಗಳಿಗೆ ಗೌರವ ಕೊಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.ಧರಣಿಯಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಾಂಡೇರ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೊಡವ ಕೊಡವತಿಯರು ಸಂವಿಧಾನಿಕ ಹಕ್ಕೊತ್ತಾಯಗಳ ಸಾಧನೆಗಾಗಿ ಗುರು-ಕಾರೋಣ, ಧಾರ್ಮಿಕ ಸಂಸ್ಕಾರ ಕೋವಿ, ಸೂರ್ಯ-ಚಂದ್ರ, ಭೂದೇವಿ, ದೈವಿಕ ಜಲದೇವಿ ಕಾವೇರಿ ಮತ್ತು ವನದೇವತೆ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.