ವಿಕಸಿತ ಭಾರತದಲ್ಲಿ ಸಹಕಾರಿ ಕ್ಷೇತ್ರದ ಪಾತ್ರವೂ ದೊಡ್ಡದು: ಬಿ.ಎಲ್‌. ವರ್ಮಾ

| Published : Feb 11 2024, 01:48 AM IST / Updated: Feb 11 2024, 03:24 PM IST

B.L. Verma
ವಿಕಸಿತ ಭಾರತದಲ್ಲಿ ಸಹಕಾರಿ ಕ್ಷೇತ್ರದ ಪಾತ್ರವೂ ದೊಡ್ಡದು: ಬಿ.ಎಲ್‌. ವರ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಭಾರೀ ದೊಡ್ಡ ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಹಕಾರ ಖಾತೆಯ ರಾಜ್ಯ ಸಚಿವ ಬಿ.ಎಲ್‌. ವರ್ಮಾ ಹೇಳಿದರು.

ಹುಬ್ಬಳ್ಳಿ: 2047ರಲ್ಲಿ ಭಾರತ ಸಂಪೂರ್ಣ ವಿಕಸಿತ ದೇಶವಾಗಿ ಹೊರಹೊಮ್ಮಲಿದೆ. ಇದರಲ್ಲಿ ದೇಶದ ಸಹಕಾರ ಕ್ಷೇತ್ರದ ಪಾಲು ಕೂಡ ಬಹುದೊಡ್ಡದಿರಲಿದೆ ಎಂದು ಕೇಂದ್ರ ಸರ್ಕಾರದ ಸಹಕಾರ ಖಾತೆಯ ರಾಜ್ಯ ಸಚಿವ ಬಿ.ಎಲ್‌. ವರ್ಮಾ ಅಭಿಪ್ರಾಯಪಟ್ಟರು.

ಇಲ್ಲಿಯ ಎಪಿಎಂಸಿ ಎದುರಿನ ವಿದ್ಯಾಧಿರಾಜ ಭವನದಲ್ಲಿ ಶನಿವಾರ ಸಹಕಾರ ಭಾರತಿ ಕರ್ನಾಟಕದ ವತಿಯಿಂದ ಅಖಿಲ ಭಾರತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪ್ಯಾಕ್ಸ್‌) ಸಂಘಗಳ ಮಹಾಧಿವೇಶನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಭಾರೀ ದೊಡ್ಡ ಸಂಕಲ್ಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇಡೀ ದೇಶವೇ ಹೆಜ್ಜೆ ಇಡುತ್ತಿದೆ. ಇದರಲ್ಲಿ ಸಹಕಾರ ಕ್ಷೇತ್ರದ ಪಾತ್ರವೂ ಬಹಳ ಮಹತ್ತರದ್ದಾಗಿದೆ ಎಂದರು.

ಸಹಕಾರ ಇಲಾಖೆಯನ್ನು ಬಲವರ್ಧನೆ ಮಾಡಲು ಕೇಂದ್ರ ಸರ್ಕಾರ ಬಹಳಷ್ಟು ಕ್ರಮ ಕೈಗೊಂಡಿದೆ. ಈಗಾಗಲೇ 300ಕ್ಕೂ ಹೆಚ್ಚು ಸೊಸೈಟಿಗಳನ್ನು ಗಣಕೀಕರಣ ಮಾಡಲಾಗಿದೆ. ಗಣಕೀಕರಣಕ್ಕಾಗಿ ಕರ್ನಾಟಕಕ್ಕೆ ₹40 ಕೋಟಿ ಅನುದಾನ ನೀಡಲಾಗುವುದು ಎಂದರು.

ಇದು ಸಹಕಾರಿಗಳ ಸಹಕಾರ ಇಲ್ಲದೇ ಸಾಧ್ಯವಿಲ್ಲ. ಹಾಗಾಗಿ, ಸಹಕಾರ ರಂಗ ಬಲವರ್ಧನೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕಿಸಾನ್​ ಸಮೃದ್ಧಿ, ಜನೌಷಧಿ, ಗ್ಯಾಸ್​ ಏಜೆನ್ಸಿ, ಪೆಟ್ರೋಲ್​ ಪಂಪ್​, ಕುಡಿಯುವ ನೀರು, ಹೀಗೆ ಎಲ್ಲ ಕಾರ್ಯಗಳನ್ನು ಗ್ರಾಮದ ಸಹಕಾರ ಸಂಘವೇ ನಿರ್ವಹಣೆ ಮಾಡಲಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಈ ಮೊದಲಿದ್ದ ₹25 ಸಾವಿರ ಕೋಟಿಯಿಂದ ₹1.25 ಲಕ್ಷ ಕೋಟಿಗೆ ಕೇಂದ್ರದ ಬಿಜೆಪಿ ಸರ್ಕಾರ ಹೆಚ್ಚಿಸಿದೆ ಎಂದು ನುಡಿದರು.

ವಸ್ತುಗಳನ್ನು ಸಂಗ್ರಹ ಮಾಡಲು ಗೋದಾಮು ನಿರ್ಮಿಸಲು ಸಹಕಾರ ಸಂಘಗಳಿಗೆ ಭೂಮಿ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗೆ ಕೇಂದ್ರ ಸರ್ಕಾರ ಸಹಕಾರ ಇಲಾಖೆಯಿಂದ ಪತ್ರ ಬರೆಯಲಾಗಿದೆ. ರಾಜ್ಯಗಳು ಹೇಗೆ ಸ್ಪಂದಿಸುತ್ತವೆ. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಎಲ್ಲ ರಾಜ್ಯ ಸರ್ಕಾರಗಳು ಆದ್ಯತೆ ನೀಡಬೇಕು ಎಂದರು.

ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನಾನಾಥ ಠಾಕೂರ ಮಾತನಾಡಿ, ಸಹಕಾರ ರಂಗಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸಾಲ ಕೊಡುವುದಷ್ಟೇ ಸಹಕಾರ ಸಂಘಗಳ ಕೆಲಸವಾಗಿಲ್ಲ. ಇದೀಗ ವಿವಿಧೋದ್ದೇಶದ ದರ್ಜೆಗೆ ಅವುಗಳನ್ನು ಏರಿಸಲಾಗಿದೆ. ಬ್ಯಾಂಕಿಂಗೇತರ ಸೌಲಭ್ಯಗಳು ಸಿಗಲಿವೆ ಎಂದರು.

ಸಮಾರೋಪ ಭಾಷಣ ಮಾಡಿದ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚಪುರ, ಇದು ರಾಜಕೀಯ ಸಮಾವೇಶವಲ್ಲ, ಸಹಕಾರಿಗಳ ಅಧಿವೇಶನ. ಪ್ಯಾಕ್ಸ್​ ಚೇರ್ಮನ್​ಗಳು ಒಬ್ಬ ಮುಖ್ಯಮಂತ್ರಿ ಮಾಡುವಷ್ಟು ಕೆಲಸ ಮಾಡಬಹುದು. ಆಹಾರ ಧಾನ್ಯ, ಸಾಲ, ಕೃಷಿ ಯಂತ್ರ, ಬೀಜ, ಗೊಬ್ಬರ ವಿತರಣೆ ಮಾತ್ರವಲ್ಲ, ಒಂದು ಗ್ರಾಮಕ್ಕೆ ಬೇಕಾದ ಎಲ್ಲವನ್ನೂ ಪೂರೈಸುವ ಸಂಘವಾಗಿ ಮಾರ್ಪಡಲಿದೆ. ಅಷ್ಟೊಂದು ಶಕ್ತಿಯುತವಾಗಲಿದೆ ಎಂದರು.

ಸಹಕಾರ ವಲಯದ ಕಾರ್ಯಚಟುವಟಿಕೆಗೆ ಇರುವ ಅಡೆತಡೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸದಸ್ಯರು, ಚೇರ್ಮನ್​ ಎಲ್ಲರೂ ಕರ್ತವ್ಯ ಮಾತ್ರ ನಿರ್ವಹಿಸಬೇಕು. ಅದು ಬಿಟ್ಟು ಪಕ್ಷಪಾತ ಮಾಡಬಾರದು ಎಂದು ಸಲಹೆ ನೀಡಿದರು.

ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ಸಹಕಾರ ಭಾರತಿ ಕರ್ನಾಟಕ ಪ್ಯಾಕ್ಸ್​ ಘಟಕದ ಸಂಚಾಲಕ ಮಲ್ಲಿಕಾರ್ಜುನ ಹೊರಕೇರಿ, ರಾಜಶೇಖರ ಶೀಲವಂತ, ರಾಜದತ್ತ ಪಾಂಡೆ, ಮೋಹನದಾಸ ನಾಯಕ, ನಾರಾಯಣಸ್ವಾಮಿ, ಇತರರು ಪಾಲ್ಗೊಂಡಿದ್ದರು.