ಸಾರಾಂಶ
-ರೈತರ ಅಭಿವೃದ್ಧಿ
-ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 49ನೇ ವಾರ್ಷಿಕ ಸಭೆಕನ್ನಡಪ್ರಭ ವಾರ್ತೆ ಹೊಸಕೋಟೆ
ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ನಿರಂತರವಾಗಿ ಶ್ರಮಿಸಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.ನಗರದ ಶ್ರೀವಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 49ನೇ ವಾರ್ಷಿಕ ಮಹಸಭೆಯಲ್ಲಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನಲ್ಲಿ ಒಟ್ಟು ಒಂಬತ್ತು ಸಹಕಾರ ಸಂಘಗಳಿದ್ದು, ಎಲ್ಲಕ್ಕಿಂತ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಅನೇಕ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚು ಸಾಲ ನೀಡುವ ಸಹಕಾರ ಸಂಘ ಇದಾಗಿದೆ. ಸಾಲ ವಸೂಲಿಯಲ್ಲೂ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನ ಹಲವು ಸಹಕಾರ ಸಂಘಗಳು ಡಿವಿಡೆಂಟ್ ನೀಡುವಲ್ಲಿ ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಈ ಸಂಘ ಕಳೆದ ಮೂರು ವರ್ಷಗಳಿಂದ ನಿಯಮಾನುಸಾರ ಗರಿಷ್ಠ ಡಿವಿಡೆಂಟ್ ನೀಡುತ್ತಿದೆ. ಈ ಸಹಕಾರ ಸಂಘ ಶುರುವಾಗಿ 49 ವರ್ಷಗಳ ಕಳೆದಿದ್ದು, ನೂತನ ಆವಿಷ್ಕಾರಗಳ ಮೂಲಕ ರೈತರ ಬಾಳಿಗೆ ಹೊಸ ಚೈತನ್ಯ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಹಕಾರ ಸಂಘದ ಅಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಸಂಘದಲ್ಲಿ 5161 ಜನ ಸದಸ್ಯರಿದ್ದಾರೆ. 2023-24ನೇ ಸಾಲಿನಲ್ಲಿ 1.52 ಕೋಟಿ ನಿವ್ವಳ ಲಾಭಗಳಿಸಿದ್ದು, ಸಾಲ ವಸೂಲಾತಿಯಲ್ಲಿ ಶೇ 99.20 ಪ್ರಗತಿ ಸಾಧಿಸಿದೆ. ಸಂಘ ಈ ಬಾರಿಯೂ ಷೇರುದಾರರಿಗೆ ಶೇ.25 ಗರಿಷ್ಠ ಡಿವಿಡೆಂಟ್ ಘೋಷಿಸಿದ್ದು, ಜಿಲ್ಲೆಯಲ್ಲಿ ಬೇರೆಯವರಿಗಿಂತ ಹೆಚ್ಚು ಡಿವಿಡೆಂಟ್ ಘೋಷಿಸಿದೆ ಎಂದು ಮಾಹಿತಿ ನೀಡಿದರು.
ಸಹಕಾರ ಸಂಘಗಳ ಜಂಟಿ ನಿರ್ದೇಶಕ ಅಶ್ವತ್ಥ್ ನಾರಾಯಣಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಎಸ್.ನಾರಾಯಣ ಶರ್ಮ, ಸಂಘದ ವ್ಯವಸ್ಥಾಪಕ ಹೆಚ್. ಎ.ನಂಜುಡೇಗೌಡ, ಮುಖಂಡ ಗೋಪಾಲಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಮುಲ್ ನಿರ್ದೇಶಕ ಎಲ್.ಎನ್.ಟಿ.ಮಂಜುನಾಥ್, ಸಂಘದ ನಿರ್ದೇಶಕರಾದ ಕೆ.ಸತೀಶ್, ಸಿವಿ.ಗಣೇಶ್, ಆರ್.ಸುಜಾತ, ರಾಜಪ್ಪ, ಎನ್.ವಿ.ವೆಂಕಟೇಶ್, ಅಶ್ವಥ್, ಡಿ.ಎಚ್.ಹರೀಶ್, ಬಿ.ಮುನಿರಾಜು, ನಾಗರತ್ನ, ಸುಬ್ರಮಣಿ, ರತ್ನಮ್ಮ ಇತರರಿದ್ದರು.