ಕರಾವಳಿ ಉತ್ಸವ ಮೈದಾನ: ಅ.1ರಂದು ‘ಪಿಲಿನಲಿಕೆ ಪಂಥ’ ದಶಮಾನ ವೈಭವ

| Published : Sep 10 2025, 01:05 AM IST

ಕರಾವಳಿ ಉತ್ಸವ ಮೈದಾನ: ಅ.1ರಂದು ‘ಪಿಲಿನಲಿಕೆ ಪಂಥ’ ದಶಮಾನ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ನಾಯಕ ಎಂ. ಮಿಥುನ್‌ ರೈ ನೇತೃತ್ವದಲ್ಲಿ ನಡೆಯುತ್ತಿರುವ ‘ಪಿಲಿನಲಿಕೆ ಪಂಥ’ ಈ ಬಾರಿ 10ನೇ ವರ್ಷಕ್ಕೆ ಕಾಲಿರಿಸಿದೆ. ಈ ದಶಮ ಸಂಭ್ರಮದ ಹಿನ್ನೆಲೆಯಲ್ಲಿ ಅ.1ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿನಲಿಕೆ ಪಂಥ-10’ ಕಾರ್ಯಕ್ರಮ ನೆರವೇರಲಿದೆ.

ಮಂಗಳೂರು: ಹುಲಿ ಕುಣಿತ ಸಂಪ್ರದಾಯಕ್ಕೆ ವಿಶೇಷ ಮೆರುಗು ನೀಡಿ ದೇಶ- ವಿದೇಶಗಳ ಜನರ ಗಮನ ಸೆಳೆದಿರುವ, ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವ ನಾಯಕ ಎಂ. ಮಿಥುನ್‌ ರೈ ನೇತೃತ್ವದಲ್ಲಿ ನಡೆಯುತ್ತಿರುವ ‘ಪಿಲಿನಲಿಕೆ ಪಂಥ’ ಈ ಬಾರಿ 10ನೇ ವರ್ಷಕ್ಕೆ ಕಾಲಿರಿಸಿದೆ. ಈ ದಶಮ ಸಂಭ್ರಮದ ಹಿನ್ನೆಲೆಯಲ್ಲಿ ಅ.1ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿನಲಿಕೆ ಪಂಥ-10’ ಕಾರ್ಯಕ್ರಮವನ್ನು ಮತ್ತಷ್ಟು ವೈಭವಯುತವಾಗಿ ನಡೆಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಎಂ. ಮಿಥುನ್‌ ರೈ, ಪಿಲಿನಲಿಕೆಯನ್ನು ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಂಡು ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಉದ್ಘಾಟನೆಗೆ ಡಿಸಿಎಂ ಡಿಕೆಶಿ:

ಪಿಲಿನಲಿಕೆ ಪಂಥ ಕಾರ್ಯಕ್ರಮವನ್ನು ಈ ಬಾರಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌, ಜಿಲ್ಲಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ. ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, ಸ್ಯಾಂಡಲ್‌ವುಡ್‌ ನಟರಾದ ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದು ಮಿಥುನ್‌ ರೈ ತಿಳಿಸಿದರು.

ಸ್ಪರ್ಧೆಗೆ 10 ತಂಡಗಳು:

ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿರುವ ಪ್ರತಿಷ್ಠಿತ 10 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ತಂಡಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಪ್ರತಿ ತಂಡಕ್ಕೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಸ್ಪರ್ಧೆ ರಾತ್ರಿವರೆಗೆ ನಡೆಯಲಿದೆ ಎಂದು ಹೇಳಿದರು.ನಮ್ಮ ಟಿವಿ ವಾಹಿನಿಯ ಮುಖ್ಯಸ್ಥ ಶಿವಶರಣ್‌ ಶೆಟ್ಟಿ, ಪ್ರತಿಷ್ಠಾನದ ಪ್ರಮುಖರಾದ ವಿಕಾಸ್‌ ಶೆಟ್ಟಿ, ಅವಿನಾಶ್‌ ಸುವರ್ಣ, ನವೀನ್‌ ಶೆಟ್ಟಿ ಎಡ್ಮೆಮ್ಮಾರ್‌, ದುಬೈ ಉದ್ಯಮಿ ಆನಂದ್‌ರಾಜ್‌ ಶೆಟ್ಟಿ ಇದ್ದರು.

ವಿಜೇತರಿಗೆ ಗರಿಷ್ಠ ಬಹುಮಾನ!

ಕರಾವಳಿ ಹುಲಿ ಕುಣಿತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತಿ ಹೆಚ್ಚು ಮೊತ್ತದ ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10 ಲಕ್ಷ ರು., ದ್ವಿತೀಯ 5 ಲಕ್ಷ ರು., ತೃತೀಯ 3 ಲಕ್ಷ ರು. ಬಹುಮಾನ ಮತ್ತು ಫಲಕ ನೀಡಲು ನಿರ್ಧರಿಸಲಾಗಿದೆ. ಪ್ರತಿ ತಂಡಕ್ಕೆ 50 ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುವುದು. ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50 ಸಾವಿರ ರು. ಬಹುಮಾನ ಹಾಗೂ ಫಲಕ ಸಿಗಲಿದೆ.

ದಶಮ ಸಂಭ್ರಮ ಪ್ರಯುಕ್ತ ಶಾಲೆ ದತ್ತು

ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಸರ್ಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಸರ್ವತೋಮುಖ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಸಹಕಾರ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಿಥುನ್‌ ರೈ ತಿಳಿಸಿದರು.