ಜಗತ್ತಿನ ಅತೀ ಎತ್ತರದ ರಸ್ತೆಯಲ್ಲಿ ಕರಾವಳಿ ಕುವರಿ ಬೈಕ್ ಸವಾರಿ

| Published : Aug 24 2024, 01:21 AM IST

ಸಾರಾಂಶ

ಮಹಿಳಾ ರೈಡರ್‌ಗಳ ದೇಶೀ ಸಂಘಟನೆ ಸಿಆರ್‌ಎಫ್ ಸದಸ್ಯೆಯಾಗಿದ್ದ ಪ್ರತಿಜ್ಞಾ ಶೆಟ್ಟಿ ತನ್ನ ಉದ್ಯೋಗದ ನೆಲೆ, ನಾಡಿನ ರಾಜಧಾನಿ ಬೆಂಗಳೂರಿನಿಂದ ಹೀಗೊಂದು ಪಯಣದ ಪಣತೊಟ್ಟರು.

ಗಣೇಶ್ ಕಾಮತ್

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಈಕೆಗೆ ಬಾಲ್ಯದಿಂದಲೇ ಬೈಕ್ ಎಂದರೆ ಭಾರೀ ಕುತೂಹಲ. ಅಪ್ಪನನ್ನು ಕಾಡಿ ಬೇಡಿ ಬೈಕನ್ನೇರಿ ಮನೆಯಂಗಳದಲ್ಲೇ ಕಲಿಯಲರಾಂಭಿಸಿದ ಆಕೆಗೆ ಅಪ್ಪನೇ ಮೊದಲ ಗುರು. ಕೊನೆಗೂ ಕಲಿತಾಯಿತು. ತನಗಿದ್ದ ಲಾಂಗ್ ಡ್ರೈವ್ ಕನಸು ನನಸಾಗಿಸಲು ಬೈಕನ್ನೇರಿಯೇ ಬಿಟ್ಟಳು. ಮೈಲುಗಟ್ಟಲೆ ಬೈಕ್ ರೈಡಿಂಗ್ ಹೋಗುವ ಮಗಳ ಉತ್ಸಾಹ ಅದೆಷ್ಟು ಸುರಕ್ಷಿತ ಎಂಬ ಆತಂಕ ಹೆತ್ತವರದ್ದು. ಅಂತೂ ಇಂತು ಅವರನ್ನೊಪ್ಪಿಸಿ ವಯನಾಡು , ಗೋವಾ, ಊಟಿ ಹೀಗೆ ಹತ್ತಾರು ಕಡೆ ಬೈಕ್ ರೈಡ್ ಮಾಡುತ್ತಲೇ ಸುತ್ತಾಡಿ ಭರವಸೆ ಮೂಡಿಸಿ ಕಾಶ್ಮೀರದ ಲಡಾಕ್‌ನ ಅತೀ ಎತ್ತರದ ರಸ್ತೆ ಸವಾರಿಗೆ ಹೊರಟು ಗೆದ್ದ ಸಾಧಕಿಯೇ ನಮ್ಮ ಕರಾವಳಿಯ ಕುವರಿ ಮೂಡುಬಿದಿರೆಯ ಪ್ರತಿಜ್ಞಾ ಶೆಟ್ಟಿ.

ಉತ್ತರದತ್ತ.. ಎತ್ತರದತ್ತ..!: ದಕ್ಷಿಣದ ಕರಾವಳಿಯಿಂದ ಉತ್ತರದ ಕಾಶ್ಮೀರದ ಲಡಾಕ್‌ನ ಉಮ್ ಲಿಂಗ್ ಲಾ ಎನ್ನುವ ಪ್ರದೇಶ ಸಮುದ್ರ ಮಟ್ಟದಿಂದ 19024 ಅಡಿ ಎತ್ತರದ ರಸ್ತೆ. ಇದು ಜಗತ್ತಿನ ಅತೀ ಎತ್ತರದ ರಸ್ತೆ ಎನ್ನುವ ದಾಖಲೆಯ ಸ್ಥಳ. ಎವರೆಸ್ಟ್ ಬೇಸ್ ಕ್ಯಾಂಪ್ ಎತ್ತರ (18953 ಅಡಿ) ಕ್ಕಿಂತಲೂ ಮೇಲಿರುವ ಅಪರೂಪದ ರೋಚಕ, ದುರ್ಗಮ ಸ್ಥಳ. ಅಲ್ಲಿಗೂ ಬೈಕ್ ಸವಾರಿ ಹೋಗಿ ಬರುವುದೆಂದರೆ ಅದೇನೂ ಸುಲಭ ಸಾಧ್ಯವಲ್ಲ.

ಮಹಿಳಾ ರೈಡರ್‌ಗಳ ದೇಶೀ ಸಂಘಟನೆ ಸಿಆರ್‌ಎಫ್ ಸದಸ್ಯೆಯಾಗಿದ್ದ ಪ್ರತಿಜ್ಞಾ ಶೆಟ್ಟಿ ತನ್ನ ಉದ್ಯೋಗದ ನೆಲೆ, ನಾಡಿನ ರಾಜಧಾನಿ ಬೆಂಗಳೂರಿನಿಂದ ಹೀಗೊಂದು ಪಯಣದ ಪಣತೊಟ್ಟರು.

ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದ ತಲಾ ಒಬ್ಬೊಬ್ಬರು ಯುವತಿಯರೂ ಜತೆಯಾದರು. ಕರ್ನಾಟಕವನ್ನು ಪ್ರತಿನಿಧಿಸಿದ ಪ್ರತಿಜ್ಞಾ 5600 ಕಿ.ಮೀ ಗೂ ಮಿಕ್ಕಿದ ಬರೋಬ್ಬರಿ 20 ದಿನಗಳ ಈ ಸಾಹಸವನ್ನು ಮೇ 26ರಂದು ಆರಂಭಿಸಿ ಯಶಸ್ವಿಯಾಗಿ ಗುರಿ ತಲುಪಿದ್ದಾರೆ. ಜೂನ್‌ 15ಕ್ಕೆ ವಾಪಸ್‌ ಊರಿಗೆ ವಾಪಸ್‌ ಬಂದಿದ್ದಾರೆ.

ಎಂಟು ರಾಜ್ಯಗಳನ್ನು ದಾಟಿ ರಸ್ತೆಯೇ ದುರ್ಗಮವಾಗಿರುವ ಲಡಾಕ್ ನ ಕೆಲವೊಂದು ಪ್ರದೇಶಗಳಲ್ಲಿ ಸೈನಿಕರ ಬಿಗಿ ಪಹರೆಯ ಪ್ರದೇಶಗಳನ್ನೂ ಹಾದು ಲಡಾಕ್‌ನ ಉಮ್ ಲಿಂಗ್ ಲಾ ತಲುಪಿದ್ದಾರೆ.

ದಕ್ಷಿಣ ಭಾರತದ ಯುವತಿಯರಿಂದ ಇದೊಂದು ಅಪರೂಪದ ಸಾಧನೆಯೇ ಹೌದು. ಅದರಲ್ಲಿ ಕನ್ನಡತಿ, ಕರಾವಳಿಯ ಪ್ರತಿಜ್ಞಾ ತನ್ನ ಕನಸಿನ ಬೈಕ್ ರೈಡಿಂಗ್ ಪಯಣದಲ್ಲಿ ಭರ್ಜರಿ ಗೆಲುವನ್ನೇ ದಾಖಲಿಸಿದಂತಾಗಿದೆ.ಮೂಲತಃ ಮೂಡುಬಿದಿರೆಯ ಪ್ರಸ್ತುತ ಕೊಪ್ಪದಲ್ಲಿರುವ ಪ್ರಕಾಶ್ ಶೆಟ್ಟಿ- ಸುಲೋಚನಾ ದಂಪತಿಯ ಇಬ್ಬರು ಹೆಣ್ಣುಮಕ್ಕಳ ಪೈಕಿ ಪ್ರತಿಜ್ಞಾ ಕಿರಿಯಾಕೆ. ಮೂಡುಬಿದಿರೆಯ ಧವಲಾ ಕಾಲೇಜಿನಲ್ಲಿ ಬಿಕಾಂ ಪದವಿ, ಬೆಂಗಳೂರಿನಲ್ಲಿ ಉದ್ಯೋಗ ಅಲ್ಲಿ ಎಂಬಿಎ ಬಳಿಕ ಅಪೆಕ್ಸ್ ಫಂಡ್ ಸರ್ವಿಸ್‌ನಲ್ಲಿ ಪ್ರಬಂಧಕಿಯಾಗಿರುವ 28ರ ಹರೆಯದ ಪ್ರತಿಜ್ಞಾ ಬಿಡುವಿನ ಸಮಯವನ್ನೆಲ್ಲ ಬೈಕ್ ಸವಾರಿಗೆ ಮೀಸಲಿಟ್ಟಿದ್ದಾರೆ.

ಇಂದು ಹುಟ್ಟೂರಿಗೆ

ಕಟ್ಟಿಕೊಂಡ ಬಾಲ್ಯದ ಕನಸುಗಳು ನನಸಾಗಿ ಸಾಧಕಿಯಾಗಿರುವ ಪ್ರತಿಜ್ಞಾ ಇದೀಗ ಮೂಡುಬಿದಿರೆಯಲ್ಲಿ ಆ.24. 25ರಂದು ನಡೆಯುತ್ತಿರುವ ಟಿ.ಎಸ್.ಡಿ ಡ್ರೈವ್ ಕೂಟದ ಹಿನ್ನೆಲೆಯಲ್ಲಿ ತವರು ನೆಲದ ಗೌರವ ಸ್ವೀಕರಿಸಲು ಹುಟ್ಟೂರಿಗೆ ಆಗಮಿಸಿದ್ದಾರೆ.ಕಾಶ್ಮೀರದ ಲಡಾಕ್‌ನ ಅತೀ ಎತ್ತರದ ರಸ್ತೆಯಲ್ಲಿ ವಾಹನ ಓಡಿಸಿದ್ದು, ಭಾರತ ಪಾಕ್ ಗಡಿಯ ಕೊನೆಯ ಜಿಲ್ಲೆಯನ್ನು ಸಂದರ್ಶಿಸಿದ್ದು, ನೆಟ್ವರ್ಕ್ ಇಲ್ಲದ ದಿನಗಳು, ಸ್ಥಳಗಳು, ಮಿಲಿಟರಿ ಸೈನಿಕರ ಪಹರೆಯ ಸ್ಥಳಗಳಲ್ಲಿ ಎತ್ತರದ ಸ್ಥಳಗತ್ತ ಸಾಗಿ ಹೋಗಿ ಬಂದದ್ದು ಅದೊಂದು ರೋಮಾಂಚಕ ಅವಿಸ್ಮರಣೀಯ ಅನುಭವ ಎಂದು ‘ಕನ್ನಡಪ್ರಭ’ದೊಂದಿಗೆ ಪ್ರತಿಜ್ಞಾ ಅನುಭವ ಹಂಚಿಕೊಂಡಿದ್ದಾರೆ. ಇನ್ನೂ ದೇಶ ಸುತ್ತುವುದಿದೆ. ನಮ್ಮ ದೇಶದಲ್ಲೇ ಇನ್ನಷ್ಟು ಹೊಸ ಸ್ಥಳಗಳನ್ನು ಬೈಕ್‌ನಲ್ಲಿ ಸುತ್ತಾಡಬೇಕಿದೆ ಎನ್ನುತ್ತಾರೆ.