ಭಾರೀ ಮಳೆಗೆ ಕಂಗೆಟ್ಟ ಮಲೆನಾಡು, ಕರಾವಳಿ!

| Published : Jul 09 2024, 12:47 AM IST

ಸಾರಾಂಶ

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ. ಉತ್ತರ ಕನ್ನಡದಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದರೆ, ಕೃತಕ ಪ್ರವಾಹದಿಂದಾಗಿ ಉಡುಪಿ ನಗರದ 110ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಸ್ಥಳದ 100ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳ ಹಾಗೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ. ಉತ್ತರ ಕನ್ನಡದಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದರೆ, ಕೃತಕ ಪ್ರವಾಹದಿಂದಾಗಿ ಉಡುಪಿ ನಗರದ 110ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಸ್ಥಳದ 100ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳ ಹಾಗೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಉತ್ತರ ಕನ್ನಡದ ಐದು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕಿಗೆ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಮತ್ತೆ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆಯಬ್ಬರ ಮುಂದುವರಿದಿದ್ದು, ತಗ್ಗು ಪ್ರದೇಶಗಳ ಹಾಗೂ ನದಿ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದೀಚೆಗೆ 24 ಗಂಟೆ ಅವಧಿಯಲ್ಲಿ ಸುಮಾರು 200 ಮಿ.ಮೀ. ಮಳೆಯಾಗಿದ್ದು, ನೂರಾರು ಎಕ್ರೆ ಕೃಷಿ ಭೂಮಿ ಹಾಗೂ 110ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಉಡುಪಿ ನಗರದ ಹಲವು ತಗ್ಗುಪ್ರದೇಶಗಳ ನಿವಾಸಿಗಳಂತೂ ಕೃತಕ ನೆರೆಯಿಂದ ಪರದಾಡುವಂತಾಗಿದೆ.

ಉಡುಪಿಯ ಕೇಂದ್ರ ಬಿಂದು ಕೃಷ್ಣಮಠದ ಪಾರ್ಕಿಂಗ್ ಏರಿಯಾಕ್ಕೆ ಇಂದ್ರಾಣಿ ಹೊಳೆ ನೀರು ಉಕ್ಕಿ ಪ್ರವಾಸಿಗರು ವಾಹನ ನಿಲ್ಲಿಸಲು ಪರದಾಡುವಂತಾಯಿತು. ಜತೆಗೆ ಸಮೀಪದ ಬೈಲಕರೆ, ಮಠದಬೆಟ್ಟು, ಗುಂಡಿಬೈಲು, ಪಾಡಿಗಾರು, ಕರಂಬಳ್ಳಿ, ಶಾರದಾ ಕಲ್ಯಾಣಮಂಟಪ, ಬನ್ನಂಜೆ ಪ್ರದೇಶಗಳಲ್ಲಿ ನೂರಾರು ಮನೆಗಳು ಜಲಾವೃತಗೊಂಡಿದ್ದವು. ಅಗ್ನಿಶಾಮಕ ದಳದ ಸಿಬ್ಬಂದಿ, ದೋಣಿಗಳೊಂದಿಗೆ ರಾತ್ರಿಯೇ ಇಲ್ಲಿ ಬೀಡು ಬಿಟ್ಟಿದ್ದು, ಮಠದಬೆಟ್ಟುವಿನ ಹತ್ತಾರು ಅಸಹಾಯಕ ಮನೆಗಳ ಸದಸ್ಯರನ್ನು ಸ್ಥಳಾಂತರಗೊಳಿಸಿದರು. ಇನ್ನು ಪಾಡಿಗಾರು ಪ್ರದೇಶದ ಸುಮಾರು 30 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ರಾತ್ರಿಯಿಡೀ ಆತಂಕದಿಂದ ಕಳೆಯುವಂತಾಯಿತು.60 ಮಂದಿ ಸ್ಥಳಾಂತರ:

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಗುಡ್ನಕಟ್ಟು ಮಜಿರೆಯಲ್ಲಿ ನೀರಿನ ಹರಿವು ಜಾಸ್ತಿ ಆಗಿದ್ದು, ಇಲ್ಲಿನ ನೆರೆಪೀಡಿತ ಪ್ರದೇಶದಲ್ಲಿನ 60 ಜನರನ್ನು ಎನ್‌ಡಿಆರ್‌ಎಫ್ ತಂಡ ಬೋಟ್‌ ಮೂಲಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಈ ಮೂಲಕ ಹೊನ್ನಾವರ ತಾಲೂಕಿನಲ್ಲಿ ಸ್ಥಾಪಿಸಲಾದ 8 ಕಾಳಜಿ ಕೇಂದ್ರದಲ್ಲಿ ಒಟ್ಟಾರೆ ಈವರೆಗೆ 313 ಮಂದಿಗೆ ಆಶ್ರಯ ನೀಡಿದಂತಾಗಿದೆ.

ಮಲೆನಾಡಿನಲ್ಲೂ ಅಬ್ಬರ:

ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶಂಗೇರಿಯಲ್ಲಿ ಉತ್ತಮ ಮಳೆಯಾಗಿದ್ದು, ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ತಾಲೂಕಿನ ನದಿ ತೀರದಲ್ಲಿ ಭಾಗದಲ್ಲಿ 7 ಕಡೆ ಕಾಳಜಿ ಕೇಂದ್ರ ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ.

ಬೆಳಗಾವಿಯಲ್ಲಿ ಮುಳುಗಿದ ಸೇತುವೆ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಬೆಳಗಾವಿಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದಲ್ಲಿ ಕೃಷ್ಣೆ ಸೇರಿ ಹಲವು ನದಿಗಳ ನೀರಿನಮಟ್ಟ ಏರಿಕೆಯಾಗಿ ಚಿಕ್ಕೋಡಿಯ 4 ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿಯ ಮಲ್ಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸೇತುವೆ ಮತ್ತು ಮಾಂಜರಿ-ಭಾವನ ಸೌಂದತ್ತಿ ಸೇತುವೆ ಜಲಾವೃತಗೊಂಡಿವೆ. ದೂಧ್‌ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿ ಚಿಕ್ಕೋಡಿಯ ಯಕ್ಸಂಬಾದ ಮುಲ್ಲಾಣಕಿ ಬಾಬಾ ದರ್ಗಾಕ್ಕೆ ನೀರು ನುಗ್ಗಿದೆ. ಮಳೆ ನೀರಿನಲ್ಲಿ ಕೊಚ್ಚಿಹೋದ ಕಾರು: ಪ್ರಯಾಣಿಕರು ಪಾರು

ಉಡುಪಿ: ನಗರದ ಕನ್ನರ್ಪಾಡಿ-ಕಡೆಕಾರ್ ರಸ್ತೆಯಲ್ಲಿ ಮಳೆ ನೀರಿಗೆ ಕಾರೊಂದು ಕೊಚ್ಚಿ ಹೋದ ಘಟನೆ ಸೋಮವಾರ ನಡೆದಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.

ರಸ್ತೆ ಪಕ್ಕದ ಹಳ್ಳ ಉಕ್ಕಿ ಹರಿಯುತ್ತಿದ್ದ ನೀರಿನಿಂದ ಸಂಪೂರ್ಣ ಆವೃತವಾಗಿತ್ತು. ಆ ರಸ್ತೆಯಲ್ಲೇ ಕಾರು ಚಲಾಯಿಸಲು ಪ್ರಯತ್ನಿಸಿದಾಗ ನೀರಿನ ಹರಿವಿನ ರಭಸಕ್ಕೆ ಕಾರು ಕೊಚ್ಚಿಕೊಂಡು ಹೋಯಿತು. ತಕ್ಷಣ ಕಾರಿನಲ್ಲಿದ್ದ ಚಾಲಕ ಸಹಿತ ನಾಲ್ವರು ಹೊರಗೆ ಬಂದು ಪ್ರಾಣ ಉಳಿಸಿಕೊಂಡರು. ಕಾರು ಕೊಚ್ಚಿಕೊಂಡು ಗದ್ದೆಯಲ್ಲಿ ಸಿಲುಕಿಹಾಕಿಕೊಂಡಿತು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಕಾರನ್ನು ರಕ್ಷಿಸಿ ಮೇಲಕ್ಕೆ ತಂದರು.