ಎಂ. ಪ್ರಹ್ಲಾದ್ ಕನಕಗಿರಿ

ಕಳೆದ ಸಾಲಿನ ತೆಂಗಿನಕಾಯಿ ಹಾಗೂ ಸಂತೆ ಭೂ ಬಾಡಿಗೆ ಹರಾಜು ಪಡೆದವರು ಇಲ್ಲಿನ ಮುಜರಾಯಿ ಇಲಾಖೆಯ ಶ್ರೀ ಕನಕಾಚಲ ದೇವಸ್ಥಾನಕ್ಕೆ ಪೂರ್ಣ ಹಣ ಪಾವತಿಸದ ಕಾರಣ ವಿವಾದ ಮುಂದುವರಿದಿದೆ. ಈಗ ಆಣೆ ಪ್ರಮಾಣದವರೆಗೂ ಬಂದು ನಿಂತಿದೆ!

ಈ ಮೊದಲಿದ್ದ ಹರಾಜು ಸ್ಥಳವನ್ನು ವಾಲ್ಮೀಕಿ ವೃತ್ತದ ವರೆಗೆ ವಿಸ್ತರಿಸಿ ೨೦೨೫-೨೬ನೇ ಸಾಲಿನಲ್ಲಿ ದೇವಸ್ಥಾನದಿಂದ ₹೨೯ ಲಕ್ಷಗಳಿಗೆ ಕಾಯಿ ಹಾಗೂ ₹೭.೦೫ ಲಕ್ಷಗಳಿಗೆ ವಾರದ ಸಂತೆ ಭೂ ಬಾಡಿಗೆ ವಸೂಲಿ ಹರಾಜು ಮಾಡಲಾಗಿದೆ. ಆದರೆ, ಅಲ್ಲಿಯ ವರೆಗಿನ ವ್ಯಾಪಾರಸ್ಥರು ತಮ್ಮ ಬಳಿ ಕಾಯಿ ತೆಗೆದುಕೊಂಡಿಲ್ಲ. ಇದರಿಂದ ಬಿಡ್ ಮೊತ್ತದಲ್ಲಿ ಕಡಿತಗೊಳಿಸಬೇಕೆಂದು ಕಾಯಿ ಹರಾಜುದಾರರು ಪತ್ರ ವ್ಯವಹಾರ ನಡೆಸಿದ್ದರು. ಆದರೆ, ಇದ್ಯಾವುದಕ್ಕೂ ಅಧಿಕಾರಿಗಳು ಒಪ್ಪಿಗೆ ನೀಡದೇ ಪೂರ್ಣ ಪ್ರಮಾಣದ ಹಣ ಪಾವತಿಸುವಂತೆ ನೊಟೀಸ್ ಮೂಲಕ ಸೂಚಿಸಿದ್ದರು.

ಇದುವರೆಗೂ ಹರಾಜುದಾರರು ಹಣ ಪಾವತಿಸಿಲ್ಲ. ಇದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹರಾಜುದಾರರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಬಾಕಿ ಹಣ ಪಾವತಿಸಲು ಕ್ರಮ ವಹಿಸುವಂತೆ ಎಡಿಸಿ ಪತ್ರದ ಆಧಾರದ ಮೇಲೆ ಪೊಲೀಸರಿಂದ ೨ನೇ ನೊಟೀಸ್ ಹರಾಜು ಪಡೆದವರಿಗೆ ಜಾರಿಯಾಗಿದೆ. ಸಚಿವರು ಸಹ ಹಣ ಪಾವತಿಸುವಂತೆ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಕಾಯಿ ಹರಾಜು ಪಡೆದವರು ನಮಗೆ ಹಣ ಕಡಿತಗೊಳಿಸುವ ಭರವಸೆ ನೀಡಿ ೨೦೨೪-೨೫ನೇ ಸಾಲಿನಲ್ಲಾದ ಹರಾಜು ಮೊತ್ತ ₹೨೨.೫ ಲಕ್ಷ ಹಣ ೨೦೨೫-೨೬ನೇ ಸಾಲಿಗೆ ಕಟ್ಟಿಸಿಕೊಂಡಿದ್ದಾರೆ. ಇದೀಗ ಇನ್ನುಳಿದ ಬಾಕಿ ಹಣ ನೀಡುವಂತೆ ನೊಟೀಸ್‌ನಲ್ಲಿ ತಿಳಿಸಿದ್ದಾರೆ. ಅಂದು ಸಭೆ ನಡೆಸಿದ್ದ ಅಧಿಕಾರಿಗಳು, ಆಗಿನ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿದಲ್ಲಿ ಉಳಿದ ಹಣ ಭರಿಸಲು ಸಿದ್ಧರಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.


ಮತ್ತೊಂದೆಡೆ ಭೂ ಬಾಡಿಗೆ ಹರಾಜು ಪಡೆದವರು ಕಾಯಿ ಹರಾಜು ಪಡೆದವರಿಂದ ಸಂಪೂರ್ಣ ಹಣ ಪಾವತಿಸಿಕೊಂಡಲ್ಲಿ ತಾವು ಸಹ ಪಾವತಿಸಲು ಸಿದ್ಧನಾಗಿದ್ದೇನೆ ಎನ್ನುತ್ತಿದ್ದಾರೆ ಕೃಷ್ಣ ನಾಯಕ.

ಬಸ್ ನಿಲ್ದಾಣದ ವರೆಗೆ ಇದ್ದ ಹರಾಜು ಸ್ಥಳ ವಾಲ್ಮೀಕಿ ವೃತ್ತಕ್ಕೆ ವಿಸ್ತರಣೆ ಮಾಡಿದ ಬಳಿಕ ನಮ್ಮ ಬಳಿ ವ್ಯಾಪಾರಿಗಳು ಕಾಯಿ ಖರೀದಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದೇನೆ. ಆಗಿನ ಆಡಳಿತ ಮಂಡಳಿ, ಅಧಿಕಾರಿ, ಮುಖಂಡರು ಸಭೆ ನಡೆಸಿದ್ದು, ಹರಾಜು ಮೊತ್ತದಲ್ಲಿ ಕಡಿತಗೊಳಿಸುತ್ತೇವೆ ಎಂದು ಹೇಳಿದ್ದರಿಂದ ₹೨೨.೫ ಲಕ್ಷ ಪಾವತಿಸಿದ್ದೇನೆ. ಇದೀಗ ಇನ್ನುಳಿದ ಹಣ ಪಾವತಿಸುವಂತೆ ನೊಟೀಸ್ ನೀಡುತ್ತಿರುವುದರಿಂದ ಮಾನಸಿಕ ಹಿಂಸೆಯಾಗಿದೆ. ಅಧಿಕಾರಿಗಳು ದೇವಸ್ಥಾನದಲ್ಲಿ ಪ್ರಮಾಣ ಮಾಡಿದಲ್ಲಿ ನಾನು ಹಣ ಪಾವತಿಸುತ್ತೇನೆ ಎಂದು ತೆಂಗಿನಕಾಯಿ ಟೆಂಡರುದಾರ ಶಿವಪ್ರಕಾಶ ಗುಗ್ಗಳಶೆಟ್ರ ತಿಳಿಸಿದ್ದಾರೆ.

ನಿಯಮಾನುಸಾರ ಟೆಂಡರ್ ಮೊತ್ತ ಪಾವತಿಸಬೇಕು. ಇಲ್ಲಿ ಆಣೆ, ಪ್ರಮಾಣದ ಮಾತು ಅನವಶ್ಯಕ. ತೆಂಗಿನಕಾಯಿ ಟೆಂಡರ್ ಪಡೆದವರು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಂಡಿರುವ ವಿಡಿಯೋಗಳಿದ್ದು, ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕಿದೆ. ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ವಾರದೊಳಗಾಗಿ ಬಾಕಿ ಮೊತ್ತ ಪಾವತಿಸದೆ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕನಕಗಿರಿ ದೇವಸ್ಥಾನ ಇಒ ವಿಶ್ವನಾಥ ಮುರುಡಿ ಎಂದರು.

ವ್ಯಾಪಾರಿಗಳಿಂದ ಜೇಬಿಗೆ ಕತ್ತರಿ!: ಹರಾಜುದಾರರು ಭಕ್ತರ ಜೇಬಿಗೆ ಕತ್ತರಿ ಹಾಕುತ್ತಿದ್ದರಿಂದ ದೇವಸ್ಥಾನದಿಂದ ಈ ಬಾರಿ ಕಾಯಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ದೇವಸ್ಥಾನದಲ್ಲಿ ಕಾಯಿ ಖರೀದಿಸಿ ಜೋಡಿ ಕಾಯಿಗೆ ₹೬೦ ಮಾರಬೇಕು. ಆದರೆ, ವ್ಯಾಪಾರಿಗಳು ಸಹ ನಾಲ್ಕು ಊದಿನ ಕಡ್ಡಿ, ೨ ನಿಂಬೆ ಹಣ್ಣು ಇಟ್ಟು ₹೯೦ಗೆ ಜೋಡಿ ಕಾಯಿ ಮಾರುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಅಲ್ಲದೇ, ಇದಕ್ಕೆ ಸಾಕ್ಷಿ ಎನ್ನುವಂತೆ ಭಕ್ತರೊಬ್ಬರ ವಿಡಿಯೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.