ಸಾರಾಂಶ
ವಿಶ್ವದಲ್ಲಿ ತೆಂಗು ಎಲ್ಲಾ ವಿಭಾಗದಲ್ಲೂ ಮಹತ್ತರ ಸ್ಥಾನ ಪಡೆದುಕೊಂಡಿದೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ವಿಶ್ವದಲ್ಲಿ ತೆಂಗು ಎಲ್ಲಾ ವಿಭಾಗದಲ್ಲೂ ಮಹತ್ತರ ಸ್ಥಾನ ಪಡೆದುಕೊಂಡಿದೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.ಪಟ್ಟಣದ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶ್ವ ತೆಂಗು ದಿನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪ್ರತೀ ವರ್ಷ ಸೆ. 2ರಂದು ವಿಶ್ವ ತೆಂಗು ದಿನವನ್ನಾಗಿ ಆಚರಿಸುತ್ತಿದ್ದು, ಇದು ಹಲವರ ಗಮನಕ್ಕೆ ಬಂದಿಲ್ಲ. ತೆಂಗು ನಮ್ಮ ಜೀವನದ ಅವಿಭಾಜ್ಯ ಅಂಗ. ತೆಂಗಿನ ಸಸಿಯಿಂದ ಹಿಡಿದು ಅದು ಮರವಾಗುವವರೆಗೆ ಪ್ರತೀ ಹಂತ ದಲ್ಲಿಯೂ ನಮ್ಮ ಜೀವನಕ್ಕೆ ಉಪಯುಕ್ತ ಎಂದರು.ಇಂಗು-ತೆಂಗು ಇವೆರೆಡಿದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆ ಮಾತಿನಂತೆ ಅಡುಗೆ ತಯಾರಿಯಲ್ಲಿ ತೆಂಗಿನ ಮಹತ್ವ ತಿಳಿಯುತ್ತದೆ. ಪ್ರಕೃತಿಯಲ್ಲಿ ಬಹುಮುಖ್ಯ ಉತ್ಪನ್ನಗಳಲ್ಲಿ ತೆಂಗು ಒಂದು. ತೆಂಗು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಆರ್ಥಿಕವಾಗಿಯೂ ಸ್ಥಾನ ಪಡೆದಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಂತೂ ತೆಂಗು ಇಲ್ಲದೇ ಯಾವುದೇ ಕಾರ್ಯ ಮುನ್ನಡೆಯುವುದಿಲ್ಲ ಎಂದು ತಿಳಿಸಿದರು.
ತೆಂಗು ಬಹುಪಯೋಗಿ ಸಸ್ಯ. ಕೇವಲ ತೆಂಗಿನ ಕಾಯಿ, ಎಳನೀರು, ತೆಂಗಿನ ಎಣ್ಣೆಗೆ ಅಷ್ಟೇ ಸೀಮಿತವಾಗದೆ ಅದರ ಗರಿಗಳು ಹಲವು ಉಪಯೋಗಕ್ಕೆ ಬರಲಿದೆ. ತೆಂಗಿನ ನಾರು ಅನೇಕ ಕರಕುಶಲ ಕೆಲಸಗಳಿಗೆ ಬಳಕೆಯಾಗುತ್ತದೆ. ತೆಂಗಿನ ಬೆಳೆಗೆ ಸರ್ಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ತೆಂಗು ದಿನಾಚರಣೆ ವಿಶ್ವವ್ಯಾಪಿ ಆಚರಿಸುವಂತೆ ಮಾಡಬೇಕಿದೆ ಎಂದರು.ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಶಿಕ್ಷಕ ಸುರೇಂದ್ರ, ಕೆ.ಎಂ.ರಾಘವೇಂದ್ರ, ಜೆಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಸುಧಾಕರ್, ಎಚ್. ಗೋಪಾಲ್, ಬಿ. ಎಸ್. ನಾಗರಾಜ್ ಭಟ್, ಜಯಶೀಲ್, ವಿ. ರೋಹಿತ್ ಪೂಜಾರಿ, ಅಶೋಕ್, ಲ್ಯಾನ್ಸಿ ಪಿಂಟೋ, ರಾಜಣ್ಣ, ಚೇತನ್‌ಕುಮಾರ್ ಮತ್ತಿತರರು ಹಾಜರಿದ್ದರು.