ಅರಸೀಕೆರೆ : ಹದಿನೈದು ಸಾವಿರ ದಾಟಿದ ಕೊಬ್ಬರಿ ಧಾರಣೆ - ರೈತರ ಮುಖದಲ್ಲಿ ಮೂಡಿದ ಮಂದಹಾಸ

| Published : Sep 13 2024, 01:42 AM IST / Updated: Sep 13 2024, 01:01 PM IST

ಅರಸೀಕೆರೆ : ಹದಿನೈದು ಸಾವಿರ ದಾಟಿದ ಕೊಬ್ಬರಿ ಧಾರಣೆ - ರೈತರ ಮುಖದಲ್ಲಿ ಮೂಡಿದ ಮಂದಹಾಸ
Share this Article
  • FB
  • TW
  • Linkdin
  • Email

ಸಾರಾಂಶ

ದಿನನಿತ್ಯ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದರೂ ಕಳೆದ ಎರಡು ದಶಕಗಳಿಂದ ತೆಂಗಿನ ಉತ್ಪನ್ನಗಳು ಹಾಗೂ ಕೊಬ್ಬರಿದಾರಣೆ ಕುಸಿಯುತ್ತಿದ್ದುದು ಬೆಳೆಗಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು.

 ಅರಸೀಕೆರೆ :  ದಿನನಿತ್ಯ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದರೂ ಕಳೆದ ಎರಡು ದಶಕಗಳಿಂದ ತೆಂಗಿನ ಉತ್ಪನ್ನಗಳು ಹಾಗೂ ಕೊಬ್ಬರಿದಾರಣೆ ಕುಸಿಯುತ್ತಿದ್ದುದು ಬೆಳೆಗಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು. ಆದರೆ ಈ ಮಂಗಳವಾರದ ಹರಾಜಿನಲ್ಲಿ ಕೊಬ್ಬರಿ ಧಾರಣೆ ಹದಿನೈದು ಸಾವಿರ ದಾಟಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸತತ ಬರಗಾಲ ಮಳೆಯ ಅಭಾವ, ಅಂತರ್ಜಲ ಮಟ್ಟ ಕುಸಿತದಿಂದ ತೆಂಗು ಬೆಳೆ ನಷ್ಟದ ಅಂಚಿಗೆ ತಲುಪಿದ್ದರಿಂದ "ಕಲ್ಪತರು ನಾಡು ಸಿರಿವಂತ ಬೀಡು " ಎಂದೇ ಹೆಸರಾಗಿದ್ದ ತಾಲೂಕಿನ ಕಣಕಟ್ಟೆ ಹೋಬಳಿ ಸೇರಿದಂತೆ ಬಹುತೇಕ ಭಾಗಗಳ ಜನರು ತೆಂಗು ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಜನ ಸಿಲುಕಿದ್ದರು. ಜಾನುವಾರಿಗೆ ಕುಡಿಯಲು ನೀರಿಲ್ಲದೆ, ಬದುಕು ಸಾಗಿಸಲು ಸಾಧ್ಯವಾಗದೆ ಜೀವನ ನಿರ್ವಹಣೆಗಾಗಿ ಸಾವಿರಾರು ಜನ ಬೆಂಗಳೂರು, ಮೈಸೂರು ನಗರಗಳಿಗೆ ಕೂಲಿನಾಲಿ ಅರಸಿ ವಲಸೆ ಹೋಗಿದ್ದು ಈಗ ಇತಿಹಾಸ.

ಇದರೊಂದಿಗೆ ಬೆಳೆಗಾರರನ್ನು ಮಹಾಮಾರಿಯಂತೆ ಕಾಡಿದ ಬೆಂಕಿರೋಗ, ನುಸಿಪೀಡೆ, ಚಪ್ಪೆರೋಗ, ರಸಸೋರುವಿಕೆ ರೋಗ, ಕಪ್ಪುತಲೆ ಹುಳುಬಾಧೆ ಇನ್ನಿತರ ರೋಗಗಳಿಂದ ತೆಂಗು ಅವನತಿಯ ಹಾದಿ ತುಳಿದಿದ್ದು, ಬರುತ್ತಿರುವ ಅಲ್ಪಸ್ವಲ್ಪ ಫಸಲು ಗಾತ್ರದಲ್ಲಿ ಚಿಕ್ಕದಾಗಿ ಇಳುವರಿ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಬೆಳೆಗಾರರ ನೆರವಿಗೆ ಧಾವಿಸಿ ಬೆಲೆ ನಿಯಂತ್ರಣದಲ್ಲಿ ಇಡಬೇಕೆಂದು ರೈತರ ಮನವಿ ಮಾಡಿದ್ದಾರೆ.

2014ರಲ್ಲಿ ಒಂದು ಕ್ವಿಂಟಲ್ ಕೊಬ್ಬರಿಧಾರಣೆ 19,800ದಿಂದ 19,900ವರೆಗೆ ಏರಿಕೆಯಾಗಿ ದಾಖಲೆ ನಿರ್ಮಿಸಿತ್ತು. ನಂತರ ದಿನಗಳಲ್ಲಿ ದಿನೇ ದಿನೇ ಕುಸಿತ ಕಂಡು 2023 ಜು.ವೇಳೆಗೆ 7700ರಿಂದ 7800ರವರೆಗೆ ಇಳಿಕೆಗೊಂಡು ಬೆಳೆಗಾರರಲ್ಲಿ ದಿಗ್ಭ್ರಮೆ ಮೂಡಿಸಿತು. ಇದಕ್ಕೆ ಕೆಲವೇ ಕೆಲವು ಉತ್ತರ ಭಾರತದ ವರ್ತಕರು ತಿಪಟೂರ್ ಹಾಗು ಅರಸೀಕೆರೆ ಮಾರುಕಟ್ಟೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಕೊಬ್ಬರಿ ದರ ಪಾತಾಳಕ್ಕೆ ಕುಸಿಯಲು ನೇರಾನೇರ ಉತ್ತರ ಭಾರತದ ವರ್ತಕರೊಂದಿಗೆ ಸ್ಥಳೀಯ ವರ್ತಕರು ಸೇರಿ ಬೆಳೆ ಇಳಿಕೆ ಮಾಡಿ ರೈತರನ್ನುಶೋಷಣೆ ಮಾಡುತ್ತಿದ್ದಾರೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳ, ತಮಿಳುನಾಡಿನಲ್ಲಿ ತೆಂಗಿನ ಬೆಳೆಯ ಪ್ರಮಾಣ ಇಳಿಕೆಯಾಗಿರುವದರಿಂದ ಭಾರತಾದ್ಯಂತ ಕರ್ನಾಟಕದ ತೆಂಗು, ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇದ್ದು ಈ ಬಾರಿ ಕೊಬ್ಬರಿ 20,000 ದಾಟುವ ಸಾಧ್ಯತೆ ಇದ್ದು, ಬೆಲೆ ನಿಯಂತ್ರಿಸಲು ಈಗಾಗಲೇ ಪ್ರಯತ್ನವನ್ನು ಆರಂಭಿಸಿದ್ದಾರೆ ಎಂಬ ದೂರು ರೈತರಿಂದ ಕೇಳಿ ಬರುತ್ತಿದೆ.

ರಾಜ್ಯ ರೈತ ಸಂಘದ ಸಂಚಾಲಕರಾದ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್‌ ಪ್ರತಿಕ್ರಿಯಿಸಿ, ಬೆಳೆಗಾರರು ಆತುರ ಪಡದೆ ನಿಧಾನವಾಗಿ ಕೊಬ್ಬರಿ ತರಬೇಕು. ಕೆಲ ಮಾರುಕಟ್ಟೆ ತಜ್ಞರು ಪ್ರಕಾರ 20 ಸಾವಿರಕ್ಕಿಂತ ಅತ್ಯಧಿಕ ಬೆಲೆ ದಾಖಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಆದ್ದರಿಂದ ರೈತ ಬಾಂಧವರು ಅಗತ್ಯವಿರುವಷ್ಟು ಮಾರುಕಟ್ಟೆಗೆ ತಂದು ಮಾರಬೇಕೆಂದು ಮನವಿ ಮಾಡಿದ್ದಾರೆ.

*ಹೇಳಿಕೆ-1

ಕೇರಳ, ತಮಿಳುನಾಡು ರಾಜ್ಯದಲ್ಲಿ ಕೊಬ್ಬರಿ ಸೀಸನ್ ಮುಗಿದಿದೆ. ಭಾರತಾದ್ಯಂತ ಕರ್ನಾಟಕದ ಕೊಬ್ಬರಿಗೆ ಬೇಡಿಕೆ ಹೆಚ್ಚಿದ್ದು, ರೈತ ಬಾಂಧವರು ಆತುರ ಪಡದೆ ನಿಧಾನವಾಗಿ ಕೊಬ್ಬರಿ ತರುವುದರಿಂದ ಕೊಬ್ಬರಿ ಧಾರಣೆಯು ಮುಂದಿನ ದಿನಗಳಲ್ಲಿ ಹಿಂದಿನ ಬೆಲೆಗಿಂತ ಅತ್ಯಧಿಕ ಬೆಲೆ ಬರಬಹುದು. ಮುಂದಿನ ದಿನಗಳಲ್ಲಿ ಅಯುಧ ಪೂಜೆ ದೀಪಾವಳಿ ಹಬ್ಬಗಳು ಸಹ ಬರುವುದರಿಂದ ಬೆಲೆ ಏರಿಕೆ ಆಗುವುದು ನಿಶ್ಚಿತ.

- ಎಂ ಎನ್ ಜಗದೀಶ್ , ಮಂಡಿ ವರ್ತಕ