ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕೊಚ್ಚಿಯ ತೆಂಗು ಅಭಿವೃದ್ದಿ ಮಂಡಳಿ ವತಿಯಿಂದ ಜಿಲ್ಲೆಯ ಸಂಬಂಧಿತ ಇಲಾಖೆ ಸಂಘಗಳ ಸಹಯೋಗದಲ್ಲಿ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸ್ಥಾಪನಾ ದಿನಾಚರಣೆ
ಕುಂದಾಪುರ: ರಾಜ್ಯದಲ್ಲಿ ತೆಂಗು ಬೆಳೆಯನ್ನು ವಿಪರೀತವಾಗಿ ಬಾಧಿಸುತ್ತಿರುವ ಕೀಟಗಳಿಂದ ರೈತರು ತೆಂಗು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ತಜ್ಞರ ತಂಡವನ್ನು ನೇಮಿಸಲಾಗಿದ್ದು, ತಂಡದ ವರದಿಯ ಪ್ರಕಾರ 791 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಈ ಅನುದಾನಕ್ಕಾಗಿ ಈಗಾಗಲೇ ಕೇಂದ್ರ ಕೃಷಿ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕೊಚ್ಚಿಯ ತೆಂಗು ಅಭಿವೃದ್ದಿ ಮಂಡಳಿ ವತಿಯಿಂದ ಜಿಲ್ಲೆಯ ಸಂಬಂಧಿತ ಇಲಾಖೆ ಸಂಘಗಳ ಸಹಯೋಗದಲ್ಲಿ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸ್ಥಾಪನಾ ದಿನಾಚರಣೆ ಹಾಗೂ ತೆಂಗು ಬೆಳೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಅಂದಾಜು 6.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಕೃಷಿ ನಡೆಯುತ್ತಿದೆ. ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಅಗಾಧ ಪ್ರಮಾಣದಲ್ಲಿ ತೆಂಗು ಬೆಳೆ ಬೆಳೆಯುತ್ತವೆ. ಇಷ್ಟು ಅಗಾಧ ಪ್ರಮಾಣದಲ್ಲಿ ಬೆಳೆಯಲಾಗುವ ತೆಂಗು ಕೃಷಿಗೆ ಹಲವಾರು ಸಮಸ್ಯೆ ಮತ್ತು ಸವಾಲುಗಳೂ ಇವೆ. ಅವುಗಳ ಪರಿಹಾರಕ್ಕಾಗಿಯೇ ಛತ್ತೀಸ್‌ಗಡದಲ್ಲಿ ನಡೆಯಬೇಕಾಗಿದ್ದ ಈ ಕಾರ್ಯಾಗಾರವನ್ನು ಹಠ ಹಿಡಿದು ಇಲ್ಲಿಗೆ ತರಲಾಗಿದೆ ಎಂದ ಸಂಸದರು, ಕಲ್ಪವೃಕ್ಷವಾದ ತೆಂಗು ಬೆಳೆಗೆ ರಾಜ್ಯದಲ್ಲಿ ಹೊಸ ಕಾಯಕಲ್ಪ ದೊರೆತು ತಮಿಳುನಾಡು ಮತ್ತು ಕೇರಳವನ್ನು ಹಿಂದಿಕ್ಕಿ ದೇಶಕ್ಕೇ ಮಾದರಿಯಾಗಬೇಕು ಎಂದರುಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕರಾವಳಿಗರ ಬದುಕಿನಲ್ಲಿ ತೆಂಗು ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಶೇ. 60-40 ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಕೃಷಿಕರು ಇತರ ಬೆಳೆಗಳಿಗೆ ಪರ್ಯಾಯವಾಗಿ ತೆಂಗು ಬೆಳೆಯುವ ಬಗ್ಗೆ ಆಸಕ್ತಿ ಹೊಂದಿ ಕೌಶಲ್ಯಾಧಾರಿತವಾಗಿ ತೆಂಗಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ ನಿರುದ್ಯೋಗ ಸಮಸ್ಯೆಗೂ ಮುಕ್ತಿ ಸಿಗಲಿದೆ. ರಾಜ್ಯ ಸರ್ಕಾರವು ಎಲ್ಲ ರೀತಿಯಲ್ಲಿ ತೆಂಗು ಬೆಳೆಗಾರರಿಗೆ ಬೆಂಬಲ ನೀಡಲಿದೆ ಎಂದರು.ತೆಂಗು ಕೃಷಿಯಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ತೆಂಗು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶುಭ ನಾಗರಾಜನ್, ಕಾಸರಗೋಡು ಸಿಪಿಸಿಆರ್ ಐ ನಿರ್ದೇಶಕ ಡಾ. ಕೆ. ಬಿ. ಹೆಬ್ಬಾರ್, ತೆಂಗು ಅಭಿವೃದ್ದಿ ಮಂಡಳಿಯ ವಲಯ ನಿರ್ದೇಶಕಿ ರಶ್ಮಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೈನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಇಲಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ತೆಂಗು ಅಭಿವೃದ್ದಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ದಿ ಅಧಿಕಾರಿ ಡಾ. ಹನುಮಂತ ಗೌಡ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ನಿರ್ದೇಶಕಿ ಕ್ಷಮಾ ಪಾಟೀಲ್ ಸ್ವಾಗತಿಸಿ, ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ಉಕಾಸ ಅಧ್ಯಕ್ಷ ಸತ್ಯನಾರಾಯಣ ಉಡುಪ ವಂದಿಸಿದರು.