ಸಾರಾಂಶ
ಅಬ್ಬೂರುಕಟ್ಟೆ ಗ್ರಾಮದ ಪ್ರಗತಿಪರ ಕೃಷಿಕ ಖಾಲಿಸ್ತ ಡಿಸಿಲ್ವ ಅವರ ಕಾಫಿ ತೋಟಕ್ಕೆ ಇತ್ತೀಚೆಗೆ ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಅಬ್ಬೂರುಕಟ್ಟೆ ಗ್ರಾಮದ ಪ್ರಗತಿಪರ ಕೃಷಿಕ ಖಾಲಿಸ್ತ ಡಿಸಿಲ್ವ ಅವರ ಕಾಫಿ ತೋಟಕ್ಕೆ ಇತ್ತೀಚೆಗೆ ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಭೇಟಿ ನೀಡಿ, ಜಾನ್‌ಸನ್ ಸೂ ಕಾಂಪೋಷ್ಟ್ ಗೊಬ್ಬರದ ಬಗ್ಗೆ ಮಾಹಿತಿ ಪಡೆದರು.ಈ ಸಂದರ್ಭ ಜಾನ್‌ಸನ್ ಸೂ ಕಾಂಪೋಷ್ಟ್ ಉತ್ಪಾದನೆ ಮತ್ತು ಅದರ ಬಳಕೆಯ ಬಗ್ಗೆ ಕೃಷಿಕರು ಮಾಹಿತಿ ನೀಡಿದರು. ವರ್ಷಕ್ಕೆ ಮುಂಗಾರು ಮುನ್ನ ಮತ್ತು ನಂತರ ಎರಡು ಭಾರಿ ಜಾನ್‌ಸನ್ ಸೂ ಕಾಂಪೋಷ್ಟ್ ಗೊಬ್ಬರನ್ನು ನೀರಿನಲ್ಲಿ ಮಿಶ್ರಣ ಮಾಡಿ, ಕಾಫಿ ಗಿಡಗಳಿಗೆ ಸ್ಪ್ರೇ ಮಾಡಿದಲ್ಲಿ ಬೇರಾವ ರಾಸಾಯನಿಕ ಗೊಬ್ಬರ ಮತ್ತು ಸ್ಪ್ರೇ ಬಳಸುವುದು ಬೇಡ. ಪ್ರಾರಂಭದ ಒಂದೆರಡು ವರ್ಷಗಳಲ್ಲಿ ಸ್ವಲ್ಪ ಬೆಳೆ ಇಳುವರಿ ಕಡಿಮೆಯಾದರೂ, ನಂತರ ದಿನಗಳಲ್ಲಿ ಉತ್ತಮ ಫಸಲು ಸಿಗುತ್ತದೆ. ಈ ಕಾಂಪೋಷ್ಟ್ ಬಳಸುವುದರಿಂದ ಮಣ್ಣಿಗೆ ಸಾಕಷ್ಟು ಶಿಲೀಂಧ್ರಗಳು ಸೇರುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದರಿಂದ ಕಾಫಿ ತೋಟಗಳ ನಿರ್ವಹಣಾ ವೆಚ್ಚ ಕಡಿತಗೊಳ್ಳುವುದರೊಂದಿಗೆ, ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ಕಾಫಿ ಮಂಡಳಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕಾಫಿ ತೊಟಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದು, ಹಲವೆಡೆಗಳಲ್ಲಿ ಸಾವಯವ ಕೃಷಿಯತ್ತ ರೈತರು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸಾವಯಕ ಕೃಷಿಯಿಂದ ಉತ್ತಮ ಗುಣಮಟ್ಟದ ಬೆಳೆ ಉತ್ಪಾದನೆಯಾಗುತ್ತದೆ. ಅಲ್ಲದೆ, ವಿದೇಶಗಳಲ್ಲಿಯೂ ಸಾವಯವ ಕೃಷಿಯಿಂದ ಬೆಳೆದ ಬೆಳೆಗೆ ಒಳ್ಳೆಯ ಮಾರುಕಟ್ಟೆ ಇದ್ದು, ರೈತರು ಸಾವಯವ ಕೃಷಿಯನ್ನು ಮಾಡಲು ಮುಂದಾಗಬೇಕೆಂದರು.ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ಮತ್ತು ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಗಳಲ್ಲಿ ಜಾನ್‌ಸನ್ ಸೂ ಕಾಂಪೋಷ್ಟ್ ಉತ್ಪಾದನೆ ಮತ್ತು ಅದರ ಬಳಕೆಯ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ಕಿರಿಯ ಕಾಫಿ ಸಂಪರ್ಕಾಧಿಕಾರಿ ನಾಗರಾಜು, ಮೈಕ್ರೋ ಬಯಾಲಾಜಿಸ್ಟ್ ಸುಚಿತ್ರ ಹಾಗೂ ಕಾಫಿ ಬೆಳೆಗಾರರು ಇದ್ದರು.