ಕನ್ನಡಪ್ರಭ ವಾರ್ತೆ ಬೇಲೂರು

ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಕಾಫಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ₹1700 ಕೋಟಿ ಅನುದಾನ ನೀಡುವಂತೆ ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ. ಜೆ. ದಿನೇಶ್ ಹೇಳಿದರು.ಪಟ್ಟಣದ ತಾಲೂಕು ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಬೆಳೆಗಾರರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಸಹಾಯಧನವನ್ನು ₹42 ಕೋಟಿಯಿಂದ ₹95 ಕೋಟಿಗೆ ಹೆಚ್ಚಿಸಲಾಗಿದೆ. ಕಾಫಿ ಕ್ಷೇತ್ರದಲ್ಲಿ ಯಾಂತ್ರೀಕರಣ, ತಂತ್ರಜ್ಞಾನ ಬಳಕೆ, ಗುಣಮಟ್ಟ ಹೆಚ್ಚಳ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಕಾಫಿ ಬೆಳೆಗಾರರು ಕಾಡಾನೆಗಳ ಹಾವಳಿ, ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಕಾಫಿ ಬೆಲೆಗಳ ಏರಿಳಿತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದರು.ಬೆಳೆಗಾರರ ಸಂಘದ ಅಧ್ಯಕ್ಷ ವೈ.ಎಸ್. ಸಿದ್ದೇಗೌಡ ಮಾತನಾಡಿ, ಕಾಫಿ, ಅಡಿಕೆ ಹಾಗೂ ಮೆಣಸು ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಿಂದ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಬೆಳೆಗಾರರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಪ್ರತಿ ಪಂಚಾಯಿತಿಯಲ್ಲೂ ಮಾಹಿತಿ ಕೇಂದ್ರಗಳ ಅಗತ್ಯವಿದೆ. ಕಾಫಿ ತೋಟಗಳಲ್ಲಿ ತೀವ್ರವಾಗಿರುವ ಕಾರ್ಮಿಕರ ಕೊರತೆ ನಿವಾರಣೆಗೆ ಹೊರರಾಜ್ಯಗಳಿಂದ ಕಾನೂನುಬದ್ಧವಾಗಿ ಕಾರ್ಮಿಕರನ್ನು ಕರೆತರುವ ವ್ಯವಸ್ಥೆಯನ್ನು ಸರಳಗೊಳಿಸಬೇಕು. ಸಣ್ಣ ಹಾಗೂ ಮಧ್ಯಮ ಬೆಳೆಗಾರರಿಗೆ ಕಡಿಮೆ ಬಡ್ಡಿದರದ ಸಾಲ, ಬೆಳೆ ವಿಮೆ ಹಾಗೂ ಆಧುನಿಕ ಯಂತ್ರೋಪಕರಣಗಳಿಗೆ ಹೆಚ್ಚಿನ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.ಶಾಸಕ ಎಚ್. ಕೆ. ಸುರೇಶ್ ಮಾತನಾಡಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬೇರೆ ಪ್ರದೇಶಗಳಿಂದ ಆನೆಗಳನ್ನು ತಂದು ಬೇಲೂರು ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಹೆಚ್ಚಿನ ಸಂಖ್ಯೆಯ ಆನೆಗಳನ್ನು ನಮ್ಮ ತಾಲೂಕಿಗೆ ಸ್ಥಳಾಂತರಿಸುವ ಆತಂಕವಿದೆ. ಆನೆಗಳ ಹಾವಳಿಯಿಂದ ರೈತರು ಹಾಗೂ ಗ್ರಾಮೀಣ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೇವಲ ಭರವಸೆಗಳಿಗೆ ಸೀಮಿತವಾಗದೆ, ಆನೆಗಳ ಸಂಚಾರ ನಿಯಂತ್ರಣ, ಮಾನವ-ಆನೆ ಸಂಘರ್ಷ ತಡೆ ಹಾಗೂ ರೈತರ ಜೀವ-ಬೆಳೆ ರಕ್ಷಣೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು .ಸಭೆಯಲ್ಲಿ ಕಾಫಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಡಿ. ಲೋಕೇಶ್ ಸೇರಿದಂತೆ ನೂರಾರು ಕಾಫಿ ಬೆಳೆಗಾರರು ಭಾಗವಹಿಸಿದ್ದರು.

------

*ಬಾಕ್ಸ್ ನ್ಯೂಸ್ ಬೆಳೆಗಾರರ ಪ್ರಮುಖ ಬೇಡಿಕೆಗಳುಕಾಫಿ ಕ್ಷೇತ್ರಕ್ಕೆ 1700 ಕೋಟಿ ವಿಶೇಷ ಅನುದಾನ ಮಂಜೂರು ಮಾಡಬೇಕು.ಆನೆ-ಮಾನವ ಸಂಘರ್ಷಕ್ಕೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ರೂಪಿಸಬೇಕು.ಕಾರ್ಮಿಕರ ಕೊರತೆ ನಿವಾರಣೆಗೆ ವಿಶೇಷ ನೀತಿ ಜಾರಿಗೆ ತರಬೇಕು.ಸಣ್ಣ ಬೆಳೆಗಾರರಿಗೆ ಹೆಚ್ಚಿನ ಸಹಾಯಧನ ಹಾಗೂ ಸಾಲ ಸೌಲಭ್ಯ ನೀಡಬೇಕು.ಕಾಫಿ ಮಂಡಳಿ ಯೋಜನೆಗಳ ಲಾಭ ಎಲ್ಲ ಅರ್ಹ ಬೆಳೆಗಾರರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.