ಸಾರಾಂಶ
ಬ್ರೆಜಿಲ್ ಸೇರಿ ವಿಯೆಟ್ನಾಂನಂತಹ ಪ್ರಮುಖ ಉತ್ಪಾದಕರಲ್ಲಿ ಪ್ರಮುಖ ಪೂರೈಕೆಯ ಅಡಚಣೆಗಳಿಂದಾಗಿ ಈ ವರ್ಷ ಕಾಫಿ ಬೆಲೆಗಳು ಗಗನಕ್ಕೇರಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ, ರೋಬಸ್ಟಾ 1970 ದಶಕ ನಂತರದ ಗರಿಷ್ಠ ಮಟ್ಟ ಮುಟ್ಟಿದೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ : ಬ್ರೆಝಿಲ್ ಹಾಗೂ ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯ ಉಂಟಾದ ಪರಿಣಾಮ ಅರೇಬಿಕಾ ಹಾಗೂ ರೋಬೆಸ್ಟಾ ಕಾಫಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಕಾಫಿ ಬೆಳೆಗಾರರು ಹಾಗೂ ವ್ಯಾಪಾರಸ್ಥರಲ್ಲಿ ಸಂತಸ ಮೂಡಿದೆ.
ಈಗ ಕಾಫಿಗೆ ಹೆಚ್ಚು ಬೆಲೆ ಇದೆ. ಹಳೆ ಕಾಫಿಯನ್ನು ದಾಸ್ತಾನು ಇಟ್ಟುಕೊಂಡಿರುವ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ಇದರ ಲಾಭ ದೊರಕಲಿದೆ. ಈ ಬಾರಿ ಭಾರತದ ಕಾಫಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಉತ್ತಮ ಗುಣಮಟ್ಟದ ಕಾಫಿ ಬೆಳೆದರೆ ಇದೇ ಬೆಲೆ ಮುಂದುವರೆಯಲಿದೆ ಎನ್ನಲಾಗುತ್ತಿದೆ.
ಅರೇಬಿಕಾ ಕಾಫಿ ಅತಿದೊಡ್ಡ ಉತ್ಪಾದಕ ಬ್ರೆಜಿಲ್‌ನಲ್ಲಿ 2021ರಲ್ಲಿ ಹಿಮ ಸುರಿದು ಕಾಫಿ ಬೆಳೆ ನಾಶವಾಗಿತ್ತು. ಆ ವೇಳೆ ಈ ಅಂತರ ತುಂಬಲು, ಖರೀದಿದಾರರು ವಿಯೆಟ್ನಾಂ ಕಡೆ ಮುಖ ಮಾಡಿದ್ದರು. ವಿಯೆಟ್ನಾಂ ರೋಬಸ್ಟಾ ಕಾಫಿ ಉತ್ಪಾದಿಸುತ್ತದೆ, ಇದನ್ನು ಹೆಚ್ಚಾಗಿ ತ್ವರಿತ ಕಾಫಿಯಲ್ಲಿ ಬಳಸಲಾಗುತ್ತದೆ. ಆದರೆ ವಿಯೆಟ್ನಾಂ ಈ ವರ್ಷ ಕಂಡು ಕೇಳರಿಯದ ಭೀಕರ ಬರ ಎದುರಿಸುತ್ತಿದ್ದು, ಇಲ್ಲೂ ಕೂಡ ಕಾಫಿ ಬೆಳೆ ಕೈಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಅತಿದೊಡ್ಡ ಕಾಫಿ ಉತ್ಪಾದಕರು ಎನಿಸಿಕೊಂಡಿದ್ದು ಎರಡೂ ದೇಶಗಳಲ್ಲಿ ಕಾಫಿ ಉತ್ಪಾದನೆ ಕುಂಠಿತಗೊಂಡಿದ್ದು, ಪೂರೈಕೆಯು ಕಡಿಮೆಯಾಗಿದೆ ಮತ್ತು ಬೆಲೆ ದುಬಾರಿಯಾಗಿದೆ.
ಬ್ರೆಜಿಲ್ ಸೇರಿ ವಿಯೆಟ್ನಾಂನಂತಹ ಪ್ರಮುಖ ಉತ್ಪಾದಕರಲ್ಲಿ ಪ್ರಮುಖ ಪೂರೈಕೆಯ ಅಡಚಣೆಗಳಿಂದಾಗಿ ಈ ವರ್ಷ ಕಾಫಿ ಬೆಲೆಗಳು ಗಗನಕ್ಕೇರಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ, ರೋಬಸ್ಟಾ 1970 ದಶಕ ನಂತರದ ಗರಿಷ್ಠ ಮಟ್ಟ ಮುಟ್ಟಿದೆ. ಅರೇಬಿಕಾ ಕಾಫಿಗಿಂತ ರೋಬೆಸ್ಟಾ ಕಾಫಿಗೆ ಬೆಲೆ ಅಧಿಕವಾಗಿರುವುದು ಬೆಳೆಗಾರರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಉತ್ಪಾದನೆ ಕುಂಠಿತ:
ವಿಯೆಟ್ನಾಂ ನ ಕೆಲವು ಭಾಗದಲ್ಲಿ ಮೂರು ವರ್ಷದಿಂದ ಕಾಫಿಯನ್ನು ತೆಗೆದು ದುರಿಯನ್ ಹಣ್ಣಿನ ಕಡೆ ವಿಯೆಟ್ನಾಂ ಕೃಷಿಕರು ವಾಲುತ್ತಿದ್ದಾರೆ. ಇದರಿಂದ ಕೂಡ ಈ ಬಾರಿ ಕಾಫಿ ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೆ ಬ್ರೆಝಿಲ್‌ನಲ್ಲಿ ಅರೇಬಿಕಾ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಇತ್ತೀಚೆಗೆ ಅರೆಬಿಕಾದಿಂದ ರೋಬೆಸ್ಟಾ ಬೆಳೆಯಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಭಾರತದಲ್ಲಿ ಕೂಡ ಕಾಫಿ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ದೇಶದ ನಾನಾ ಕಡೆಗಳಲ್ಲಿ ಕಾಫಿ ಕೆಫೆಗಳು ಹಾಗೂ ಇತರೆ ಉತ್ಪನ್ನಗಳು ಹೆಚ್ಚಾಗುತ್ತಿರುವ ಪರಿಣಾಮ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಕಾಫಿಗೆ ಬೆಲೆಯೂ ಅಧಿಕವಾಗಿದೆ.
ಈಗ ಯಾವುದೇ ಬೆಳೆಗಾರರ ಹತ್ತಿರ ಕಾಫಿ ಫಸಲು ದಾಸ್ತಾನಿಲ್ಲ. ಈಗ ಹೆಚ್ಚಾಗಿರುವ ಬೆಲೆಯಿಂದ ವ್ಯಾಪಾರಸ್ಥರಿಗೆ ಲಾಭ ಎಂದು ಪ್ರಮುಖರು ಹೇಳುತ್ತಾರೆ. ಇನ್ನಷ್ಟೇ ಕಾಫಿ ಕೊಯ್ಲು ಆಗಬೇಕಾಗಿರುವುದರಿಂದ ಈ ಬೆಲೆ ಬೆಳೆಗಾರರಿಗೆ ಸಿಗುವುದಿಲ್ಲ. ಇದೇ ಬೆಲೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ ಇದರ ಲಾಭ ದೊರಕಲಿದೆ.
ಡ್ರೈಯಿಂಗ್ ಯಾರ್ಡ್ ಹಾಗೂ ಗೋಡೌನ್‌ಗಳಿಗೆ ಸಬ್ಸಿಡಿಗಳನ್ನು ಕಾಫಿ ಬೋರ್ಡ್ ನಿಂದ ನೀಡಲಾಗುತ್ತಿದೆ. ದಲ್ಲಾಳಿ ಮಾಡುವ ಕೆಲಸವನ್ನು ಬೆಳೆಗಾರರು ಮಾಡಿದರೆ ಬೆಲೆ ಹೆಚ್ಚು ಇದ್ದಾಗ ಫಸಲು ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಕಾಫಿ ಬೋರ್ಡ್ ಅಧಿಕಾರಿಗಳು ಹೇಳುತ್ತಾರೆ.
ಕಳೆದ 15 ವರ್ಷಗಳಿಂದ ಕಾಫಿ ಬೆಲೆ ತೀರಾ ಕಡಿಮೆ ಇತ್ತು. ಈ ವರ್ಷ ಬೆಲೆ ಹೆಚ್ಚಾಗಿರುವುದು ಸಂತೋಷ ಅಷ್ಟೇ. ಉತ್ಪಾದನೆ ಕೊಂಚ ಕಡಿಮೆಯಾಗಿದೆ. ಈ ವರ್ಷ ಬೆಳೆಗಾರರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಅರೇಬಿಕಾ ಕಾಫಿಗಿಂತ ರೋಬಸ್ಟಾಗೆ ಬೆಲೆ ಏರಿಕೆಯಾಗಿರುವುದು ಆಶ್ಚರ್ಯವಾಗಿದೆ.
-ಕಳ್ಳಿಚಂಡ ರಾಜೀವ್ ಗಣಪತಿ, ಮಾಜಿ ಅಧ್ಯಕ್ಷ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್.
ಈ ವರ್ಷ ಕಾಫಿ ಬೆಲೆ ಹೆಚ್ಚಾಗಿದೆ. ಬ್ರೆಝಿಲ್ ಹಾಗೂ ವಿಯೆಟ್ನಾಂನಲ್ಲಿ ಉಂಟಾದ ಹವಾಮಾನ ವೈಪರೀತ್ಯ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತದ ಕಾಫಿಗೆ ಬೆಲೆ ಅಧಿಕವಾಗಿದೆ. ಇದರಿಂದ ಬೆಳೆಗಾರರಿಗೆ ಈ ಬಾರಿ ಲಾಭ ಆಗಲಿದೆ.
-ಡಾ. ಚಂದ್ರಶೇಖರ್, ಉಪ ನಿರ್ದೇಶಕರು ಕಾಫಿ ಬೋರ್ಡ್ ಮಡಿಕೇರಿ.
ಬ್ರೆಝಿಲ್ ಹಾಗೂ ವಿಯೆಟ್ನಾಂ ನಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಭಾರತದ ಕಾಫಿಗೆ ಬೆಲೆ ಏರಿಕೆಯಾಗಿದೆ. ಕಾಫಿ ಬೆಳೆಗಾರರು ಕಾಫಿ ಡ್ರೈಯರ್, ಗೋಡೌನ್ಗಳಿಗೆ ಸಬ್ಸಿಡಿ ಪಡೆದುಕೊಳ್ಳಬಹುದು. ಇದರ ಸದುಪಯೋಗವನ್ನು ಬೆಳೆಗಾರರು ಪಡೆದುಕೊಂಡು ಉತ್ತಮ ಬೆಲೆ ಬಂದಾಗ ಕಾಫಿ ಮಾರಾಟ ಮಾಡಬಹುದಾಗಿದೆ.
-ಮುಖಾರಿಬ್ ಡಿ.ಎಸ್., ಕಿರಿಯ ಸಂಪರ್ಕ ಅಧಿಕಾರಿ ಕಾಫಿ ಬೋರ್ಡ್ ದಕ್ಷಿಣ ಕೊಡಗು.
ಇಷ್ಟು ವರ್ಷ ಕಾಫಿ ಬೆಲೆ ತೀರಾ ಕಡಿಮೆ ಇತ್ತು. ಇದೀಗ ಎರಡು ವರ್ಷದಿಂದ ಕಾಫಿ ಬೆಲೆ ಏರಿಕೆಯಾಗುತ್ತಿದೆ. ಈಗ ಕಾಫಿ ದಾಸ್ತಾನು ಇಟ್ಟಿದ್ದವರಿಗೆ ಉತ್ತಮ ಲಾಭ ಸಿಗಲಿದೆ. ಅಲ್ಲದೆ ಬೇಗ ಕಾಫಿ ಕೊಯ್ಲು ಮಾಡಿ ಮಾರಿದವರಿಗೆ ಲಾಭ ಆಗಲಿದೆ. ಮುಂದೆ ಇದೇ ಬೆಲೆ ಇದ್ದರೆ ಬೆಳೆಗಾರರಿಗೆ ಉತ್ತಮ.
-ಅನಿತಾ ನಂದ, ಕಾರ್ಯದರ್ಶಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ
ನ.27ರ ಕಾಫಿ ಮಾರುಕಟ್ಟೆ ಬೆಲೆ (50 ಕೆ..ಜಿಗೆ)
ಅರೆಬಿಕಾ ಪಾರ್ಚ್ ಮೆಂಟ್ : ರು.18800-19500
ಅರೆಬಿಕಾ ಚೆರಿ : ರು.10900-11650
ರೋಬೆಸ್ಟಾ ಪಾರ್ಚ್ ಮೆಂಟ್ : ರು.17900-18500
ರೋಬೆಸ್ಟಾ ಚೆರಿ : ರು.10800-11500
ಕಳೆದ ವರ್ಷದ ಬೆಲೆ
ಅರೆಬಿಕಾ ಪಾರ್ಚ್ ಮೆಂಟ್ : ರು.11650 - 11800
ಅರೆಬಿಕಾ ಚೆರಿ : ರು.6500 - 6700
ರೋಬೆಸ್ಟಾ ಪಾರ್ಚ್ ಮೆಂಟ್ : ರು.10000 - 10400
ರೋಬೆಸ್ಟಾ ಚೆರಿ : ರು. 6150 - 6300