ಮೌರ್ಯರಿಂದ ಮೈಸೂರು ಒಡೆಯರ್ ವರೆಗಿನ ನಾಣ್ಯ ದರ್ಶನ

| Published : Feb 01 2024, 02:04 AM IST

ಮೌರ್ಯರಿಂದ ಮೈಸೂರು ಒಡೆಯರ್ ವರೆಗಿನ ನಾಣ್ಯ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪಾಳೆಗಾರರ ಕಾಲದ , ಮಾಗಡಿಯ ಕೆಂಪೇಗೌಡ, ಯಲಹಂಕದ ನಾಡಪ್ರಭುಗಳ ಅಪರೂಪದ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಇವುಗಳನ್ನೆಲ್ಲ ಪಠ್ಯದಲ್ಲಿ ಓದುತ್ತಿದ್ದ ಇತಿಹಾಸದ ವಿದ್ಯಾರ್ಥಿಗಳು, ಕಣ್ಣಾರೆ ನೋಡಿ, ಕುತೂಹಲದಿಂದ ಇನ್ನಷ್ಟು ವಿಚಾರಗಳನ್ನು ತಿಳಿದುಕೊಂಡರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತಿಹಾಸದಲ್ಲಿ ದಾಖಲಾಗಿ­ರುವ ದೇಶದ ವಿವಿಧ ಸಾಮ್ರಾಜ್ಯಗಳ ಗತ ವೈಭವವನ್ನು ಸಾರುವ ಅಪರೂಪದ ನಾಣ್ಯಗಳ ಪ್ರದರ್ಶನ ನಗರದ ಎಂಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್. ಎಂವಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಪರಂಪರ ಕೂಟ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹವ್ಯಾಸಿ ನಾಣ್ಯ ಸಂಗ್ರಹಕಾರ, 85 ವರ್ಷಗಳ ನಿವೃತ್ತ ಎಂಜಿನಿಯರ್‌ ರಾಮರಾವ್‌ರವರು ನಾಣ್ಯಗಳನ್ನು ಪ್ರದರ್ಶಿಸಿದರು.

ಅದೂ ಹತ್ತಲ್ಲ, ಇಪ್ಪತ್ತಲ್ಲಾ, ಬರೋಬ್ಬರಿ 1600 ನಾಣ್ಯಗಳನ್ನು, 100ಕ್ಕೂ ಹೆಚ್ಚು ದೇಶಗಳ ನೋಟುಗಳನ್ನು ಮತ್ತು 200ಕ್ಕೂ ಹೆಚ್ಚು ಸಂಗ್ರಹಯೋಗ್ಯ ಅಂಚೆ ಸ್ಟಾಂಫ್ ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅದರಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಂಚಿನ ನಾಣ್ಯಗಳು ಸೇರಿದ್ದವು. ಅಲ್ಲದೆ, ದೇಶವನ್ನಾಳಿದ ವಿವಿಧ ಸಾಮ್ರಾಜ್ಯಗಳು ಹೊರಡಿಸಿದ್ದ ನಾಣ್ಯಗಳನ್ನು ಕಾಲಾನುಕ್ರಮಣಿಕೆಯಲ್ಲಿ, ವಿವರಣೆ ಸಹಿತ ಮಾಹಿತಿಯನ್ನು ನಾಣ್ಯಗಳೊಂದಿಗೆ ಬಿತ್ತರಿಸಲಾಗಿತ್ತು.

ಕ್ರಿಪೂ 6ನೇ ಶತಮಾನದಿಂದ ಕ್ರಿಶ 2024 ರವರೆಗಿನ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಅಂದರೆ 2500 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಪ್ರದರ್ಶನದಲ್ಲಿದ್ದವು. ಗೌತನ ಬುದ್ಧನ ಕಾಲದ ಚಿನ್ನ, ಬೆಳ್ಳಿ ನಾಣ್ಯಗಳೂ ಅದರಲ್ಲಿ ಸೇರಿದ್ದವು. ಮೌರ್ಯರು, ಗುಪ್ತರು, ಶಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಮರಾಠರು, ಮೊಘಲರು, ಬಹುಮನಿ ಸಾಮ್ರಾಜ್ಯ, ವಿವಿಧ ಪಾಳೇಗಾರರು, ಮೈಸೂರು ಒಡೆಯರು, ಬ್ರಿಟೀಷರು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಪ್ರಕಟಿಸಲಾದ ನಾಣ್ಯಗಳು ಪ್ರದರ್ಶನದಲ್ಲಿದ್ದವು.

ಪಾಳೆಗಾರರ ಕಾಲದ , ಮಾಗಡಿಯ ಕೆಂಪೇಗೌಡ, ಯಲಹಂಕದ ನಾಡಪ್ರಭುಗಳ ಅಪರೂಪದ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಇವುಗಳನ್ನೆಲ್ಲ ಪಠ್ಯದಲ್ಲಿ ಓದುತ್ತಿದ್ದ ಇತಿಹಾಸದ ವಿದ್ಯಾರ್ಥಿಗಳು, ಕಣ್ಣಾರೆ ನೋಡಿ, ಕುತೂಹಲದಿಂದ ಇನ್ನಷ್ಟು ವಿಚಾರಗಳನ್ನು ತಿಳಿದುಕೊಂಡರು.ನಾಣ್ಯಗಳು ಪ್ರಮುಖ ದಾಖಲೆಗಳುಕಾಲೇಜಿನ ಪರಂಪರ ಕೂಟದ ಸಂಚಾಲಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ರಂಗಪ್ಪ ಪ್ರತಿಕ್ರಿಯಿಸಿ, ವಿವಿಧ ಸಾಮ್ರಾಜ್ಯಗಳ ಆರ್ಥಿಕ, ರಾಜಕೀಯ, ಸಾಮಾಜಿಕ ಇತಿಹಾಸವನ್ನು ತಿಳಿಯಲು ನಾಣ್ಯಗಳು ಆಕಾರಗಳಾಗಿವೆ. ಅಲ್ಲದೆ ಸಾಮ್ರಾಜ್ಯಗಳ ಭೌಗೋಳಿಕ ವಿಸ್ತೀರ್ಣವನ್ನೂ ಇದರಿಂದ ಗುರುತಿಸಬಹುದು. ಸಾಮ್ರಾಜ್ಯಗಳು ಎಷ್ಟು ಶಕ್ತಿಯುತವಾಗಿದ್ದವು ಹಾಗೂ ಎಷ್ಟು ಶ್ರೀಮಂತಿಕೆಯಿಂದ ಕೂಡಿದ್ದವು ಎಂಬುದು ಇದರಿಂದ ತಿಳಿದು ಬರುತ್ತದೆ. ಅಲ್ಲದೆ, ರಾಜ, ಮಹಾರಾಜರಿಗೆ ಇದ್ದ ಬಿರುದುಗಳು, ಸಾಮ್ರಾಜ್ಯದ ಲಾಂಛನಗಳು, ಇಸವಿಗಳು ಇರುವುದರಿಂದ ಇತಿಹಾಸವನ್ನು ಕಾಲಾನುಕ್ರಮಣಿಕೆಯಲ್ಲಿ ಬರೆಯಲು ಸಾಧ್ಯವಾಗಿದೆ. ಇಂತಹ ನಾಣ್ಯಗಳ ಸಂಗ್ರಹ ಮತ್ತು ಪ್ರದರ್ಶನದಿಂದ ಇತಿಹಾಸದ ವಿದ್ಯಾರ್ಥಿಗಳು, ಸಂಶೋಧಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅವರ ಜ್ಞಾನ ಹೆಚ್ಚುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಮುನಿರಾಜು ಮಾತನಾಡಿ, ಕೊಡು-ಕೊಳ್ಳುವಿಕೆಯ ವ್ಯವಹಾರ ಪದಾರ್ಥ-ವಸ್ತು ವಿನಿಮಯದಿಂದ ಪ್ರಾರಂಭವಾಗಿ ಕಾಲಕ್ರಮೇಣ ಇದರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಲು ಹುಟ್ಟಿಕೊಂಡ ಲೋಹದ ತುಂಡುಗಳ ವಿನಿಮಯ ಪದ್ಧತಿ ಇಂದು ನಾಣ್ಯ-ನೋಟುಗಳಿಗೆ ರೂಪಾಂತರವಾಗಿರುವುದು ಚರಿತ್ರೆಯ ಭಾಗವಾಗಿದೆ. ಸುಮಾರು ಒಂದು ಸಾವಿರ ವರ್ಷಗಳಿಗೂ ಹಿಂದಿನಿಂದ ರೂಢಿಯಲ್ಲಿರುವ ಲೋಹದ ನಾಣ್ಯಗಳ ದೊಡ್ಡ ಸಂಗ್ರಹವನ್ನೇ ತನ್ನಲ್ಲಿಟ್ಟುಕೊಂಡ ರಾಮರಾವ್‌ ರವರು, ನಾಣ್ಯ ಪದ್ಧತಿ ನಡೆದು ಬಂದ ದಾರಿಯನ್ನು ವಿವರಿಸುವ ಆಕರ್ಷಕ ಪ್ರದರ್ಶನಗಳನ್ನು ಹೊಂದಿರುವುದು ವಿಶೇಷವಾಗಿದೆ. ದೇಶ ವಿದೇಶಗಳ ವಿವಿಧ ಕಾಲಘಟ್ಟಗಳಿಗೆ ಸೇರಿದ ಬಗೆ ಬಗೆಯ ನಾಣ್ಯಗಳನ್ನು ನಿಖರ ಮಾಹಿತಿಯೊಂದಿಗೆ ಜೋಡಿಸಿಡಲಾದ ಚಿನ್ನ-ಬೆಳ್ಳಿ, ತಾಮ್ರ, ಸೀಸ ಹಾಗೂ ಮಿಶ್ರಲೋಹದ ಅಸಂಖ್ಯ ನಾಣ್ಯಗಳು ಸಂಗ್ರಹದಲ್ಲಿವೆ ಎಂದರು.

ಪ್ರಾಧ್ಯಾಪಕರಾದ ಡಾ.ಷಫೀ ಅಹಮದ್, ಡಾ.ಸುನೀತಾ, ವಿ.ಪದ್ಮಾವತಿ, ಡಾ.ಡಿ.ವಿ.ಶ್ರೀನಿವಾಸ್,ಕಾಲೇಜಿನ ಭೋಧಕ,ಭೋಧಕೇತರ ಸಿಬ್ಬಂಧಿ,ವಿಧ್ಯಾರ್ಥಿಗಳು ಇದ್ದರು.

ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ಬಿಎಚ್‌ಇಎಲ್‌ ಎಂಜಿನಿಯರ್‌ ಆಗಿದ್ದಾಗಿನಿಂದ ನಾಣ್ಯ ಸಂಗ್ರಹದ ಹವ್ಯಾಸ ಬೆಳೆಸಿಕೊಂಡಿದ್ದೆ. ದೇಶದ ವಿವಿಧ ಪ್ರದೇಶಗಳಲ್ಲಿನ ಐತಿಹಾಸಿಕ ಪ್ರದೇಶ, ಅರಮನೆಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೆಲ ನಾಣ್ಯಗಳನ್ನು ಖರೀದಿಸಿ ಸಂಗ್ರಹಿಸಲಾರಂಭಿಸಿದೆ. ಇದನ್ನು ಗಮನಿಸಿದ ನನ್ನ ಗೆಳೆಯರು ಕೆಲ ಅಮೂಲ್ಯ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದರು. ನಿವೃತ್ತಿ ನಂತರ ನಾಣ್ಯಗಳ ಪ್ರದರ್ಶನದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ಇಲ್ಲಿವರೆಗೆ ರಾಜ್ಯದ 166 ಕಡೆ ನಾಣ್ಯ ಪ್ರದರ್ಶನ ನೀಡಿದ್ದೇನೆ.-ರಾಮರಾವ್‌ ನಾಣ್ಯಗಳನ್ನು ಪ್ರದರ್ಶಿಸಿದ್ದ ನಿವೃತ್ತ ಎಂಜಿನಿಯರ್‌