ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬುಧವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಬಿಜೆಪಿ ಕಚೇರಿಯಲ್ಲಿದ್ದ ಬ್ಯಾನರ್‌ನಿಂದ ಜೆಡಿಎಸ್ ಮುಖಂಡರ ಭಾವಚಿತ್ರಕ್ಕೆ ಕೋಕ್ ನೀಡಲಾಗಿದೆ. ಬುಧವಾರ ಬೆಳಗ್ಗೆ ೧೧ ಗಂಟೆಗೆ ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದ್ದು, ಚನ್ನಪಟ್ಟಣ ವಿಧಾನಸಭೆ ಉಪಚುನಾಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಸಭೆಯಲ್ಲಿ ಎನ್‌ಡಿಎ ಟಿಕೆಟ್ ಕೈತಪ್ಪಿದಲ್ಲಿ ತಮ್ಮ ನಿಲುವೇನು ಎಂದು ಯೋಗೇಶ್ವರ್ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈತ್ರಿ ಬ್ಯಾನರ್‌ಗೆ ಕೋಕ್:ಇದೇ ವೇಳೆ ಎನ್‌ಡಿಎ ಟಿಕೆಟ್ ಕೈತಪ್ಪುವ ಸಾಧ್ಯತೆಯಲ್ಲಿ ಅಸಮಾಧಾನದಲ್ಲಿರುವ ಯೋಗೇಶ್ವರ್ ಐದನೇ ಕ್ರಾಸ್‌ನಲ್ಲಿನ ತಮ್ಮ ನಿವಾಸದಲ್ಲಿ ಇದ್ದ ಬಿಜೆಪಿ ಕಚೇರಿಯಲ್ಲಿನ ಬ್ಯಾನರ್ ಅನ್ನು ತೆರವುಗೊಳಿಸಿದ್ದು, ಹೊಸ ಬ್ಯಾನರ್ ಅಳವಡಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಚಿಹ್ನೆಯ ಭಾವಚಿತ್ರವಿದ್ದ ಹಿಂದಿನ ಬ್ಯಾನರ್ ತೆಗೆಸಿ ಹೊಸ ಬ್ಯಾನರ್ ಅಳವಡಿಸಿದ್ದು, ಅದರಲ್ಲಿ ಕುಮಾರಸ್ವಾಮಿ ಭಾವಚಿತ್ರಕ್ಕೆ ಕೋಕ್ ನೀಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.