ಸಾರಾಂಶ
ಕುಷ್ಟಗಿ : ಲಾಸ್ಟ್ ಬೆಂಚ್ ಪದ್ಧತಿಗೆ ಕೋಕ್ ನೀಡುವ ಮೂಲಕ ಅರ್ಧ ಚಂದ್ರಾಕೃತಿಯಲ್ಲಿ ಬೆಂಚ್‌ಗಳನ್ನು ಅಳವಡಿಸಿ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯೋಗವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಅನುದಾನಿತ ಮತ್ತು ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆರಂಭಿಸಿದೆ.
ತಾಲೂಕಿನ ಶಿರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಕೈಗೊಂಡಿರುವ ವಿನೂತನ ಪ್ರಯೋಗವಾಗಿದ್ದು, ಇದರಿಂದ ಮಕ್ಕಳಿಗೆ ಖುಷಿಯಾಗಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾನು ಕೊನೆಯ ಬೆಂಚು, ದಡ್ಡ ಇರಬಹುದು, ನಾನು ಮೊದಲ ಬೆಂಚು ಜಾಣನಿರಬಹುದು ಎಂಬ ಭ್ರಮೆ ನಿವಾರಿಸಿ, ಎಲ್ಲರಿಗೂ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುವುದು ಇದರ ಹಿಂದಿನ ಉದ್ದೇಶ. ಹೀಗಾಗಿ ಕೇರಳ ಸರ್ಕಾರ ಜಾರಿಗೆ ತಂದಿರುವ ಅರ್ಧ ವೃತ್ತಾಕಾರದ ಬೆಂಚ್ ವ್ಯವಸ್ಥೆಯನ್ನು ತಾಲೂಕಿನ ಶಿರಗುಂಪಿ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೇರಳದಲ್ಲಿ ಜಾರಿಗೆ ತಂದಿರುವ ಮಾದರಿಯನ್ನು ‘ಕನ್ನಡಪ್ರಭ’ ವರದಿ ಮಾಡಿತ್ತು. ಈ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಇದೇ ಪದ್ಧತಿಯನ್ನು ಅಳವಡಿಕೊಳ್ಳಲು ಮುಂದಾಗಿದ್ದು, ಸೋಮವಾರದಿಂದಲೇ ಜಾರಿಗೆ ತಂದಿದ್ದಾರೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದ್ದು, 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲ ತರಗತಿಗಳಲ್ಲೂ ಈ ಪದ್ಧತಿ ಅಳವಡಿಸಲಾಗಿದೆ.
ಇನ್ನು, ಕುಷ್ಟಗಿ ಪಟ್ಟಣದ ಅನುದಾನಿತ ಶ್ರೀ ಬುತ್ತಿ ಬಸವೇಶ್ವರ ಕಿರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯು ಆಕಾರದಲ್ಲಿ ಬೆಂಚ್‌ಗಳನ್ನು ಅಳವಡಿಸುವ ಮೂಲಕ ಶಿಕ್ಷಕರು ಪಾಠವನ್ನು ಬೋಧನೆ ಮಾಡುತ್ತಿದ್ದಾರೆ.
ಮಕ್ಕಳಲ್ಲಿ ಉತ್ಸಾಹ
ನಮ್ಮ ಶಿರಗುಂಪಿ ಶಾಲೆಯಲ್ಲಿ ಯು ಆಕಾರದಲ್ಲಿ ಬೆಂಚಗಳನ್ನು ಅಳವಡಿಸುವ ಮೂಲಕ ಲಾಸ್ಟ್ ಬೆಂಚ್ ಫಸ್ಟ್ ಬೆಂಚ್ ಎನ್ನುವ ಭಾವನೆ ತೊಲಗುವಂತೆ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಮತ್ತಷ್ಟು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.
-ಬೋರಮ್ಮ ಮಾಳಗಿ, ಮುಖ್ಯಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.---
ಕಲಿಕೆಗೆ ಅನುಕೂಲ
ನಮ್ಮ ಶಾಲೆಯಲ್ಲಿ ಲಾಸ್ಟ್ ಬೆಂಚ್ ಇರುವುದಿಲ್ಲ. ಯು ಆಕಾರದಲ್ಲಿ ಬೆಂಚ್ ಹಾಕಲಾಗಿದ್ದು, ಎಲ್ಲರಿಗೂ ಶಿಕ್ಷಕರು ಹಾಗೂ ಬೋರ್ಡ್ ಕಾಣುತ್ತಿದೆ. ಕಲಿಯಲು ತುಂಬಾ ಅನುಕೂಲಕರವಾಗಿದೆ ಹಾಗೂ ವಿವಿಧ ಚಟುವಟಿಕೆ ನಡೆಸಲು ತರಗತಿ ಕೊಠಡಿಯಲ್ಲಿ ಸ್ಥಳಾವಕಾಶ ದೊರೆಯಲಿದೆ.
-ಲಕ್ಷ್ಮೀ, 6ನೇ ತರಗತಿ ವಿದ್ಯಾರ್ಥಿನಿ.
ಎಲ್ಲ ಶಾಲೆಗಳಲ್ಲೂ ಅಳವಡಿಕೆ
ಕುಷ್ಟಗಿ ತಾಲೂಕಿನ ಶಿರಗುಂಪಿ ಶಾಲೆ ಹಾಗೂ ಕುಷ್ಟಗಿ ಪಟ್ಟಣದ ಬುತ್ತಿಬಸವೇಶ್ವರ ಶಾಲೆ ಶಿಕ್ಷಕರು ಮಾಡಿರುವ ಕಾರ್ಯ ಉತ್ತಮವಾಗಿದೆ. ಈ ವ್ಯವಸ್ಥೆಯನ್ನು ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಳವಡಿಸುವಂತೆ ಸಭೆ ನಡೆಸಿ ಸೂಚನೆ ಕೊಡಲಾಗುವುದು. ಇದರಿಂದ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಾಣಬಹುದಾಗಿದೆ.
-ಸುರೇಂದ್ರ ಕಾಂಬಳೆ, ಬಿಇಒ, ಕುಷ್ಟಗಿ.