ಇತಿಹಾಸ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು - ಸಿಬ್ಬಂದಿ ನಡುವೆ ಶೀತಲ ಸಮರ !

| N/A | Published : Feb 07 2025, 12:33 AM IST / Updated: Feb 07 2025, 08:29 AM IST

ಸಾರಾಂಶ

ಗಡಿ, ಭಾಷೆ ವಿಷಯ ಸೇರಿದಂತೆ ಒಂದಿಲ್ಲೊಂದು ವಿವಾದದಿಂದ ಸದ್ದು ಮಾಡುತ್ತಲೇ ಬಂದಿರುವ ಇತಿಹಾಸ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಅಭಿವೃದ್ಧಿ ವಿಷಯಕ್ಕಿಂತ ವಿವಾದದಿಂದಲೇ ಚರ್ಚೆಗೆ ಒಳಗಾಗಿದೆ.

ಶ್ರೀಶೈಲ ಮಠದ

 ಬೆಳಗಾವಿ : ಗಡಿ, ಭಾಷೆ ವಿಷಯ ಸೇರಿದಂತೆ ಒಂದಿಲ್ಲೊಂದು ವಿವಾದದಿಂದ ಸದ್ದು ಮಾಡುತ್ತಲೇ ಬಂದಿರುವ ಇತಿಹಾಸ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಅಭಿವೃದ್ಧಿ ವಿಷಯಕ್ಕಿಂತ ವಿವಾದದಿಂದಲೇ ಚರ್ಚೆಗೆ ಒಳಗಾಗಿದೆ.

ಇದೀಗ ಪಾಲಿಕೆ ಅಧಿಕಾರಿಗಳ ನಡುವಿನ ಸಂಘರ್ಷದಿಂದಾಗಿ ಬೆಳಗಾವಿ ಪಾಲಿಕೆ ಮತ್ತೆ ಸುದ್ದಿಯಲ್ಲಿದೆ. ಕೆಲ ಸಿಬ್ಬಂದಿ ವರ್ಗಾವಣೆ ವಿಚಾರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು, ಸಿಬ್ಬಂದಿ ನಡುವೆ ಶೀತಲ ಸಮರಕ್ಕೆ ಎಡೆಮಾಡಿಕೊಟ್ಟಿದೆ. ಜಿಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಪಾಲಿಕೆ ಆಯುಕ್ತರ ಕ್ರಮಕ್ಕೆ ತೀವ್ರ ಸಿಬ್ಬಂದಿ ವಲಯದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ನಾಲ್ಕು ದಿನದ ಅಂತರದಲ್ಲೇ ಬರೋಬ್ಬರಿ 40 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.ವರ್ಗಾವಣೆಯಿಂದ ನೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಪಾಲಿಕೆ ಆಯುಕ್ತರ ವಿರುದ್ಧವೇ ದೂರು ನೀಡಿದ್ದಾರೆ. ಆಯುಕ್ತರು ನಮ್ಮನ್ನು ವರ್ಗಾವಣೆ ಮಾಡುವ ಮೂಲಕ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಪಾಲಿಕೆ ಆಯುಕ್ತೆ ಶುಭಾ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. 

ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಐಎಎಸ್‌ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.6 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಎಂಎಸ್‌ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಶುಭಾ ಅವರು ಕೆಎಂಎಸ್ ಅಧಿಕಾರಿಯಾಗಿದ್ದಾರೆ. ಗಡಿ, ಭಾಷಾ ಆಧಾರಿತ ರಾಜಕಾರಣ ಪಾಲಿಕೆಯ ಇತಿಹಾಸ ಪುಟ ಸೇರಿದೆ. ಭಾಷಾ ರಾಜಕಾರಣಕ್ಕೆ ಕಡಿವಾಣ ಬಿದ್ದಿದೆ. ಪಾಲಿಕೆಯ ಆಡಳಿತ ಈಗ ರಾಜಕೀಯ ಪಕ್ಷಗಳ ಹಿಡಿತದಲ್ಲಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಒಂದಿಲ್ಲೊಂದು ವಿವಾದದಿಂದಲೇ ಸದಾ ಸುದ್ದಿಯಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರ ತೀವ್ರ ಚರ್ಚೆಗೆ ಎಡೆಮಾಡಿದೆ. ಅಧಿಕಾರಿಗಳ, ಸಿಬ್ಬಂದಿ ನಡುವಿನ ಒಳಜಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನಗರದ ಅಭಿವೃದ್ಧಿಗೆ ಹೊಡೆತ ಬಿದ್ದಂತಾಗಿದೆ.ಈ ಹಿಂದೆ ಕೂಡ ಪಾಲಿಕೆ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿದ್ದ ಹಿಂದಿನ ಆಯುಕ್ತ ಅಶೋಕ ದುಡಗುಂಟಿ ಅವರನ್ನು ಕೂಡ ಪಾಲಿಕೆ ಸಿಬ್ಬಂದಿ ಒತ್ತಡದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.

ಅಧಿಕಾರಿಗಳ ನಡುವೆ ಜಟಾಪಟಿ:  ಪಾಲಿಕೆ ಆಯುಕ್ತ ಶುಭಾ.ಬಿ ಕರೆದ ಸಭೆಯಲ್ಲೇ ಅಧಿಕಾರಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸುವ ಹಂತಕ್ಕೂ ತಲುಪಿದ ಘಟನೆಯೂ ನಡೆದಿದೆ. ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿದ್ದು, ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯೂ ಕೂಡ ಎದ್ದು ಕಾಣುತ್ತದೆ. ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಹಳಿ ತಪ್ಪಿರುವ ಪಾಲಿಕೆ ಆಡಳಿತ ಯಂತ್ರಕ್ಕೆ ಸರ್ಕಾರ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ. 

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

- ಶುಭಾ.ಬಿ, ಪಾಲಿಕೆ ಆಯುಕ್ತೆ.