ಜಯಪುರ ಗ್ರಾಪಂನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

| Published : Dec 02 2024, 01:16 AM IST

ಜಯಪುರ ಗ್ರಾಪಂನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಉಳಿವು ಮತ್ತು ಸರ್ವತೋಮುಖ ಬೆಳವಣಿಗೆಗೆ ಆರ್ಟಿಕಲ್ 21ರಡಿ ಎಲ್ಲ ಅವಕಾಶಗಳನ್ನು ಸಂವಿಧಾನ ಒದಗಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕಿನ ಜಯಪುರ ಗ್ರಾಮ ಪಂಚಾಯಿತಿಯು ಗ್ರಾಮ್ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜಿಸಿತ್ತು.

ಗ್ರಾಮ್ ಸಂಸ್ಥೆಯ ಸಂಶೋಧಕ ಡಾ. ರಾಜೇಂದ್ರಪ್ರಸಾದ್ ಮಾತನಾಡಿ, ಮಕ್ಕಳ ಉಳಿವು ಮತ್ತು ಸರ್ವತೋಮುಖ ಬೆಳವಣಿಗೆಗೆ ಆರ್ಟಿಕಲ್ 21ರಡಿ ಎಲ್ಲ ಅವಕಾಶಗಳನ್ನು ಸಂವಿಧಾನ ಒದಗಿಸಿದೆ. ಹೀಗಾಗಿ ಮಕ್ಕಳ ರಕ್ಷಣೆ ಹಾಗೂ ಎಲ್ಲ ರೀತಿಯ ಬೆಳವಣಿಗೆಗೆ ಸರ್ಕಾರ ಹಾಗೂ ಸಮಾಜ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದರು.

ಮಕ್ಕಳ ಸ್ನೇಹಿ ಪಂಚಾಯತ್ ಆಗಿ ಮಾಡುವ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು. ಅದಕ್ಕಾಗಿ ಜಯಪುರ ಗ್ರಾಪಂ ಜೊತೆಗೆ ಗ್ರಾಮ್ ಸಂಸ್ಥೆಯು ಕೈ ಜೋಡಿಸಿದೆ. ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಲು ಎಲ್ಲಾ ರೀತಿಯ ಬೌದ್ಧಿಕ ಸಹಯೋಗವನ್ನು ನೀಡಲಿದೆ ಎಂದು ಹೇಳಿದರು.

ಡಿಸಿಪಿಓ ರಘು ಮಾತನಾಡಿ, ಮಕ್ಕಳ ಎಲ್ಲಾ ರೀತಿಯ ಸಮಸ್ಯೆಗಳಿಗೆ ಮಕ್ಕಳ ಸಹಾಯವಾಣಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಬಳಸಿಕೊಳ್ಳಬೇಕು ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವಣ್ಣ ಮಾತನಾಡಿ, ಶಿಕ್ಷಣಕ್ಕೆ ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಪಂ ಒದಗಿಸಲು ಸಿದ್ಧವಿದೆ. ಇಂದಿನ ಮಕ್ಕಳ ಸಂಸತ್ ನಲ್ಲಿ ಬಂದಂತಹ ಹಲವಾರು ಸಮಸ್ಯೆಗಳಿಗೆ ಆದ್ಯತೆಯ ಅನುಸಾರವಾಗಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಶ್ರೀ ರಾಘವೇಂದ್ರ ವಿದ್ಯಾ ಪೀಠ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಮಾನಸ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.

ಗ್ರಾಪಂ ಅಧ್ಯಕ್ಷ ಮಾದೇವಯ್ಯ, ನೋಡಲ್ ಅಧಿಕಾರಿ ಮಹೇಶ್ ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಜವರನಾಯಕ, ಐಸಿಡಿಎಸ್ ಮೇಲ್ವಿಚಾರಕಿ ನಯನಾ, ಶಿಕ್ಷಣ ಸಂಯೋಜಕ ಮಂಜುನಾಥ್, ಗ್ರಾಮ್ ಸಂಸ್ಥೆಯ ಸಂಯೋಜಕ ಸಿ.ಎಸ್. ರವಿ, ಕಾರ್ಯದರ್ಶಿ ನಾಗವೇಣಿ ಮೊದಲಾದವರು ಇದ್ದರು.