ಸಾರಾಂಶ
ಕಾಡಾನೆಗಳ ಜೋಡಿ ಕೆಆರ್‌ಎಸ್ ಹಿನ್ನೀರಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮ ವ್ಯಾಪ್ತಿಯ ಸುದ್ದಿಯನ್ನು ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ನಂತರ ತಾಲೂಕು ಅರಣ್ಯಾಧಿಕಾರಿ ಅನಿತಾ ನೇತೃತ್ವದ ಅರಣ್ಯಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಯಾವುದೇ ರೀತಿಯ ಅಪಾಯ ಘಟಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿಗೆ ಸೇರಿದ ತಾಲೂಕಿನ ಬಸ್ತಿ ಹೊಸಕೋಟೆ ಮತ್ತು ಮಾವಿನಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.ಎರಡು ಗ್ರಾಮಗಳ ನಡುವಿನ ಕೆ.ಆರ್.ಎಸ್ ಜಲಾಶಯದ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಬೀಡು ಬಿಟ್ಟು ಜಲಕ್ರೀಡೆಯಲ್ಲಿ ತೊಡಗಿದ್ದು, ಆನೆಗಳನ್ನು ನೀರಿನಿಂದ ಹೊರ ಬರುವಂತೆ ಮಾಡಿ ಕಾಡಿಗಟ್ಟಲು ತಾಲೂಕು ಅರಣ್ಯ ಇಲಾಖೆ ಹರ ಸಾಹಸ ಮಾಡುತ್ತಿದೆ.
ಕಾಡಾನೆಗಳ ಜೋಡಿ ಕೆಆರ್‌ಎಸ್ ಹಿನ್ನೀರಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮ ವ್ಯಾಪ್ತಿಯ ಸುದ್ದಿಯನ್ನು ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ನಂತರ ತಾಲೂಕು ಅರಣ್ಯಾಧಿಕಾರಿ ಅನಿತಾ ನೇತೃತ್ವದ ಅರಣ್ಯಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಯಾವುದೇ ರೀತಿಯ ಅಪಾಯ ಘಟಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.ನಾಡಿಗೆ ಬಂದಿರುವ ಕಾಡಾನೆಗಳನ್ನು ಕಾಡಿನತ್ತ ಕಳುಹಿಸಲು ಪ್ರಯತ್ನ ನಡೆಸುತ್ತಿದೆ. ಸಂವೃದ್ದವಾದ ಅರಣ್ಯವೇ ಇಲ್ಲದ ಕೆ.ಆರ್.ಪೇಟೆ ತಾಲೂಕಿನಲ್ಲಿ ಆಗಾಗ್ಗೆ ಆನೆಗಳು ಕಾಣಿಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಗ್ರಾಸವಾಗಿದೆ.
ಕಳೆದ ಮೂರ್‍ನಾಲು ವರ್ಷಗಳ ಹಿಂದೆ ತಾಲೂಕಿನ ಮತ್ತೀಕೆರೆ ಗ್ರಾಮ ವ್ಯಾಪ್ತಿಯಲ್ಲಿ ಪ್ರಪ್ರಥಮವಾಗಿ ಜೋಡಿ ಆನೆಗಳು ಕಾಣಿಸಿಕೊಂಡಿದ್ದವು. ಅದಾದ ಒಂದೆರಡು ವರ್ಷಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ, ಪುರ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.ಈಗ ತಾಲೂಕಿನ ಬಸ್ತಿ ಹೊಸಕೋಟೆ ಮತ್ತು ಅದರ ಪಕ್ಕದ ಮಾವಿನ ಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು ರೈತರಲ್ಲಿ ಭೀತಿ ಹುಟ್ಟಿಸಿವೆ. ಬಸ್ತಿ ಹೊಸಕೋಟೆ ಪ್ರಮುಖ ಜೈನ ತೀರ್ಥಂಕರ ಕ್ಷೇತ್ರವಾಗಿದ್ದು, ಪ್ರವಾಸಿ ತಾಣವಾಗಿ ರೂಪುಗೊಂಡಿದೆ.
ಬಸ್ತಿ ಗೊಮ್ಮಟನನ್ನು ನೋಡಲು ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಈ ವ್ಯಾಪ್ತಿಯ ಕೆ.ಆರ್.ಎಸ್ ಹಿನ್ನೀರಿನಲ್ಲಿ ಗಜ ಜೋಡಿಗಳು ಕದಲದೆ ನೆನ್ನೆಯಿಂದ ವಾಸ್ತವ್ಯ ಹೂಡಿದ್ದು ಆನೆಗಳನ್ನು ಕಾಡಿನತ್ತ ಕಳುಹಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.