ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡನಾಡು ಸುಲಭಕ್ಕೆ ರಚನೆಯಾಗಲಿಲ್ಲ, ಅದರ ಹಿಂದೆ ಅನೇಕ ಮಂದಿಯ ಶ್ರಮ ಮತ್ತು ಹೋರಾಟದ ಹಿನ್ನೆಲೆ ಇದೆ. ಹೀಗೆ ರೂಪುಗೊಂಡ ಬಗೆಯನ್ನು ಇಂದಿನ ತಲೆಮಾರು ಅರಿಯಬೇಕಿದೆ ಎಂದು ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಕೆ. ಕಾಳಚನ್ನೇಗೌಡ ತಿಳಿಸಿದರು.ಕ್ರಿಯಾ ಸಂಸ್ಥೆಯ ಘಟಕವಾದ ಕ್ರಿಯಾ ಅಭಿವ್ಯಕ್ತಿಯು 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೋಗಾದಿಯ ಕ್ರಿಯಾ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ಕನ್ನಡ ಭಾಷೆಯ ಬಿಕ್ಕಟ್ಟುಗಳು ಮತ್ತು ಪರಿಹಾರಗಳು ಕುರಿತ ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಬೇರೆಲ್ಲ ಭಾಷೆಗಿಂತ ವಿಶಿಷ್ಟವಾದದ್ದು, ಇಂದಿನ ಯುವಜನತೆ ಕನ್ನಡ ಕಲಿತು ಸಂವಹನದಲ್ಲಿ ನಿರಂತರ ಬಳಸಬೇಕು ಎಂದರು.ನಂತರ ನಡೆದ ಸಂವಾದದಲ್ಲಿ ಸಮಕಾಲೀನ ಕನ್ನಡ ಸಾಹಿತ್ಯ ಕುರಿತು ಕವಿ ಸತೀಶ್ ಟಿ. ಜವರೇಗೌಡ ಮಾತಾನಾಡಿ, ಸಾಹಿತ್ಯ ಎನ್ನುವುದು ಭಾಷೆಯನ್ನು ಲಿಖಿತ ರೂಪದಲ್ಲಿ ಕಾಪಿಟ್ಟುಕೊಂಡು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡುವುದರಿಂದ ಭಾಷೆಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತದೆ ಎಂದು ಹೇಳಿದರು.ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕುರಿತು ಬರಹಗಾರ ನೀ.ಗೂ. ರಮೇಶ್ ಮಾತನಾಡಿ, ಮಾತೃಭಾಷೆಯಲ್ಲಿ ನೀಡುವ ಯಾವುದೆ ಶಿಕ್ಷಣ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಕಾರಿಯಾಗಿರುತ್ತದೆ. ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಪರಿಣಾಮಕಾರಿ ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕುರಿತು ಪ್ರಾಧ್ಯಾಪಕ ಡಾ.ಪಿ.ಎನ್. ಹೇಮಚಂದ್ರ ಮಾತನಾಡಿ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಇಲ್ಲದ ಹಲವಾರು ಕನ್ನಡಿಗ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಲೋಕಸೇವಾ ಆಯೋಗ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ರೈಲ್ವೆ ನೇಮಕಾತಿ ಮಂಡಳಿ ಮುಂತಾದವು ಅಧಿಕೃತ ಪ್ರಾದೇಶಿಕ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು ಕನ್ನಡಿಗರು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕ್ರಿಯಾ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು, ಅಧ್ಯಾಪಕರಾದ ಜೆ. ನಂದಿನಿ, ಸಿದ್ದಪ್ಪ, ಕ್ರಿಯಾದ ಸಂಯೋಜಕರಾದ ಎಸ್. ಮಂದಾರ, ಬಿ. ಕುಮಾರ್, ಲೋಕೇಶ್, ಬಿ. ಪುನಿತ್ ಕುಮಾರ್, ರಾಜೇಶ್ವರಿ, ವೀಣಾ, ಆರ್. ಭರತ್ ಇದ್ದರು. ಶಾಲಿನಿ ಸ್ವಾಗತಿಸಿದರು. ರಾಜೀವ್ ಶರ್ಮ ವಂದಿಸಿದರು. ಸುಪ್ರಿಯಾ ಶಿವಣ್ಣ ನಿರೂಪಿಸಿದರು.