ರಂಗಕಲೆ ಮನರಂಜನಾ ಮಾಧ್ಯಮವಾಗಿ ಜೀವಂತಿಕೆ ಉಳಿಸಿಕೊಂಡಿದೆ

| Published : Dec 02 2024, 01:16 AM IST

ಸಾರಾಂಶ

ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಒಂಬತ್ತು ದಿನಗಳ ನಾಟಕೋತ್ಸವದ ೨ನೇ ದಿನವಾದ ಶನಿವಾರ ಹಾಸನದ ಶ್ರೀ ಮೇಲುಕೋಟೆ ಚಲುವನಾರಾಯಣಸ್ವಾಮಿ ಕಲಾಸಂಘದ ಕಲಾವಿದರು ಕೆ.ಆರ್‌. ಬಾಲಕೃಷ್ಣ ಕಟ್ಟಾಯ, ಕಲ್ಲಯ್ಯ (ಕುಶಾಲ್), ದೇವರಾಜು ಗೊರೂರು, ಎಚ್.ಎಂ.ಪ್ರಭಾಕರ್, ಟಿ.ಆರ್‌.ಪ್ರಕಾಶ್, ಎಸ್.ಎಲ್.ಚಂದ್ರಶೇಖರ್ ನೇತೃತ್ವದಲ್ಲಿ ಸೀಗೆನಾಡು ಪಾಲಾಕ್ಷಾಚಾರ್ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಒಂಬತ್ತು ದಿನಗಳ ನಾಟಕೋತ್ಸವದ ೨ನೇ ದಿನವಾದ ಶನಿವಾರ ಹಾಸನದ ಶ್ರೀ ಮೇಲುಕೋಟೆ ಚಲುವನಾರಾಯಣಸ್ವಾಮಿ ಕಲಾಸಂಘದ ಕಲಾವಿದರು ಕೆ.ಆರ್‌. ಬಾಲಕೃಷ್ಣ ಕಟ್ಟಾಯ, ಕಲ್ಲಯ್ಯ (ಕುಶಾಲ್), ದೇವರಾಜು ಗೊರೂರು, ಎಚ್.ಎಂ.ಪ್ರಭಾಕರ್, ಟಿ.ಆರ್‌.ಪ್ರಕಾಶ್, ಎಸ್.ಎಲ್.ಚಂದ್ರಶೇಖರ್ ನೇತೃತ್ವದಲ್ಲಿ ಸೀಗೆನಾಡು ಪಾಲಾಕ್ಷಾಚಾರ್ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ, ನಾಟಕಕಾರ ಗೊರೂರು ಅನಂತರಾಜು ಮಾತನಾಡಿ, ಚಳಿಗಾಲ ಆರಂಭವಾಗುವ ಡಿಸೆಂಬರ್ ಜನವರಿ ಮಾಹೆಗಳಲ್ಲಿ ಸುಗ್ಗಿಕಾಲ ಆರಂಭವಾಗಿ ರಂಗ ಚಟುವಟಿಕೆ ಗರಿಗೆದರಿ ಹಳ್ಳಿಗಳಲ್ಲಿ ಉತ್ಸಾಹ ಚಿಮ್ಮುತ್ತಿತ್ತು. ಹಾರ್‍ಮೋನಿಯಂ ಮಾಸ್ಟರ್‌ಗಳು ಹಳ್ಳಿಗಳಲ್ಲಿ ಕ್ಯಾಂಪ್ ಮಾಡಿ ತಿಂಗಳುಗಟ್ಟಲೇ ದೇವಸ್ಥಾನ ಭಜನೆ ಮನೆಗಳಲ್ಲಿ ರಂಗತಾಲೀಮು ಮಾಡಿಸುವ ವೇಳೆ ಊರಿನ ಕಲಾಪ್ರೇಮಿಗಳು ಅಲ್ಲಿ ಸೇರಿ ಮನರಂಜನೆ ಪಡೆಯುತ್ತಿದ್ದರು. ಹಳ್ಳಿಯಲ್ಲಿ ನಾಟಕ ಸಿದ್ಧತೆಯ ಚಟುವಟಿಕೆ ನಡೆಯುತ್ತಿತ್ತು. ಮನೆಯೊಳಗಿನ ಟಿವಿ ನಮಗೆ ಎಷ್ಟೇ ಮನರಂಜನೆ ಒದಗಿಸಿದರೂ ಜೀವಂತ ಕಲೆ ಪೌರಾಣಿಕ ನಾಟಕಗಳು ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡು ಜನತೆಗೆ ಮನರಂಜನೆ ಒದಗಿಸುವಲ್ಲಿ ಕಲಾವಿದರ, ಕಲಾ ಸಂಘಟನೆಗಳ ಪಾತ್ರ ಮರೆಯುವಂತಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಹಾಸನ ವಕೀಲರ ಸಂಘದ ಮಾ. ಅಧ್ಯಕ್ಷ ಜೆ.ಪಿ.ಶೇಖರ್ ಮಾತನಾಡಿ, ಕುರುಕ್ಷೇತ್ರ ನಾಟಕವು ಬಿಂಬಿಸುವ ಸತ್ಯ ಸಂಗತಿ ಎಂದರೆ, ಅಧರ್ಮ ವಿರುದ್ಧ ಧರ್ಮ ಎಂದಿಗೂ ಜಯಿಸುತ್ತದೆ ಎಂಬುದು. ನಾಟಕವು ಮನರಂಜನೆ ಜೊತೆಗೆ ಬದುಕುವ ಮಾರ್ಗವನ್ನು ಸೂಚ್ಯವಾಗಿ ಸೂಚಿಸುತ್ತದೆ ಎಂದರು. ಜಿಲ್ಲೆಯ ಹಿರಿಯ ಕಲಾವಿದರು ನೀರಾವರಿ ಇಲಾಖೆಯ ನಿವೃತ್ತ ನೌಕರರು ಜೆ.ಆರ್.ಬಾಲಕೃಷ್ಣರವರನ್ನು ಇಂದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಟರು ಗೋವಿಂದೇಗೌಡರು, ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಬಿದರೆ ರವಿ, ಖಜಾಂಚಿ ಬಿಟ್ಟಗೋಡನಹಳ್ಳಿ ರಮೇಶ್, ಹಿರಿಯ ಕಲಾವಿದರು ದುರ್ಯೋಧನ ಪಾತ್ರಧಾರಿ ಎಚ್.ಎಂ.ಪ್ರಭಾಕರ್, ತಟ್ಟೇಕೆರೆ ಬಿ.ಆರ್.ಪ್ರಕಾಶ್, ಗಾಯಕ ನಟರು ಎಚ್.ಜಿ.ಗಂಗಾಧರ್, ನಟಿ ಶ್ರೀಮತಿ ವೇದ, ಕರ್ಣ ಪಾತ್ರಧಾರಿ ಕುಶಾಲ್, ವಿಷ್ಣುವರ್ಧನ ಅಭಿಮಾನಿ ಸಂಘದ ಅಧ್ಯಕ್ಷರು ಮಹಾಂತೇಶ್, ನಟ ಕೆಲವತ್ತಿ ಸೋಮಶೇಖರ್, ಗಾಯಕ ಗ್ಯಾರಂಟಿ ರಾಮಣ್ಣ, ಕೃಷ್ಣ ಪಾತ್ರದಾರಿ ದೇವರಾಜ್ ಗೊರೂರು, ಸಿಗರನಹಳ್ಳಿ ಚಂದ್ರಶೇಖರ್, ಮೊದಲಾದವರು ಇದ್ದರು. ವಿಧುರ ಪಾತ್ರದಾರಿ ಸುನೀಲ್ ಆಡುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸೂತ್ರಧಾರಿ ರಾಣಿಚರಾಶ್ರೀ ಪ್ರಾರ್ಥಿಸಿದರು.