ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು. ಬಾಂಗ್ಲಾದಲ್ಲಿ ಬಂಧಿಸಿರುವ ಇಸ್ಕಾನ್‌ನ ಚಿನ್ಮೋಯ್ ಕೃಷ್ಣದಾಸ್ ಪ್ರಭು ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಗ್ರಹಿಸಿದರು.ಚಿನ್ಮೋಯ್ ಕೃಷ್ಣದಾಸ್ ಪ್ರಭು ಅವರ ಬಂಧನ ಖಂಡಿಸಿ, ಅವರ ಬಿಡುಗಡೆ, ಹಿಂದುಗಳ ರಕ್ಷಣೆಗೆ ಆಗ್ರಹಿಸಿ ವಿಶ್ವಹಿಂದು ಪರಿಷತ್, ಬಜರಂಗದಳ ಮಂಗಳೂರು ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಪಾಕಿಸ್ತಾನದಿಂದ ಸ್ವತಂತ್ರ ಬಾಂಗ್ಲಾದೇಶ ರಚನೆಗೆ ಭಾರತ ಸರ್ಕಾರ ಪ್ರಮುಖ ಕಾರಣವಾಗಿದೆ. ಭಾರತೀಯ ಸೈನಿಕರು ಯಾವುದೇ ಪ್ರಾಣ ಹಾನಿ ಉಂಟುಮಾಡದೇ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದರು. ಆ ಸಂದರ್ಭ ಶೇ.೩೭ರಷ್ಟಿದ್ದ ಹಿಂದುಗಳ ಸಂಖ್ಯೆ ಶೇ.೭.೫ಕ್ಕೆ ಇಳಿದಿದೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಒತ್ತಾಯಿಸಿದರು.ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಜಗತ್ತಿನಲ್ಲಿ ಇಸ್ಲಾಂ ಮತಾಂಧರಿಗೆ ಅಧಿಕಾರ ದೊರೆತರೆ ಏನಾಗಬಹುದು ಎಂಬುದಕ್ಕೆ ಬಾಂಗ್ಲಾದೇಶ ಉದಾಹರಣೆಯಾಗಿದೆ. ಬಾಂಗ್ಲಾ ಆಡಳಿತ ಇಸ್ಲಾಂ ಜಿಹಾದಿ ಶಕ್ತಿಗಳ ಕೈಯಲ್ಲಿದೆ. ಮೀಸಲಾತಿ ನೆಪದಲ್ಲಿ ಆರಂಭಗೊಂಡ ಗಲಭೆ ಬಳಿಕ ಹಿಂದುಗಳ ಮೇಲೆ ದೌರ್ಜನ್ಯಕ್ಕೆ ತಿರುಗಿದೆ. ಅಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡಲಾಗುತ್ತಿದೆ. ಹಿಂದುಗಳ ಮೇಲಿನ ದೌರ್ಜನ್ಯ ತಕ್ಷಣ ನಿಲ್ಲಬೇಕು ಎಂದು ಆಗ್ರಹಿಸಿದರು.ಇಸ್ಕಾನ್ ಕುಳಾಯಿಯ ಸಚ್ಚಿದಾನಂದ ಅದ್ವೈತ ದಾಸ ಮಾತನಾಡಿದರು.ಮಂಗಳೂರು ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಿವ ಜ್ಞಾನಮಹಿ ಸರಸ್ವತಿ, ಕುಡುಪು ಕಟ್ಟೆ ಇಸ್ಕಾನ್‌ನ ಪ್ರೇಮ ಭಕ್ತಿ ಪ್ರಭು, ವಿಹಿಂಪ ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಪ್ರೇಮಾನಂದ ಶೆಟ್ಟಿ, ಗಣೇಶ್ ಪೊದುವಾಳ್, ಶಕೀಲಾ ಕಾವ ಭಾಗವಹಿಸಿದ್ದರು.ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಮುದಾಯ ಬಾಯಿಗೆ ಬೀಗ ಹಾಕಿ ಕುಳಿತಿದೆ. ಬಾಂಗ್ಲಾ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು. ಈ ಬಗ್ಗೆ ಆಗ್ರಹಿಸಿ ಮುಂದಿನ ವಾರ ಎಲ್ಲ ಹಿಂದು ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಲಾಗುವುದು. ಲಕ್ಷಾಂತರ ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶರಣ್ ಪಂಪ್‌ವೆಲ್ ಹೇಳಿದರು.