ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಮುಂದಿನ ದಿನಗಳಲ್ಲಿ ಎರಡು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಠಾನದಲ್ಲಿ ಪರಸ್ಪರ ಸಹಾಯ, ಸಹಕಾರದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಲಿ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಆಶಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂದಿನ ದಿನಗಳಲ್ಲಿ ಎರಡು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಠಾನದಲ್ಲಿ ಪರಸ್ಪರ ಸಹಾಯ, ಸಹಕಾರದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಲಿ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಆಶಿಸಿದರು.ನಗರದ ಅಕ್ಕಮಹಾದೇವಿ ಮಹಿಳಾ ವಿವಿಗೆ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ ಭೇಟಿ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಠಾನ ಕುರಿತು ನಡೆದ ವಿಸ್ತೃತ ಚರ್ಚೆ ವೇಳೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಕವಾಗಿದೆ. ಮುಂಬರುವ ದಿನಗಳಲ್ಲಿ ಕಲಬುರ್ಗಿ ವಿವಿ ಜೊತೆ ಮಹಿಳಾ ವಿವಿ ಸಹಕಾರದಿಂದ ಕೆಲಸ ಮಾಡಲಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಒಂದಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಲಬುರ್ಗಿಯ ಕೇಂದ್ರೀಯ ವಿವಿಯ ಮಟ್ಟದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನ್ವಯ ಕೈಕೊಂಡಿರುವ ಕ್ರಮಗಳು, ಅನುಸರಿಸುತ್ತಿರುವ ಬೆಸ್ಟ್ ಪ್ರ್ಯಾಕ್ಟೀಸ್‌ಗಳು, ಎದುರಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ಪ್ರಾಧ್ಯಾಪಕರ ತಂಡ ಪಿಪಿಟಿ ಮೂಲಕ ತಿಳಿಸಿದರು.ಈ ತಂಡ ಸಭೆಯ ನಂತರ ಮಹಿಳಾ ವಿವಿಯ ಜ್ಞಾನವಾಹಿನಿ ಮೀಡಿಯಾ ಸ್ಟುಡಿಯೋಗೆ ಭೇಟಿ ನೀಡಿ ಅಲ್ಲಿಯ ಸೌಲಭ್ಯಗಳ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಸ್ಟುಡಿಯೋ ಕಾರ್ಯಚಟುವಟಿಕೆಗಳ ಬಗೆಗೆ ವಿವರಿಸಿದರು.ಈ ವೇಳೆ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕಲಬುರ್ಗಿಯ ಕೇಂದ್ರೀಯ ವಿವಿಯ ಪ್ರಾಧ್ಯಾಪಕರ ತಂಡದಲ್ಲಿ ಪ್ರೊ.ಆರ್.ಎಂ.ಚನ್ನವೀರ, ಪ್ರೊ.ಜಿ.ಆರ್.ಅಂಗಡಿ, ಡಾ.ರವಿ.ಜೆ.ಕೆ., ಡಾ.ಎನ್.ಸಂದೀಪ್, ಡಾ.ಬಾಬು.ಎನ್ ಮತ್ತು ಡಾ.ಪ್ರಕಾಶ್ ಬಾಳಿಕಾಯಿ, ಐಕ್ಯುಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ, ಎನ್‌ಇಪಿ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಇದ್ದರು.