ಕುಡಿವ ನೀರು, ಮೇವಿನ ವಾಸ್ತವ ಸ್ಥಿತಿಯ ಮಾಹಿತಿ ಸಂಗ್ರಹಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ

| Published : Feb 15 2024, 01:31 AM IST

ಕುಡಿವ ನೀರು, ಮೇವಿನ ವಾಸ್ತವ ಸ್ಥಿತಿಯ ಮಾಹಿತಿ ಸಂಗ್ರಹಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಬೇಸಿಗೆಯ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವಾಸ್ತವ ಸ್ಥಿತಿಗತಿಯ ಬಗ್ಗೆ ವರದಿ ಪಡೆಯಬೇಕು.

ವಿಡಿಯೋ ಸಂವಾದ ಸಭೆ

ಕನ್ನಡಪ್ರಭ ವಾರ್ತೆ ಹಾವೇರಿ

ಪ್ರಸ್ತುತ ಬೇಸಿಗೆಯ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವಾಸ್ತವ ಸ್ಥಿತಿಗತಿಯ ಬಗ್ಗೆ ವರದಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.

ಜಿಲ್ಲೆಯ ಬರ ಪರಿಸ್ಥಿತಿ ಕುರಿತಂತೆ ಬುಧವಾರ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಬೇಸಿಗೆ ಸಮಯದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ತಳಹಂತದಿಂದಲೇ ಸರ್ವೇ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಸಿರು ಮೇವು ಬೆಳೆಯಲು ರೈತರಿಗೆ ವಿತರಿಸಲಾದ ಮೇವಿನ ಬೀಜದ ಕಿಟ್ ಸರಿಯಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ, ಎಲ್ಲೆಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಹುದು ಎಂಬುದನ್ನು ಗುರುತಿಸಿ ಅಗತ್ಯ ಕ್ರಮವಹಿಸಿ. ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಮಾಹಿತಿ ನೀಡಿ, ಜಿಲ್ಲೆಯ ೧೫೫ ಗ್ರಾಪಂಗಳ ೩೦೯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾಗಿದೆ. ಈಗಾಗಲೇ ೪೮ ಗ್ರಾಮಗಳಿಗೆ ೯೦ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗಿದೆ. ಎಂಟು ಸ್ಥಳೀಯ ಸಂಸ್ಥೆಗಳ ಪೈಕಿ ೫೪ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾಗಿದೆ. ಈಗಾಗಲೇ ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಹರಿಹರ ಗಡಿಭಾಗಕ್ಕೆ ನೀರು ತಲುಪಿದೆ. ಒಂದೆರಡು ದಿನದಲ್ಲಿ ಹಾವೇರಿಗೆ ತಲುಪಬಹುದು. ಕುಡಿಯುವ ನೀರಿನ್ನು ಅಗತ್ಯ ದಾಸ್ತಾನು ಮಾಡಿಕೊಳ್ಳಲು ಅನುಕೂಲವಾಗಲಿದೆ. ವಿಶೇಷವಾಗಿ ನಗರ ಪ್ರದೇಶಗಳು ನದಿ ಮೂಲಗಳಿಂದ ಅವಲಂಬಿತವಾಗಿರುವುದಿಂದ ಹಾವೇರಿ ಮತ್ತು ಗುತ್ತಲ ನಗರ ಪ್ರದೇಶಗಳಿಗೆ ನದಿ ನೀರು ಪೂರೈಕೆಗೆ ತೊಂದರೆಯಾಗಿದೆ ಎಂದು ಮಾಹಿತಿ ನೀಡಿದರು.

ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತಂತೆ ಮಾಹಿತಿ ನೀಡಿದ ಅವರು, ಮುಂಬರುವ ೪೭ ವಾರಗಳಿಗೆ ಸಾಕಾಗುವಷ್ಟು ೭.೫೫ ಲಕ್ಷ ಟನ್ ಮೇವು ದಾಸ್ತಾನು ಲಭ್ಯವಿದೆ. ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ ಹಸಿರು ಮೇವು ಬೆಳೆಯಲು ೧೦,೫೨೮ ಮೇವು ಬೆಳೆ ಬೀಜದ ಕಿಟ್ ವಿತರಣೆ ಮಾಡಲಾಗಿದೆ. ಹಾಗಾಗಿ ಮೇವಿನ ದಾಸ್ತಾನು ಕುರಿತಂತೆ ಪುನರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬರಪರಿಹಾರ ಕುರಿತಂತೆ ವಿವರಿಸಿದ ಅವರು, ಪ್ರಸಕ್ತ ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನ ಬರಗಾಲ ಪರಿಹಾರವಾಗಿ ಪ್ರತಿ ರೈತರಿಗೆ ₹೨ ಸಾವಿರದಂತೆ ಜಿಲ್ಲೆಯ ೧,೯೭,೭೨೯ ರೈತರ ಖಾತೆಗೆ ರು.೩೭,೫೯ ಕೋಟಿ ಮೊತ್ತ ಜಮೆ ಮಾಡಲಾಗಿದೆ ಎಂದು ವಿವರಿಸಿದರು.

ತ್ವರಿತ ವಿಲೇಗೆ ಸೂಚನೆ:

ಕಂದಾಯ ಪ್ರಕರಣಗಳ ತ್ವರಿತ ವಿಲೇ ಮಾಡುವುದು, ಆರ್‌ಟಿಸಿ ಮುಟೇಷನ್ ಹಾಗೂ ಪಹಣಿಗಳ ತಿದ್ದುಪಡಿ ಪ್ರಕರಣಗಳು ಹಾಗೂ ಸರ್ವೇ ಪ್ರಕರಣಗಳನ್ನು ನಿಗದಿತ ಅವಧಿಯೊಳಗೆ ವಿಲೇಗೊಳಿಸಲು ಆಯಾ ತಾಲೂಕಾ ತಹಸೀಲ್ದಾರಗಳಿಗೆ, ಭೂಮಾಪನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರಿ ಅಧಿಕಾರಿ, ನೌಕರರು ಹಾಗೂ ಹೊರಗುತ್ತಿಗೆ ನೌಕರರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಎಸ್.ಬಿ.ಐ. ಜನರಲ್ ಇನ್ಸೂರೆನ್ಸ್ ಯೋಜನೆ ವ್ಯಾಪ್ತಿಗೆ ನೋಂದಾಯಿಸಿಕೊಳ್ಳಬೇಕು. ಆಯಾ ಇಲಾಖೆಯ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಬೇಕು. ಜಿಲ್ಲೆಯಲ್ಲಿ ಒಟ್ಟಾರೆ ೫೧ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಕಚೇರಿಯಲ್ಲಿ ೫೪೧ ಹಾಗೂ ತಾಲೂಕಾ ಮಟ್ಟದ ಕಚೇರಿಗಳಲ್ಲಿ ೧೩,೩೭೬ ತಾಲೂಕಾ ಮಟ್ಟದ ಅಧಿಕಾರಿ, ಸಿಬ್ಬಂದಿ ಒಳಗೊಂಡಂತೆ ೧೩,೯೧೭ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ೫,೧೩೫ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ ೩,೭೫೯ ಹಾಗೂ ಎಸ್.ಬಿ.ಐ. ಜನರಲ್ ಇನ್ಸೂರೆನ್ಸ್ ಯೋಜನೆಯಡಿ ೧,೮೯೭ ಜನರು ನೋಂದಾಯಿಸಿಕೊಂಡಿದ್ದಾರೆ. ಉಳಿದವರ ನೋಂದಾವಣೆಗೆ ಸಲಹೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ಎಲ್ಲ ತಾಲೂಕು ತಹಸೀಲ್ದಾರರು ಭಾಗವಹಿಸಿದ್ದರು.