ಸಾರಾಂಶ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದ ಜನತಾ ಪ್ಲಾಟ್ ಹಾಗೂ ಆನಂದ ನಗರ ಸೇರಿದಂತೆ ಗ್ರಾಮದ ವಿವಿಧ ಓಣಿಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಗ್ರಾಮದ ಜನರು ಗ್ರಾಪಂ ಎದುರು ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ನೀರು ಪೂರೈಸಲು ೫-೬ ಬೋರ್‌ವೆಲ್‌ಗಳು ಹಾಗೂ ಹೊಳೆ ನೀರಿನ ಪೂರೈಕೆ ಇದ್ದರೂ ಜನತಾ ಪ್ಲಾಟ್ ಹಾಗೂ ಆನಂದ ನಗರಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಗ್ರಾಮದ ತುಂಬ ನೀರಿನ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೂ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪೋಲಾದ ನೀರಿನಲ್ಲಿ ೨-೩ ಎಕರೆ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿದೆ. ಒಡೆದ ಪೈಪ್‌ನಲ್ಲಿ ಕೊಳಚೆ ನೀರು ಸೇರಿ ಗ್ರಾಮದ ಜನರಿಗೆ ಅನಾರೋಗ್ಯ ಉಂಟಾದರೆ ಗ್ರಾಮ ಪಂಚಾಯಿತಿಯವರೇ ಹೊಣೆಗಾರರು ಎಂದು ಗ್ರಾಮಸ್ಥರು ಗ್ರಾಪಂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂನಲ್ಲಿ ಸುಮಾರು ೨ ವರ್ಷದಿಂದ ಗ್ರಾಮಸಭೆ ನಡೆಸಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿನ ಕಳಪೆ ಕಾಮಗಾರಿಗಳು ಹಾಗೂ ಭ್ರಷ್ಟಾಚಾರದ ಕುರಿತು ತನಿಖೆಗೆ ಒತ್ತಾಯಿಸಿ ಈ ಹಿಂದೆ ಜಿಲ್ಲಾಧಿಕಾರಿ, ಸಿಇಒ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಜನರು ಸಮಸ್ಯೆ ಹೊತ್ತು ಪಂಚಾಯಿತಿಗೆ ಬಂದರೆ ಪಿಡಿಒ ಇರುವುದಿಲ್ಲ. ಕರೆ ಮಾಡಿದರೆ ಪೋನ್ ಸಂಪರ್ಕಕ್ಕೆ ಸಿಗುವುದಿಲ್ಲ. ೨-೩ ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಬಳಿಕ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಗ್ರಾಮಸ್ಥರ ಸಮಸ್ಯೆ ಆಲಿಸಿ, ಜನರಿಗೆ ಅಗತ್ಯವಾದ ನೀರು ಪೂರೈಸುವುದು ಗ್ರಾಪಂ ಆದ್ಯ ಕರ್ತವ್ಯ. ಬೇರೆ ಯಾವುದೇ ಸಮಸ್ಯೆಗಳಿದ್ದರೂ ಮೊದಲು ನೀರಿನ ಸಮಸ್ಯೆ ಸರಿಪಡಿಸಬೇಕು. ಸ್ವಲ್ಪ ಕಾಲವಕಾಶ ನೀಡಿ, ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ. ನೀರು ಪೋಲಾಗುತ್ತಿರುವುದು, ಚರಂಡಿಯಲ್ಲಿ ಪೈಪ್ ಒಡೆದಿರುವುದನ್ನು ಸರಿಪಡಿಸಲು ಪಿಡಿಒ ಅವರಿಗೆ ಸೂಚಿಸುತ್ತೇನೆ. ಅಲ್ಲದೆ ಪಂಚಾಯಿತಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ನಿಟ್ಟಿನಲ್ಲಿ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಜಾಕಿರಹುಸೇನ ನದಾಫ್, ಬದ್ದೆಪ್ಪ ನಾಯಕ, ಶರಣಪ್ಪ ಬೆನಕನವರಿ, ಶಿವು ಶಿರೋಳ, ಅಳೆಬಸಪ್ಪ ಬೆನಕನವರಿ, ಹನುಮಂತ ರಾಠೋಡ, ಸೋಮಪ್ಪ ಬೆನಕನವರಿ, ಜಟಿಂಗರಾಯ ದರೆಣ್ಣವರ, ಮಲ್ಲಪ್ಪ ಕೊಪ್ಪದ, ಶರಣಪ್ಪ ಹೊಸಳ್ಳಿ, ವಸಂತ ಜಾವೂರ, ಮಲ್ಲಪ್ಪ ಮಾರನಬಸರಿ, ಮುನ್ನಾಭಿ ನದಾಫ್, ಜಾಲವ್ವ ಚವ್ಹಾಣ, ಅನಸವ್ವ ಹಿರೇಮಠ, ಅನಸವ್ವ ಲಮಾಣಿ, ರತ್ನವ್ವ ಲಮಾಣಿ, ಸರೋಜಾ ಚವ್ಹಾಣ, ಶಾಂತವ್ವ ರಾಠೋಡ, ಅನಸವ್ವ ಹಡಪದ ಇದ್ದರು.