ಸಾರಾಂಶ
ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ಹೇಳಿಕೆ । ಬ್ಯಾಂಕುಗಳ ಇ-ಟೆಂಡರ್‌ನಿಂದ ಹರಾಜು ಪ್ರಕ್ರಿಯೆಗೆ ಖಂಡನೆಕನ್ನಡಪ್ರಭ ವಾರ್ತೆ ಹಾಸನ
ರೈತರಿಂದ ಸಾಲ ವಸೂಲಾತಿಗಾಗಿ ಬ್ಯಾಂಕ್‌ಗಳು ಇ-ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ಮಾಡುತ್ತಿರುವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತರಿಗೆ, ಸಾರ್ವಜನಿಕರಿಗೆ ಸಿಗುತ್ತಿರುವ ಸವಲತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಬ್ಯಾಂಕ್‌ಗಳ ವಿರುದ್ಧ ಫೆ.೨೦ ರಂದು ಮಂಗಳವಾರ ಬೆಳಿಗ್ಗೆ ೧೧ ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿನಾರಾಯಣಸ್ವಾಮಿ ಮತ್ತು ರಾಜ್ಯ ಉಪಾಧ್ಯಕ್ಷ ಮೂರ್ತಿ ಕಣಗಾಲ್ ತಿಳಿಸಿದರು.ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಅಂದು ಬೆಳಿಗ್ಗೆ ೧೧ಕ್ಕೆ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಹೊರಟು ಜಿಲ್ಲಾದಿಕಾರಿ ಕಚೇರಿ ಆವರಣಕ್ಕೆ ಬಂದು ಪ್ರತಿಭಟಿಸಲಾಗುವುದು. ರೈತ ದೇಶದ ಬೆನ್ನೆಲುಬು, ರೈತ ಮಣ್ಣಿನ ಮಗ, ಈ ಭೂಮಿಯಲ್ಲಿ ಹಗಲು, ರಾತ್ರಿ ದುಡಿಯುವ ರೈತ ಎಲ್ಲರಿಗೂ ಅನ್ನ ಕೊಡುತ್ತಾನೆ. ಇಂದಿನ ವಾಸ್ತವ ಪರಿಸ್ಥಿತಿ ಗಮನಿಸಿದಾಗ ರೈತನ ಪರಿಸ್ಥಿತಿ ಶೋಚನೀಯ. ಎಲ್ಲಾ ಅಧಿಕಾರಿಗಳು, ಬ್ಯಾಂಕ್‌ಗಳು ರೈತರ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಹಾಕಿ ಇ- ಕಾಯ್ದೆ ಮೂಲಕ ರೈತರ ಜಮೀನಿನನ್ನು ಹರಾಜು ಮಾಡಿ ಈ ನೆಲದ ರೈತರ ಆತ್ಮಹತ್ಯೆಗೆ ಕಾರಣರಾಗುತ್ತಿದ್ದಾರೆ ಎಂದು ಕಿಡಿಕಾರಿದರು.
‘ರೈತರ ಬದುಕಿಗೆ ಬಾಳು ಕೊಡುವವರು ಯಾರು? ರೈತ ಯೋಚಿಸಬೇಕು, ರೈತ ಸಂಘಟನೆ, ನಿಮ್ಮ ಬದುಕು ಆಗಬೇಕು, ಸಾಲಮನ್ನಾ, ಬಡ್ಡಿಮನ್ನಾ ಎಂಬ ಸರ್ಕಾರಗಳ ಘೋಷಣೆ, ನೀರಿನ ಮೇಲಿನ ಗುಳ್ಳೆಯಾಗಿದೆ. ಬ್ಯಾಂಕ್‌ನ ಅಧಿಕಾರಿಗಳು, ರೈತನ ಬಾಳಿನ ಬಗ್ಗೆ ಆಟ ಆಡುತ್ತಿದ್ದಾರೆ. ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಡ್ಡಿ, ಚಕ್ರಬಡ್ಡಿ ಹಾಕಿ ರೈತನ ನೆತ್ತರು ಕುಡಿಯುತ್ತಿದ್ದಾರೆ. ಬೆಲೆ ಬಾಳುವ ರೈತರ ಜಮೀನುಗಳನ್ನು ಇ-ಟೆಂಡರ್ ಮೂಲಕ ರೈತನಿಗೆ ಗೊತ್ತಾಗದಂತೆ ಕಡಿಮೆ ಬೆಲೆಗೆ ಹಾರಾಜು ಮಾಡುತ್ತಿದ್ದಾರೆ. ಇ-ಟೆಂಡರ್ ಹರಾಜು ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು, ಇದರಿಂದ ರೈತ ನೊಂದು ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗಲು ಬ್ಯಾಂಕ್, ಸರ್ಕಾರಗಳೇ ನೇರ ಕಾರಣವಾಗಿವೆ’ ಎಂದು ದೂರಿದರು.ವೃದ್ಧಾಪ್ಯ ವೇತನ, ಹಾಲಿನ ಹಣ, ನರೇಗಾ ಯೋಜನೆಯ ಹಣ ಹಾಗೂ ವಿಧವಾ ವೇತನದ ಹಣ ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಮುಟ್ಟುಗೋಲು ಹಾಕಿ ರೈತರಿಗೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬ್ಯಾಂಕ್‌ಗಳ ಸಾಲ ತೀರಿಸಲು ನಿರ್ಧರಿಸಿರುತ್ತಾರೆ. ಆದರೆ ಕಾಡಾನೆಗಳ ವಿಪರೀತ ಹಾವಳಿಯಿಂದ ರೈತನು ಬೆಳೆದ ಬೆಳೆಯನ್ನು ಪಡೆಯಲು ಆಗದೆ ಪ್ರಕೃತಿಯ ಅವಾಂತರದಿಂದ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳು ಒಣಗಿ ಹೋಗಿ, ವಿಪರೀತ ಮಳೆಯಾಗಿ ಬೆಳೆದ ಬೆಳೆಗಳು ರೈತನ ಕಣ್ಣ ಮುಂದೆಯೇ ಹಾಳಾಗಿ ರೈತ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿದ್ದಾನೆ, ಈ ಎಲ್ಲಾ ಅಂಶಗಳನ್ನು ಮನಗಂಡು ರೈತರ ಬೆಳೆ ಸಾಲ, ಟ್ರ್ಯಾಕ್ಟರ್, ಟಿಲ್ಲರ್, ರೈತನು ಉಪಯೋಗಿಸಲು ಬಳಸುವ ಉಪಕರಣಗಳ ಮೇಲಿನ ಸಾಲವನ್ನು ಒಂದು ಬಾರಿ ಮುಕ್ತ ಮಾಡಬೇಕು ಎಂದು ಒತ್ತಾಯಿಸಿದರು.ಅಧಿಕಾರಿಗಳು ಟ್ರ್ಯಾಕ್ಟರ್ ದಂಧೆಯಲ್ಲೂ ರೈತರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ) ಹಾಗೂ ಎಲ್ಲಾ ಬ್ಯಾಂಕ್‌ಗಳು ರೈತರ ಎಲ್ಲಾ ಜಮೀನಿನ ಸಾಲಗಳನ್ನು ರದ್ದುಮಾಡಿ ರೈತರಿಗೆ ನ್ಯಾಯ ಕೊಡಿಸಿ, ಈಗಾಗಲೆ ಹಾರಾಜು ಮಾಡಿರುವ ರೈತರ ಜಮೀನನ್ನು ಹಿಂದಿರುಗಿಸಿ ಕೊಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತಿದ್ದೇವೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ತಾಲುಕು ಅಧ್ಯಕ್ಷ ಮಂಜುನಾಥ್, ಶಿವಣ್ಣ ಪಾರ್ವತಮ್ಮ ಇದ್ದರು.ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿನಾರಾಯಣಸ್ವಾಮಿ ಮತ್ತು ರಾಜ್ಯ ಉಪಾಧ್ಯಕ್ಷ ಮೂರ್ತಿ ಕಣಗಾಲ್ ಮೂರ್ತಿ.