ಸಾರಾಂಶ
ಕಾಲಗರ್ಭದಲ್ಲಿ ಆಗಿಹೋದ ಮಹತ್ವದ ಮಾಹಿತಿಗಳು ಇಂದಿನ ತಲೆಮಾರಿಗೆ ದಾಖಲೆಯಾಗಿ ದೊರೆಯುತ್ತಿತ್ತು ಎಂದು ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಜಾನಪದ ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಜಾನಪದ ಕಲಾವಿದ ಉಬ್ಬೂರು ರಾಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪ್ರಾಚೀನ ಇತಿಹಾಸಕಾರರ ಪ್ರಕಾರ ಸಿಂಧೂ ನದಿಯ ಸಮಕಾಲೀನ ನಾಗರಿಕತೆ ಹಠಾತ್ತನೆ ಇಲ್ಲವಾಗುವುದರ ಹಿಂದೆ ಎಂತಹುದೋ ಪರಿವರ್ತನೆ ನಡೆದಿರಬೇಕು.
ಆಯಾಕಾಲದ ವಸ್ತುಗಳ ಸಂಗ್ರಹ ಕ್ರಮಬದ್ಧವಾಗಿ ನಡೆದು, ಅವುಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರೆ ಕಾಲಗರ್ಭದಲ್ಲಿ ಆಗಿಹೋದ ಮಹತ್ವದ ಮಾಹಿತಿಗಳು ಇಂದಿನ ತಲೆಮಾರಿಗೆ ದಾಖಲೆಯಾಗಿ ದೊರೆಯುತ್ತಿತ್ತು ಎಂದು ಪಟ್ಟಣದಲ್ಲಿ ನಡೆದ ಜಾನಪದ ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಜಾನಪದ ಕಲಾವಿದ ಉಬ್ಬೂರು ರಾಮಣ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಮತ್ತು ತೀರ್ಥಹಳ್ಳಿ ತಾಲೂಕುಗಳ ಜಾನಪದ ಪರಿಷತ್ತು ಘಟಕಗಳ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಗೋಪಾಲಗೌಡರಂಗಮಂದಿರದಲ್ಲಿ ನಡೆದ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ಸ್ಥಾನದಿಂದ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಂಡಿರುವ ಭಾರತದಲ್ಲಿ ಈ ನಾಡಿನ ಸಂಪತ್ತಾಗಿರುವ ಜಾನಪದ ವಸ್ತು ಸಂಗ್ರಹಾಲಯದ ಪ್ರಸ್ತುತತೆ ಎದ್ದುಕಾಣುತ್ತದೆ. ಇದರಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕವಾಗಿಯೂ ಮುಂದುವರಿಯುವುದಲ್ಲದೇ, ಜನಪದ ಸಾಧನಗಳ ಮೂಲಕ ಭೌತಿಕಜ್ಞಾನವನ್ನು ವಿಶ್ವಕ್ಕೇ ಸಾರಬಹುದಾಗಿದೆ.
ಪ್ರತಿಯೊಂದು ವಸ್ತುವೂ ಬೆಳಕಿಂಡಿಗಳಾಗಿದ್ದು, ಅನೇಕ ಸಂಶೋಧನೆಗಳಿಗೆ ವಸ್ತು ಸಂಗ್ರಹಾಲಯದ ಆಕರಗಳ ಮೂಲಕ ಹೊಸ ಬೆಳಕು ಬೀರಿರುವುದನ್ನು ಗಮನಿಸಬಹುದಾಗಿದೆ. ಮುಂದಿನ ತಲೆಮಾರಿನ ದೃಷ್ಟಿಯಿಂದ ಪ್ರತಿಯೊಂದು ಪ್ರಾಚೀನ ವಸ್ತುಗಳನ್ನು ಜತನದಿಂದ ಕಾಪಾಡಬೇಕು ಎಂದರು.
ಸಮ್ಮೇಳನ ಉದ್ಘಾಟಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ ಮಾತಿದೆ. ಗಾದೆಗಳು ಕೂಡಾ ಜನಪದೀಯರಿಂದಲೇ ಸೃಷ್ಟಿಯಾಗಿರೋದು.
ಗ್ರಾಮೀಣರಿಂದ ಉಳಿದಿರುವ ಜಾನಪದ ಸಾಹಿತ್ಯ ಎಲ್ಲಿಂದ ಮತ್ತು ಯಾರಿಂದ ಆರಂಭವಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಮ್ಮೆದುರಿಗೆ ಇರುವ ಎಲ್ಲಾ ವಸ್ತುಗಳು ಜನಪದದ ಅಸ್ತಿತ್ವವನ್ನು ದೃಢೀಕರಿಸುತ್ತವೆ ಎಂದರು.
"ತೀರ್ಥಹಳ್ಳಿ ಸುತ್ತಮುತ್ತಲಿನ ಜಾನಪದ " ವಿಷಯ ಕುರಿತು ನಡೆದ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಡಾ. ಜೆ.ಕೆ.ರಮೇಶ್ ವಹಿಸಿದ್ದರು. ಜಾನಪದ ತಜ್ಞ ಶಿವಾನಂದ ಕರ್ಕಿ ಹಾಗೂ ಚಿಂತಕ ನೆಂಪೆ ದೇವರಾಜ್ ವಿಷಯ ಮಂಡನೆ ಮಾಡಿದರು.
ಸಮ್ಮೇಳನದಲ್ಲಿ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷೆ ಲೀಲಾವತಿ ಜಯಶೀಲ ಸಂಗ್ರಹಿಸಿದ "ಗಾದೆ ಮಾತುಗಳ ಸಂಗ್ರಹ " ಪುಸ್ತಕವನ್ನು ಎನ್.ಬಿ. ದೇವಪ್ಪ ಬಿಡುಗಡೆಗೊಳಿಸಿದರು.
ಜಾನಪದ ಕಲಾ ಪ್ರದರ್ಶನದಲ್ಲಿ ಏಕತಾಳ ಕಂಸಾಳೆ, ಬೀಸುವ ರೂಪ ಮತ್ತು ಹಾಡು, ಅಂಟಿಕೆ-ಪಂಟಿಕೆ, ಹೋಳಿ ಕುಣಿತ, ಲಂಬಾಣಿ ಕುಣಿತ, ಚೌಪದ, ಗುಡ್ಡಗಾಡು ನೃತ್ಯ, ದಾಸಯ್ಯ ಪದ, ಡೊಳ್ಳುಕುಣಿತ, ಚೆಂಡೆ, ಮಹಿಳಾ ಡೊಳ್ಳು, ಜಾನಪದ ಹಾಡು, ಜನಪದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಸನ್ಮಾನ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ, ತೆಂಕತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್, ಸೋಬಾನೆ ಪದ ಕಲಾವಿದೆ ಕಮಲಮ್ಮ, ಸಂಚಾರಿದೇವಿ ಪಾತ್ರಧಾರಿ ಯಲ್ಲಪ್ಪ ಭಾಗವತ, ಅಮಟಿಗೆ- ಪಂಟಿಗೆ ಕಲಾವಿದ ಗೋವಿಂದಸ್ವಾಮಿ ಅವರನ್ನು ಗೌರವಿಸಲಾಯಿತು.
ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷೆ ಲೀಲಾವತಿ ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಎಚ್.ಎನ್.ಈಶ್ವರ್ ಮುಂತಾದವರು ಇದ್ದರು.
ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷೆ ಲೀಲಾವತಿ ಜಯಶೀಲ ಸಂಗ್ರಹಿಸಿದ ಗಾದೆ ಮಾತುಗಳ ಸಂಗ್ರಹ ಪುಸ್ತಕವನ್ನು ಎನ್.ಬಿ. ದೇವಪ್ಪ ಬಿಡುಗಡೆಗೊಳಿಸಿದರು.