ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ದೊಡ್ಡದು: ಡಾ.ತಳ್ಳೊಳ್ಳಿ

| Published : Feb 28 2024, 02:33 AM IST

ಸಾರಾಂಶ

ತಾಳಿಕೋಟೆ: ಆಧುನಿಕಕ ಭರಾಟೆಯಲ್ಲಿ ತಮ್ಮ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕಾಗಿ ಮಕ್ಕಳಿಗೆ ಕುರಕಲು ತಿನಿಸುಗಳನ್ನು ತಿನಿಸಿದರ ಫಲವಾಗಿ ಮಕ್ಕಳಲ್ಲಿಯೂ ಶುಗರ್, ಬಿಪಿ, ಹೃದಯಾಘಾತದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ತಾಳಿಕೋಟೆ ಭಾಗ್ಯವಂತಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞವೈದ್ಯ ಡಾ.ವಿರೇಶ ತಳ್ಳೊಳ್ಳಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ:

ಆಧುನಿಕಕ ಭರಾಟೆಯಲ್ಲಿ ತಮ್ಮ ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕಾಗಿ ಮಕ್ಕಳಿಗೆ ಕುರಕಲು ತಿನಿಸುಗಳನ್ನು ತಿನಿಸಿದರ ಫಲವಾಗಿ ಮಕ್ಕಳಲ್ಲಿಯೂ ಶುಗರ್, ಬಿಪಿ, ಹೃದಯಾಘಾತದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ತಾಳಿಕೋಟೆ ಭಾಗ್ಯವಂತಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞವೈದ್ಯ ಡಾ.ವಿರೇಶ ತಳ್ಳೊಳ್ಳಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ನಾವದಗಿ ಗ್ರಾಮದಲ್ಲಿ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ಮಠದ ರಾಜೇಂದ್ರ ಒಡೆಯರ ದೇವರ ಗುರುಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಕರಿದ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಿಸುವದು ಅಪಾಯಕಾರಿ. ಇದರಿಂದ ಮಕ್ಕಳಲ್ಲಿ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ದೊಡ್ಡವರು ಪಂಚರಂಗಿ, ಬಜಿ, ಪಾನಿಪುರಿ, ಗೋಬಿ ಮಂಚೂರಿ ತಿನ್ನುತ್ತಿರುವದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮನುಷ್ಯನು ದುಡ್ಡನ್ನು ಗಳಿಸಬಹುದು, ಆಸ್ತಿಯನ್ನು ಗಳಿಸಬಹುದು ಆದರೆ ಆರೋಗ್ಯವನ್ನು ಗಳಿಸಲಾಗದು. ನಿತ್ಯ ಬೆಳೆಯುವ ಪದಾರ್ಥಗಳಿಗೂ ಕ್ರೀಮಿನಾಶಕ ಸಿಂಪಡಿಸುತ್ತಾ ಬಂದಿದ್ದರಿಂದ ನಾವು ಎಷ್ಟೇ ತೊಳೆದು ಅಡಿಗೆ ಮಾಡಿದರು ವಿಷಕಾರಿ ಅಂಶ ದೇಹವನ್ನು ಸೇರುತ್ತಿದೆ. ಇತ್ತೀಚಿನ ದಿನಗಳಲ್ಲಿ 25 ರಿಂದ 30 ವರ್ಷಕ್ಕೆ ಯುವಕರಿಗೂ ಹೃದಯಾಘಾತ ಹೆಚ್ಚಾಗುತ್ತಿದೆ. ಬಿಪಿ ಮತ್ತು ಶುಗರ್ ಸಾಮಾನ್ಯವಾಗಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮುಖ್ಯವಾಗಿದ್ದು, ಆಹಾರದ ಕಡೆಗೆ ಹೆಚ್ಚಿನ ಕಾಳವಜಿ ವಹಿಸುವಂತೆ ಕಿವಿಮಾತು ಹೇಳಿದರು.ತಜ್ಞ ವೈದ್ಯ ಡಾ.ಎ.ಎ.ನಾಲಬಂದ ಮಾತನಾಡಿ, ಆರೋಗ್ಯವೆಂಬುದನ್ನು ಮೋಜಿನ ಆಟದಂತಾಗಿದೆ. ಯುವಕರು ಎಲ್ಲೆಂದರಲ್ಲಿ ಖರೀದ ಪದಾರ್ಥಗಳನ್ನು ತಿನ್ನುತ್ತಾ, ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಗಂಡಾಂತರವಿದ್ದಂತೆ. ಇದನ್ನು ಪಾಲಕರು ಅರ್ಥ ಮಾಡಿಕೊಂಡು ಮಕ್ಕಳ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಆರೋಗ್ಯ ಉತ್ತಮವಾಗಿರುವುದಲ್ಲದೇ, ಬಾಂಧವ್ಯ ಕೂಡ ಉಳಿಯುತ್ತದೆ ಎಂದರು.

ಇನ್ನೋರ್ವ ಹುಬ್ಬಳ್ಳಿ ಕೀಮ್ಸ್ ಹೃದ್ರೋಗ ತಜ್ಞ ಡಾ.ರಾಜಕುಮಾರ ಹಿರೇಮಠ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆದ ಸಾವು ನೋವುಗಳು ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬ ಅಹಂನ್ನು ದೂರ ಮಾಡಿದೆ. ಆರೋಗ್ಯದ ಮಹತ್ವವನ್ನು ತಿಳಿಸಿಕೊಟ್ಟಿದೆ. ಆರೋಗ್ಯ ಸಂಪತ್ತು ಇಂದು ಮನುಕುಲಕ್ಕೆ ಮುಖ್ಯವಾಗಿದೆ. ಗ್ರಾಮೀಣ ಜನತೆ ಕಷ್ಟದ ಬದುಕು ಸಾಗಿಸುತ್ತಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಅರಿವು ಇಲ್ಲ ಹೀಗಾಗಿ, ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯ ರಕ್ಷಣೆಯ ಮಹತ್ವವನ್ನು ತಿಳಿಸಿಕೊಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

ಹಿರಿಯ ವೈದ್ಯ ಡಾ.ವ್ಹಿ.ಎಸ್.ಕಾರ್ಚಿ ಮಾತನಾಡಿ, ಕಾಯಿಲೆಗಳ ಬಗ್ಗೆ ಅರಿವಿಲ್ಲದೇ ಜನ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳ ಮೂಲಕ ಜನರಲ್ಲಿ ಜಾಗೃತಿ ಬರುತ್ತಿದ್ದು, ಜನಸಮುದಾಯ ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು. ಮಕ್ಕಳು ಮೊಬೈಲ್ ಮೊರೆ ಹೋಗದಂತೆ ತಡೆಯಬೇಕು ಎಂದು ಎಚ್ಚರಿಕೆಯನ್ನ ನೀಡಿದರು.ಈ ವೇಳೆ ಹೃದಯ ರೋಗ, ಆಯುರ್ವೇದಿಕ ಚಿಕಿತ್ಸೆ, ಮಹಳಾ ಸಂಬಂಧಿತ ಖಾಯಿಲೆಗಳಿಗೆ ವಿಜಯಪುರ ಅನುಗೃಹ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ ಒಳಗೊಂಡು ಅನೇಕ ರೋಗಿಗಳನ್ನು ತಪಾಸಣೆ ಮಾಡಲಾಯಿತು. ಅಲ್ಲದೇ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನ ನೀಡಿದರು. ಗುತ್ತಿಗೆದಾರ ನವಲಿ ಹಿರೇಮಠ ಮಾತನಾಡಿದರು. ಕೊಡೇಕಲ್ಲ ದುರದುಂಡೆಶ್ವರ ಮಠದ ಶಿವಕುಮಾರ ಸ್ವಾಮಿಗಳು ಉದ್ಘಾಟಿಸಿದರು. ನಾವದಗಿ ಬೃಹನ್ಮಠದ ರಾಜೇಂದ್ರ ದೇವರು ಅಧ್ಯಕ್ಷತೆ ವಹಿಸಿದ್ದರು. ಡಾ.ಕರಬಸಯ್ಯ ಹಿರೇಮಠ, ಡಾ.ಸಂತೋಷ ಕೊಂಗಂಡಿ, ಡಾ.ಸುಮಂಗಲಾ ಹಿರೇಮಠ, ಡಾ.ಶಿವರಾಜ ಒಡೆಯರ ಹಿರೇಮಠ, ಡಾ.ವೇದಮೂರ್ತಿ ಹಿರೇಮಠ, ಡಾ.ಶ್ರೀದೇವಿ ಹಿರೇಮಠ, ಡಾ.ಆರೀಫ್ ಮನಿಯಾರ್, ಡಾ.ರುದ್ರಸ್ವಾಮಿ ಹಿರೇಮಠ, ಡಾ.ವಿಶ್ವೇಶ್ವರಯ್ಯ ಮಠ, ಡಾ.ರಾಜೇಶ್ವರಿ ವಣಕ್ಯಾಳ, ಡಾ.ಶಾಂತಾ ಇಬ್ರಾಹಿಂಪುರ, ಮುಖಂಡರಾದ ಬಸನಗೌಡ ವಣಕ್ಯಾಳ ಇದ್ದರು.

________