ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಪಂ ಇಒ ಯಶವಂತಕುಮಾರ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಕೆಎಸ್‌ಆರ್‌ಟಿಸಿ ಸವದತ್ತಿ ಘಟಕದ ಸಹಯೋಗದಲ್ಲಿ ಸವದತ್ತಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿಗಾಗಿ ಮತದಾರರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಯಾಣಿಕರಿಗೆ ಮತದಾನದ ಜಾಗೃತಿ ಮೂಡಿಸಲು ಈ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದು, ಬಸ್ ನಿಲ್ದಾಣದಲ್ಲಿರುವ ಎಲ್ಲ ಮತದಾರರು ಸಹಿ ಮಾಡುವ ಮೂಲಕ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಹಾಗೂ ಇತರರಿಗೂ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಮಧುಸೂದನ್ ಕುಲಕರ್ಣಿ ಸೆಲ್ಪಿ ಪಾಯಿಂಟ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಮತದಾರರಿಗೆ ಮತದಾನ ಜಾಗೃತಿ ಮೂಡಿಸಿದರು.ಬಿಇಒ ಮೋಹನ ದಂಡಿನ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಆರ್.ಎ. ಪಾಟೀಲ, ಬಸವರಾಜ ಅಯ್ಯನಗೌಡರ, ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರು, ದೀಪಕ ಜಾಧವ, ಸಿಡಿಪಿಒ ಸುನಿತಾ ಪಾಟೀಲ, ಮಲೀಕಜಾನ್ ಮೋಮಿನ್, ಬಸವರಾಜ ಹಂಕಪ್ಪನವರ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಪಂ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.