ಸಾರಾಂಶ
ಹನಿ ಹಾಗೂ ತುಂತುರು ಯೋಜನೆಯಲ್ಲಿ ಸಾಮೂಹಿಕ ಕೃಷಿ ಪದ್ಧತಿ ಬಹಳ ಮುಖ್ಯವಾಗಿದೆ. ಇದ್ದರಿಂದ ಮಾರುಕಟ್ಟೆ ಸೌಲಭ್ಯ, ರೈತರಿಗೆ ಬೆಳೆ ವಿಮೆ, ರೈತರ ಖಾತೆಗೆ ಲಾಭಾಂಶ ನೇರಾ ವರ್ಗಾವಣೆಯಾಗುವುದರ ಜತೆಗೆ ಹೆಚ್ಚಿನ ಅನುಕೂಲ ದೊರೆಯಲಿವೆ. ಸಾಮೂಹಿಕ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಗುಣಮಟ್ಟದ ಬೆಳೆಯನ್ನು ಬೆಳೆದು ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹನಿ ನೀರಾವರಿ ಯೋಜನೆ ಮೂಲಕ ಹಮ್ಮಿಕೊಂಡಿರುವ ಸಾಮೂಹಿಕ ಕೃಷಿ ಪದ್ಧತಿ ರೈತರಿಗೆ ವರದಾನವಾಗಿದೆ ಎಂದು ಜೈನ್ ಸಂಸ್ಥೆಯ ಹಿರಿಯ ಬೇಸಾಯ ತಜ್ಞ ಪಿ.ವಿ.ಜೋಷಿ ತಿಳಿಸಿದರು.ತಾಲೂಕಿನ ರಾವಣಿ, ಕ್ಯಾತನಹಳ್ಳಿ, ದೊಡ್ಡಬೂವಳ್ಳಿ ಮತ್ತು ಮಲ್ಲಿನಾಥಪುರ ಗ್ರಾಮಗಳಲ್ಲಿ ಬಹುನಿರೀಕ್ಷಿತ ಪೂರಿಗಾಲಿ ಸಂಪೂರ್ಣ ಸ್ವಯಂ ಚಾಲಿತ ಹನಿ ಮತ್ತು ತುಂತುರು ನೀರಾವರಿ ಯೋಜನೆಯಡಿ ಆಯೋಜಿಸಿದ ಸಾಮೂಹಿಕ ಕೃಷಿ ಪದ್ಧತಿ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮೂಹಿಕ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಗುಣಮಟ್ಟದ ಬೆಳೆಯನ್ನು ಬೆಳೆದು ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು ಎಂದರು.ಹನಿ ಹಾಗೂ ತುಂತುರು ಯೋಜನೆಯಲ್ಲಿ ಸಾಮೂಹಿಕ ಕೃಷಿ ಪದ್ಧತಿ ಬಹಳ ಮುಖ್ಯವಾಗಿದೆ. ಇದ್ದರಿಂದ ಮಾರುಕಟ್ಟೆ ಸೌಲಭ್ಯ, ರೈತರಿಗೆ ಬೆಳೆ ವಿಮೆ, ರೈತರ ಖಾತೆಗೆ ಲಾಭಾಂಶ ನೇರಾ ವರ್ಗಾವಣೆಯಾಗುವುದರ ಜತೆಗೆ ಹೆಚ್ಚಿನ ಅನುಕೂಲ ದೊರೆಯಲಿವೆ ಎಂದರು.
ಸಾಮೂಹಿಕ ಕೃಷಿ ಪದ್ಧತಿಯಿಂದ ಮಣ್ಣಿನ ಸಂರಕ್ಷಣೆ ಹಾಗೂ ಮಣ್ಣಿನ ಗುಣಮಟ್ಟ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವುದು ಹಾಗೂ ಸ್ಥಳೀಯವಾಗಿ ಸಂಸ್ಕರಣಾ ಮತ್ತು ಶೀಥಲೀಕರಣ ಘಟಕಗಳ ಸ್ಥಾಪನೆಯಾಗಿ ಇಲ್ಲಿನ ಜನರಿಗೆ ವಿಪುಲ ಉದ್ಯೋಗ ಅವಕಾಶಗಳ ಸೃಷ್ಟಿಯಾಗುತ್ತವೆ ಎಂದು ವಿವರಿಸಿದರು.ಜೈನ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಿಶ್ವೇಂದ್ರ ಸಿಂಗ್ ಮಾತನಾಡಿ, ಜಮೀನುಗಳಿಗೆ ಅಳವಡಿಸಿರುವ ಸೂಕ್ಷ್ಮ ನೀರಾವರಿ ಉಪಕರಣಗಳನ್ನು ನಾಶಪಡಿಸದೇ ಹಾಗೆಯೇ ಸಂರಕ್ಷಣೆ ಮಾಡಿಕೊಳ್ಳಬಹುದು ರೈತರ ಜವಾಬ್ದಾರಿ ಎಂದರು.
ಬೇಸಾಯ ತಜ್ಞ ಎ.ಜಿ.ಬಂಡಿ ಸೂಕ್ಷ್ಮ ನೀರಾವರಿ ಯೋಜನೆ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು. ಜೈನ್ ಸಂಸ್ಥೆ ವ್ಯವಸ್ಥಾಪಕ ಗುರುದತ್ತ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಸಿ.ಆರ್.ಬಾಬು ಕೃಷ್ಣದೇವ್, ಸಹಾಯಕ ಎಂಜಿನಿಯರ್ ಪಿ.ಎಸ್.ಗೋಪಿನಾಥ್, ಎಸ್.ಭರತೇಶ್ ಕುಮಾರ್ ಹಾಗೂ ಕ್ಷೇತ್ರ ಸಂಯೋಜಕರು ಭಾಗಿಯಾಗಿದ್ದರು.