ಸಮಾಜದ ಅಭಿವೃದ್ಧಿ ಜ್ಞಾನದಿಂದ ಮಾತ್ರ ಸಾಧ್ಯ

| Published : Feb 02 2025, 01:00 AM IST

ಸಮಾಜದ ಅಭಿವೃದ್ಧಿ ಜ್ಞಾನದಿಂದ ಮಾತ್ರ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಸಮಾಜ ಪ್ರಗತಿಯ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದನ್ನು ಗಮನಿಸಬಹುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮೈಲಿಗೆಯನ್ನು ಮಡಿ ಮಾಡುವಂತಹ ವೃತ್ತಿಯಲ್ಲಿ ಜನಿಸಿದ, ತಳ ಸಮುದಾಯದ ಒಬ್ಬ ವ್ಯಕ್ತಿ 12ನೇ ಶತಮಾನದಲ್ಲಿನ ಸಮಾಜದಲಿದ್ದ ಕೆಲವು ಕೆಟ್ಟ ಮನಸ್ಥಿತಿಗಳ ಮನಸ್ಸುಗಳನ್ನು ತೊಳೆಯುವ ಕೆಲಸವನ್ನು ಮಡಿವಾಳ ಮಾಚಯ್ಯ ಅವರು ಮಾಡಿದರು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು. ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪರಿವರ್ತನೆಯ ಕಾಲ:

12ನೇ ಶತಮಾನ ಪರಿವರ್ತನೆಯ ಕಾಲ. ಒಂದು ಸಮಾಜ ಪ್ರಗತಿಯ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಅಂತಹ ಅಮೂಲ್ಯ ಕೊಡುಗೆಗೆ ಕಾರಣರಾದವರು ಮಾಚಯ್ಯನವರು ಒಬ್ಬರು ಎಂದರೆ ತಪ್ಪಾಗಲಾರದು ಎಂದರು. ನಮ್ಮ ಕುಟುಂಬ, ನಮ್ಮ ಸಮಾಜ ಪ್ರಗತಿ ಹೊಂದಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ. ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ವೃತ್ತಿಯಲ್ಲಿ ಬದಲಾವಣೆ ಕಾಣಲು ಸಾಧ್ಯ, ಕೆಳ ಸಮುದಾಯದ ಸಣ್ಣ ವೃತ್ತಿಯನ್ನೇ ಆವಲಂಬಿಸಿ ಮೈಲಿಗೆಯನ್ನು ಮಡಿಮಾಡುವಂತಹ ಮತ್ತು ಕೆಟ್ಟ ಮನಸ್ಸು , ಆಲೋಚನೆಗಳನ್ನು ತೊಳೆದು ಹಾಕುವಂತಹ ದಿಟ್ಟ ಕಾಯಕವನ್ನು ಇಟ್ಟುಕೊಂಡಂತಹ ವ್ಯಕ್ತಿ ಮಡಿವಾಳ ಮಾಚಿದೇವರು ಎಂದರು.

ಬದಲಾವಣೆ ಜ್ಞಾನದಿಂದ ಸಾಧ್ಯ

ಮಾಚಿ ದೇವರ ಅನುಮತಿ ಇಲ್ಲದೆ ಕಲ್ಯಾಣದಲ್ಲಿ ಯಾರೇ ಆಗಲಿ ಪ್ರವೇಶೀಸಬಾರದೆಂದು ಅಂತಹ ಜವಾಬ್ದಾರಿಯನ್ನು ಬಸವಣ್ಣನವರು ಅವರಿಗೆ ನೀಡಿದ್ದರು. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ, ಅನುಭವಮಂಟಪದಲ್ಲಿ ಇರುವ ಬೇರೆ ಬೇರೆ ವರ್ಗದ ಜನ ಜ್ಞಾನವಂತರಾಗಿದ್ದ ಅವರು ಒಳ್ಳೆ ರೀತಿ ಆಲೋಚನೆ ಮಾಡಿ. ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.ಮಾಡಿವಾಳ ಮಾಚಿದೇವರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಮಾಚಿದೇವರ ಪಾತ್ರ ಬಹಳ ಪ್ರಮುಖವಾದದ್ದು. ಅಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಯವರ ಆಶಯದಲ್ಲಿ ವಿದ್ಯಾಭ್ಯಾಸ ಪಡೆದರೂ ಸಹ ತನ್ನ ಕುಲವೃತ್ತಿಯನ್ನು ಬಿಡದೆ ನಿರ್ವಹಿಸುತ್ತಿದ್ದರು ಎಂದರು.

ಮಾಚಿದೇವರ ತತ್ವ ಪಾಲಿಸಿ

ಶ್ರೀ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮನಸೋತ ಮಾಚಿದೇವರು ಕಲ್ಯಾಣ ಪಟ್ಟಣವನ್ನು ಸೇರಿ ಶರಣರ ಬಟ್ಟೆಯನ್ನು ಮಡಿ ಮಾಡುವ ಸೇವೆ ಮಾಡುತ್ತಿದ್ದರು. ಕಾರ್ಯಕರ್ತರಾಗಿ ಹಾಗೂ ಅನುಭವ ಮಂಟಪದ ಶರಣರ ರಕ್ಷಕರಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಆದರ್ಶ, ತತ್ವ ಸಿದ್ಧಾಂತಗಳು ನಮಗೆ ಮಾದರಿಯಾಗಿದೆ ಎಂದರು.

ಮಡಿವಾಳರು ತಳ ಸಮುದಾಯದ ಒಂದು ವರ್ಗವಾಗಿದೆ. ಈ ವರ್ಗದವರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡಬೇಕು ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ನಿರ್ಮಾಣವಾಗಬೇಕು ಎಂದು ತಿಳಿಸಿ ಸಮುದಾಯದ ವಿವಿಧ ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟರು.

ಜನಾಂಗದ ಗಣ್ಯರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕ ವೆಂಕಟೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನೀರ್ದೆಶಕ ಎನ್.ರವಿಕುಮಾರ್, ಮಡಿವಾಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮೀನಾರಯಣಪ್ಪ, ತಾಲ್ಲೂಕು ಅಧ್ಯಕ್ಷ ಮುನಿನಾರಾಯಣ, ಸಮುದಾಯ ಮುಖಂಡರಾದ ಕೃಷ್ಣಪ್ಪ, ವೇಣು, ಸುಧಾಕರ್,ದಿನೇಶ್, ರಾಜಶೇಖರ್, ಚಂದ್ರಶೇಖರ್, ಸುಧಾಕರ್ ಹಾಗೂ ಸಮುದಾಯದ ಪದಾಧಿಕಾರಿಗಳು ಇದ್ದರು.